ಈ ವಾರ (ಅ. 14) ಚಿತ್ರಮಂದಿರದಲ್ಲಿ ರೀಮೇಕ್ ಪುತ್ರ!
ಈ ಶುಕ್ರವಾರ ಎಂದಿನಂತೆ ಕನ್ನಡಿಗರಿಗೆ ಹೊಸ ಚಿತ್ರಗಳ ಜಾತ್ರೆಯಿಲ್ಲ. ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರ 'ಪುತ್ರ' ಮಾತ್ರ. ದಿಗಂತ್-ಸುಪ್ರೀತಾ ಜೋಡಿಯ ಈ 'ಪುತ್ರ' ಉಮಾಕಾಂತ್ ನಿರ್ದೇಶಿಸಿರುವ ಸಿನಿಮಾ. ರೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಂಥೋಣಿಪಾಲ್ ಪುತ್ರ ಚಿತ್ರವನ್ನು ನಿರ್ಮಿಸಿದ್ದಾರೆ. ಟಿ.ಸತ್ಯನಾರಾಯಣರ ಸಹ ನಿರ್ಮಾಣವಿದೆ
ಈ ಚಿತ್ರ 5 ವರುಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ 'ಎಂಥನ್ ಮಗನ್' ರೀಮೇಕ್. ಮೂಲ ತಮಿಳು ಚಿತ್ರದಲ್ಲಿ ಭರತ್ ಮಾಡಿರುವ ಪಾತ್ರವನ್ನು ಇಲ್ಲಿ ದಿಗಂತ್ ಪೋಷಿಸಿದರೆ ಗೋಪಿಕಾ ಪಾತ್ರವನ್ನು ಸುಪ್ರೀತಾ ಮಾಡಿದ್ದಾರೆ. ಸುಪ್ರೀತಾ ಅಂದರೆ ಹಿಟ್ ಸಿನಿಮಾ 'ಅಂಬಾರಿ' ಸುಪ್ರೀತಾ, ನೆನಪಿದೆ ತಾನೇ?
ಇದು ತಂದೆ-ಮಗನ ಸಂಬಂಧದ ಬಗ್ಗೆ ಹೆಣೆಯಲಾಗಿರುವ ಚಿತ್ರಕಥೆಯಾಗಿದ್ದು ಕೊನೆಯಲ್ಲಿ ಭಾವನಾತ್ಮಕ ಯುದ್ಧವಿದೆ. ಮೂಲ ಚಿತ್ರದಲ್ಲಿರುವ 'ಕಿಸ್ಸಿಂಗ್ ಸೀನ್' ಗೆ ಇಲ್ಲಿ ದಿಗಂತ್ ಹಾಗೂ ಸುಪ್ರೀತಾ ತುಟಿಗಳು ಹೇಗೆ ನ್ಯಾಯ ಒದಗಿಸಿವೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದು ಹೇಗಿದೆ ಎಂಬುದನ್ನು ತೆರೆಯಮೇಲೆ ನೋಡಿ.
'ಅನುರಾಗ ಸಂಗಮ'ದಂತಹ ಸದಭಿರುಚಿ ಹಾಗೂ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿರುವ ನಿರ್ದೇಶಕ 'ಉಮಾಕಾಂತ್' ಈ ರೀಮೇಕ್ ಚಿತ್ರವನ್ನು ಹೇಗೆ ಮಾಡಿದ್ದಾರೆ ಎಂಬ ಕುತೂಹಲಕ್ಕೆ ಚಿತ್ರ ನೋಡಲೇಬೇಕು. ದಿಗಂತ್-ಸುಪ್ರೀತಾ ಜೋಡಿಯ ಮ್ಯಾಜಿಕ್ ಎಷ್ಟರಮಟ್ಟಿಗೆ ಜನರನ್ನು ಸೆಳೆಯಲು ಸಫಲವಾಗುತ್ತದೆ ಎನ್ನುವ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರವೂ ದೊರೆಯಲಿದೆ.
ಆರು ಹಾಡುಗಳಿರುವ ಈ ಚಿತ್ರಕ್ಕೆ ರಮೇಶ್‌ರಾಜಾ ಸಂಗೀತ ನೀಡಿದ್ದಾರೆ. ರವಿಸುವರ್ಣ ಛಾಯಾಗ್ರಹಣ, ಬಾಬುಖಾನ್ ಕಲಾನಿರ್ದೇಶನ, ಚಂದ್ರಮಯೂರ್ ಹಾಗೂ ರಾಜಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ಹಾಗೂ ರಾಮಣ್ಣನವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ದಿಗಂತ್, ಸುಪ್ರಿತಾ, ರೂಪಶ್ರೀ, ಅವಿನಾಶ್, ಟೆನ್ನಿಸ್‌ಕೃಷ್ಣ, ಸುಧಾಬೆಳವಾಡಿ, ಸುಂದರರಾಜ್ ಮುಂತಾದವರಿದ್ದಾರೆ.


Click it and Unblock the Notifications











