ಗಾಂಧಿ ಜಯಂತಿಯಂದು 'ವಂಶಿ'ಚಿತ್ರ ಬಿಡುಗಡೆ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಚಿತ್ರ 'ವಂಶಿ' ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಹಿಂದಿನ ಯೋಜನೆಯಂತೆ ಸೆಪ್ಟೆಂಬರ್ 12ರಂದು ಚಿತ್ರ ಬಿಡುಗಡೆಯಾಗಬೇಕಿತ್ತು.ಸೆಪ್ಟೆಂಬರ್ ತಿಂಗಳಲ್ಲಿ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ ಪಂದ್ಯ ನಡೆಯುವ ಕಾರಣ 'ವಂಶಿ' ಚಿತ್ರದ ಬಿಡುಗಡೆಯನ್ನು ಅಕ್ಟೋಬರ್ 2ಕ್ಕೆ ಮುಂದೂಡಲಾಗಿದೆ.
ವಂಶಿ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಚಿತ್ರ ನಿರ್ಮಾಣದ ನಂತರದ ಕೆಲಸಗಳಷ್ಟೇ ಬಾಕಿ ಉಳಿದಿವೆ. ಚಿತ್ರದ ಧ್ವನಿ ಸುರುಳಿ ಆನಂದ್ ಆಡಿಯೋ ಮೂಲಕ ಈಗಾಗಲೇ ಬಿಡುಗಡೆಯಾಗಿದ್ದು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಈ ಚಿತ್ರದಲ್ಲಿ ಪುನೀತ್ ಸಹ ಒಂದು ಹಾಡನ್ನು ಹಾಡಿದ್ದಾರೆ. 'ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ' ಎಂಬ ಸುಮಧುರ ಯುಗಳ ಗೀತೆಗೆ ಶ್ರೇಯಾ ಘೋಷಾಲ್ ಜತೆಯಾಗಿದ್ದಾರೆ.
ಪುನೀತ್ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ 'ಅಪ್ಪು' ಚಿತ್ರದಿಂದಲೂ ಹಂತಹಂತವಾಗಿ ಬೆಳೆಯುತ್ತಾ ಬಂದಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಶಿವರಾಜ್ ಕುಮಾರ್ ಅವರ ಚಿತ್ರದ ಹಾಡುಗಳನ್ನೂ ಮೀರಿಸುವ ಎತ್ತರಕ್ಕೆ ಪುನೀತ್ ಏರಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ, ಪ್ರಕಾಶ್ ನಿರ್ದೇಶನವಿದೆ. ಚಿತ್ರದ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿದ್ದು ನಿಖಿತಾ ನಾಯಕಿಯಾಗಿ ನಟಿಸಿದ್ದಾರೆ.
(ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications