»   » ಖೇಣಿ ರೋಡಲ್ಲಿ ಅಂಬಿ-ಭೀಮು-ಬಾಬು

ಖೇಣಿ ರೋಡಲ್ಲಿ ಅಂಬಿ-ಭೀಮು-ಬಾಬು

Posted By:
Subscribe to Filmibeat Kannada
*ಜಯಂತಿ

* ಅಂಬರೀಶ್ ದಾನಶೂರ ಕರ್ಣ. ಅವರು ಆಡುವ ಮಾತು ದೇವರ ಮಾತು.
* ಸಿನಿಮಾ ನಿರ್ದೇಶಕರು ನಾಯಕಿಯ ಜೊತೆ ಓಡಿಹೋಗುವ ಸ್ಥಿತಿಗೆ ಮುಟ್ಟಿದ್ದಾರೆ. ಇದು ಇವತ್ತಿನ ಚಿತ್ರೋದ್ಯಮ.
* ಪುಕ್ಕಟೆ ಸಿನಿಮಾ ಯಾರೂ ನೋಡಬೇಡಿ. ದುಡ್ಡು ಕೊಟ್ಟು ಟಿಕೇಟ್ ಖರೀದಿಸಿಯೇ ಚಿತ್ರ ನೋಡಿ.

ಮೇಲಿನ ಮೂರು ಅಣಿಮುತ್ತುಗಳನ್ನು ಉದುರಿಸಿದ್ದು ಉದ್ಯಮಿ ಖೇಣಿ. ನೈಸ್ ಖ್ಯಾತಿಯ ಖೇಣಿ! ಹೊಗಳುಭಟ್ಟನಂತೆ, ಚಿತ್ರೋದ್ಯಮದ ವಿಶ್ಲೇಷಕನಂತೆ ಹಾಗೂ ಉದ್ಯಮದ ಹಿತೈಷಿಯಂತೆ ಖೇಣಿ ನೈಸಾಗಿ ಮಾತನಾಡಿದರು. ಖೇಣಿ ಅಭಿಮಾನಿಗಳು ಚಪ್ಪಾಳೆ ತಟ್ಟಿದರು. ಅಭಿಮಾನಿಗಳ ಗುಂಪಿನಲ್ಲಿ ಗಣಿಧಣಿ ಅನಿಲ್ ಲಾಡ್ ಕೂಡ ಇದ್ದರು.

ಖೇಣಿ ವಾಕ್ ಲಹರಿ ಹರಿದದ್ದು 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್" ಸೀಡಿ ಹಾಗೂ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ. ಭೀಮೂಸ್ ರೋಚಕ ಸನ್ನಿವೇಶಗಳನ್ನು ಹೊಂದಿರುವ ಚಿತ್ರವಂತೆ. ಖೇಣಿ ಮಾತುಗಳಲ್ಲೂ ರೋಚಕತೆಯಿತ್ತು.

ಸದ್ಯಕ್ಕೆ ಬಿಡುವಾಗಿರುವ ಅಂಬರೀಷ್ ಮಾತನಾಡುವ ಮೂಡಿನಲ್ಲಿದ್ದರು. ಆ ಲಹರಿಯಲ್ಲೇ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಕಾಲನ್ನೂ ಲೈಟಾಗಿ ಎಳೆದರು. 'ಕಾಶ್ಮೀರದಲ್ಲಿ ಭೀಮು ಚಿತ್ರೀಕರಣ ನಡೆಸಲು ಫಾರೂಕ್ ಅಬ್ದುಲ್ಲಾ ಅವರಿಗೆ ಶಿಫಾರಸ್ ಮಾಡಿ ಅನುಮತಿ ದೊರಕಿಸಿಕೊಟ್ಟೆ. ಆದ್ರೆ ಈ ಬಾಬುಗೆ ಉಪಕಾರ ಸ್ಮರಣೆಯೇ ಇಲ್ಲ" ಎಂದರು ಅಂಬಿ. ಗೆಳೆಯ ತಮಾಷೆ ಮಾಡುತ್ತಿರಬೇಕು ಎನ್ನುವಂತೆ ಸಿಂಗ್ ಬಾಬು ನಕ್ಕರು.

ಅಂಬರೀಷ್ ಮಾತುಗಳಲ್ಲಿ ವೇದಾಂತವೂ ಇತ್ತು. 'ಪಾಲಿಗೆ ಬಂದದ್ದೇ ಪಂಚಾಮೃತ ಅಂತ ಬದುಕುತ್ತಿದ್ದೇನೆ" ಎಂದರು ಅಂಬಿ. ಅವರ ಮಾತುಗಳಲ್ಲಿ ರಾಜಕಾರಣದ ಕಹಿ ಕಾವೇರಿಯ ಆರ್ದ್ರತೆ ಇದ್ದಂತಿತ್ತು.

ಸಿಂಗ್ ಬಾಬು ಯಥಾಪ್ರಕಾರ ಎದೆಯುಬ್ಬಿಸಿ ಮಾತನಾಡಿದರು. 'ಯಾರಿಂದಲೂ ತಾವು ಕಲಿಯಬೇಕಾದ್ದು ಏನೂ ಇಲ್ಲ. ಭೀಮೂಸ್ ಗೆದ್ದೇ ತೀರುವ ನಂಬಿಕೆಯಿದೆ. ಮುಂದೆ ಇದರ ಎರಡನೇ ಭಾಗವನ್ನು ಸಿನಿಮಾ ಮಾಡುತ್ತೇನೆ" ಎಂದರು. ಬಾಬು ಮಾತಿನ ಬಾಣ ಯಾರನ್ನು ಕುರಿತದ್ದೋ? ಶಬ್ದವೇಧಿಯಲ್ಲಿ ಅವರು ನಿಸ್ಸೀಮರು!

ಅಂದಹಾಗೆ, ಉಪೇಂದ್ರ ಹಾಗೂ ರಮ್ಯ ಭೀಮೂಸ್‌ನ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಗ್ರಾಫಿಕ್ ತಂತ್ರಜ್ಞಾನಕ್ಕೆಂದೇ ಕೋಟ್ಯಂತರ ರೂಪಾಯಿ ಖರ್ಚುಮಾಡಲಾಗಿದೆಯಂತೆ. ಬಾಬು ಭೀಮಪಾಕ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಯಲಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada