For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಮತ್ತು ಸರಕಾರದ ನಡುವೆ ಜಟಾಪಟಿ

  By Staff
  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಹಮ್ಮಿಕೊಂಡಿರುವ ಫೆ.14ರ ಮುಷ್ಕರ ಎಷ್ಟು ಸರಿ? ಎಷ್ಟು ತಪ್ಪು? ಎಲ್ಲಾ ಕನ್ನಡ ಚಿತ್ರಗಳಿಗೂ ತೆರಿಗೆ ವಿನಾಯಿತಿ ಮತ್ತು ಸ್ವಮೇಕು ರೀಮೇಕು ಎನ್ನುವ ತಾರತಮ್ಯ ಮಾಡದೆ ಸಹಾಯಧನ ಕೊಡಬೇಕು ಎಂಬ ಬೇಡಿಕೆ ಸಾಧುವೆ? ಸಾಧ್ಯವೆ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ.

  ರೀಮೇಕು ಚಿತ್ರಗಳಿಗೆ ಅವಕಾಶ ಕೊಡಬಾರದು ಎಂಬ ಕೂಗು ಅನೇಕ ಕನ್ನಡ ಚಿತ್ರಪ್ರೇಮಿಗಳದ್ದು. ಕನ್ನಡದ ಸ್ವಂತ ಕಥೆಯನ್ನು ಆಧಾರಿಸಿದ, ಸ್ವತಂತ್ರವಾಗಿ ನಿರ್ಮಿಸಿದ ಚಿತ್ರಗಳನ್ನು ಮಾತ್ರ ಪ್ರೋತ್ಸಾಹಿಸಬೇಕು ಎನ್ನುವುದು ಅವರ ಆಗ್ರಹ. ಹೀಗಿರುವಾಗ, ರೀಮೇಕ್ ಚಿತ್ರಗಳಿಗೆ ಸರಕಾರದ ಸಹಾಯಧನ ಮತ್ತು ತೆರಿಗೆ ವಿನಾಯಿತಿ ಸವಲತ್ತುಗಳು ದಕ್ಕಬಾರದು ಎನ್ನುವುದು ಅವರ ವಾದ.

  ಆದರೆ, ಉದ್ಯಮದ ಅಳಿವು ಉಳಿವು ಮತ್ತು ನಿರ್ಮಾಪಕರ ಕಷ್ಟನಷ್ಟಗಳನ್ನು ಗಮನಿಸಿ ಎಲ್ಲಾ ಚಿತ್ರಗಳಿಗೂ ಏಕಪ್ರಕಾರವಾಗಿ ನೆರವು ಸಿಗಬೇಕು ಎಂದು ನಿರ್ಮಾಪಕರು ಕೇಳುತ್ತಾರೆ. ಇವರಲ್ಲಿ ರಿಮೇಕು ಚಿತ್ರಗಳನ್ನು ನಂಬಿಕೊಂಡಿರುವ ನಿರ್ಮಾಪಕರ ಧ್ವನಿ ಎತ್ತರದಲ್ಲಿ ಕೇಳಿಸುತ್ತಿದೆ. ಇವರೆಲ್ಲ ಸರಕಾರದ ವಿರುದ್ಧ, ಅಂದರೆ ವಾರ್ತಾ ಮತ್ತು ಪ್ರಚಾರ ಇಲಾಖೆಯ "ಜಿಗಟು" ಧೋರಣೆಯ ವಿರುದ್ಧ ಸಮರ ಸಾರಲು ಸನ್ನದ್ಧರಾಗಿದ್ದಾರೆ.

  ಕನ್ನಡ ಚಲನಚಿತ್ರೋದ್ಯಮದ ಬೆಳವಣಿಗೆ ಮತ್ತು ಅಭ್ಯುದಯದ ದೃಷ್ಟಿಯಿಂದ ಸರಕಾರವು ಪ್ರತಿಯೊಂದು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಆದರೆ, ಚಿತ್ರರಂಗದ ಅನೇಕ ಬೇಡಿಕೆಗಳನ್ನು ಸರಕಾರ ಆಲಿಸದೆ ಕಡೆಗಣಿಸುತ್ತಿದೆ ಎಂಬ ಆಪಾದನೆಯನ್ನು ಉದ್ಯಮ ಮಾಡುತ್ತಲೇ ಬಂದಿದೆ. ನಮ್ಮ ಮನವಿಗಳು ಯಾರ ಕಿವಿಗಳಿಗೂ ಬೀಳುತ್ತಿಲ್ಲ, ಆದ್ದರಿಂದ ಮುಷ್ಕರ ಹೂಡದೆ ವಿಧಿಯಿಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಸಂದೇಶ್ ನಾಗರಾಜ್ ದಟ್ಸ್ ಕನ್ನಡಕ್ಕೆ ತಿಳಿಸಿದರು.

  "ವಾರ್ತಾ ಮತ್ತು ಪ್ರಚಾರ ಇಲಾಖೆಯು ಎಲ್ಲಾ ಚಿತ್ರಗಳನ್ನು ಪ್ರೋತ್ಸಾಹಿಸಲು ಸಿದ್ಧವಿಲ್ಲ. ಯಾಕೆಂದರೆ, ಈಗಾಗಲೇ ಸರಕಾರ ನೀಡುತ್ತಿರುವ ನೆರವು ಹೆಚ್ಚು ಪ್ರಮಾಣದಲ್ಲಿದೆ. ಪ್ರತೀ ವರ್ಷ 30 ಚಿತ್ರಗಳಿದೆ ತಲಾ 10 ಲಕ್ಷರೂ.ನಂತೆ ಸಹಾಯ ಧನ, ಎರಡು ಉತ್ತಮ ಮಕ್ಕಳ ಚಿತ್ರಗಳಿಗೆ ತಲಾ 25 ಲಕ್ಷ ರೂಪಾಯಿ, ಉತ್ತಮ ಚಲನಚಿತ್ರಗಳಿಗೆ ವಾರ್ಷಿಕ ಪ್ರಶಸ್ತಿ ಜತೆಗೆ ನಗದು ಬಹುಮಾನ, ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಚಿತ್ರಗಳಿಗೆ ನಗದು ಬಹುಮಾನಗಳಲ್ಲದೆ, ಆಗಿಹೋದ ಚಿತ್ರರಂಗದ ಮಹಾನುಭಾವರ ಸ್ಮರಣಾರ್ಥ ಕೊಡಮಾಡುವ ನಗದು ಪ್ರಶಸ್ತಿಗಳ ಪಟ್ಟಿ ಸಾಕಷ್ಟು ದೊಡ್ಡದಾಗಿದೆ. ಹೀಗಿರುವಾಗ, ಎಲ್ಲಾ ಚಿತ್ರಗಳಿಗೂ ಸರಕಾರದ ಹಣ ಕೊಡುತ್ತಾ ಹೋದರೆ ಅದಕ್ಕೆ ಕೊನೆ ಎಲ್ಲಿದೆ? ಇಷ್ಟಕ್ಕೂ ಪ್ರಜೆಗಳು ತೆರುವ ಹಣವನ್ನು ಪ್ರೋತ್ಸಾಹದ ನೆಪದಲ್ಲಿ ದಾನ ಮಾಡುವುದು ಎಷ್ಟು ಸರಿ" ಎಂದು ಹೆಸರು ಹೇಳಲಿಚ್ಛಿಸದ ವಾರ್ತಾ ಇಲಾಖೆಯ ಅಧಿಕಾರಿಗಳೊಬ್ಬರು ಮರುಪ್ರಶ್ನೆ ಹಾಕುತ್ತಾರೆ.

  1966ರಿಂದ ಸರಕಾರವು ಕನ್ನಡ ಚಿತ್ರಗಳಿಗೆ ರಿಯಾಯ್ತಿ ವಿನಾಯಿತಿಗಳನ್ನು ಕೊಡುತ್ತಲೇ ಬಂದಿದೆ. ಶುದ್ಧ ವ್ಯಾಪಾರಿ ರಂಗವಾದ ಚಿತ್ರರಂಗಕ್ಕೆ ಸರಕಾರ ನೀಡುವ ನೆರವು ಪ್ರಮಾಣಕ್ಕೆ ಇತಿಮಿತಿ ಬೇಡವೇ ಎಂದು ಅವರು ಕೇಳುತ್ತಾರೆ. ವರ್ಷವೊಂದಕ್ಕೆ 100 ಚಿತ್ರಗಳು ನಿರ್ಮಾಣವಾದರೆ ಎಲ್ಲಾ ಚಿತ್ರಗಳಿಗೂ ತಲಾ 10 ಲಕ್ಷ, ಜತೆಗೆ ತೆರಿಗೆ ವಿನಾಯಿತಿ, ಪ್ರಶಸ್ತಿ ನಗದು ಬಹುಮಾನ ಕೊಟ್ಟರೆ ಜನ ಎನನ್ನುತ್ತಾರೆ ಎಂದರು ಆ ಅಧಿಕಾರಿ.

  ಸರಕಾರಕ್ಕೆ ಕೊಡುವ ಮನಸ್ಸಿದೆ ಆದರೆ ವಾರ್ತಾ ಇಲಾಖೆಯ ಸಿನಿಮಾ ವಿಭಾಗಕ್ಕೆ ಇಷ್ಟವಿಲ್ಲ , ಈ ಧೋರಣೆ ವಿರುದ್ಧ ನಮ್ಮ ಸಮರ ಎಂದು ಹೇಳಿರುವ ನಿರ್ಮಾಪಕರ ಸಂಘ ನಾಳೆ ಅಂದರೆ ಫೆ.14ರಂದು ಸಂಪೂರ್ಣ ಮುಷ್ಕರಕ್ಕೆ ಮುಂದಾಗಿದೆ. ಈ ಮುಶ್ಕರಕ್ಕೆ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಹಾಗೂ ಪ್ರದರ್ಶಕರ ಬೆಂಬಲವಿದೆ ಎಂದು ನಿರ್ಮಾಪಕರ ಸಂಘದ ಕಾರ್ಯದರ್ಶಿ ಜೋ ಸೈಮನ್ ದಟ್ಸ್ ಕನ್ನಡಕ್ಕೆ ತಿಳಿಸಿದರು.

  ಚಿತ್ರರಂಗ ಒಂದು ದಿನ ಸ್ಥಗಿತಗೊಂಡರೆ ಉಂಟಾಗುವ ನಷ್ಟ ಅಪಾರ. ಆದುದರಿಂದ ಮುಷ್ಕರದ ಸಾಧಕ ಬಾಧಕಗಳನ್ನೂ ಸಂಘ ಗಮನಿಸುತ್ತಿದೆ. ಇಂದು ಸಂಜೆ 4 ಗಂಟೆಗೆ ನಿರ್ಮಾಪಕರ ಸಂಘ ಮತ್ತೆ ಸಭೆ ಸೇರಲಿದ್ದು ಉದ್ದೇಶಿತ ಬಂದ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎದೂ ಜೋ ಸೈಮನ್ ಹೇಳಿದರು.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X