»   » ಬಣ್ಣದ ಲೋಕದ ಇಂದ್ರಛಾಪ ಇಂದ್ರಜಿತ್

ಬಣ್ಣದ ಲೋಕದ ಇಂದ್ರಛಾಪ ಇಂದ್ರಜಿತ್

Subscribe to Filmibeat Kannada

*ಜಯಂತಿ

Indrajit Lankesh
ಲಂಕೇಶರ ನೆರಳು. ಕ್ರಿಕೆಟ್, ಬ್ಯಾಡ್ಮಿಂಟನ್ ಚಟ, ಕ್ರೀಡಾಬರವಣಿಗೆಯ ಮೋಹ, ಸಾಹಿತಿಗಳ ಒಡನಾಟ, ದೊಡ್ಡವರ ಸಂಗ ಎಲ್ಲದರ ನಡುವೆ ಬೆಳೆದವರು ಇಂದ್ರಜಿತ್. 'ಆಲ್‌ರೌಂಡರ್" ಕ್ರೀಡಾ ಪತ್ರಿಕೆಯಲ್ಲಿ ಬರೆದ ಅನುಭವ ಅವರ ಬೆನ್ನಿಗಿತ್ತು. ಸುದೀಪ್ ತರಹದ ನಟರೊಟ್ಟಿಗೆ ಟೆನಿಸ್ ಆಡಿ ಬೆಳೆದ ಹುಡುಗನಿಗೆ ಮೊದಲಿಂದಲೂ ಸಿನಿಮಾ ಕಂಡರೆ ಬೆರಗು. ಕಥೆ ಹೇಳುವುದು ಅಪ್ಪನಿಂದ ಸಿದ್ಧಿಸಿದ ಕಲೆ. ಹಾಗೆ ಅವರು ಕಥೆ ಹೇಳುತ್ತಿದ್ದರು. ಅದನ್ನು ಪತ್ರಕರ್ತ ಸದಾಶಿವ ಶೆಣೈ ಕೇಳುತ್ತಿದ್ದರು. ಹಾಗೇ ಒಂದು ದಿನ ಸಿನಿಮಾ ನಿರ್ದೇಶಿಸುವ ಯೋಚನೆಯೂ ಮೊಳೆಯಿತು. ತತ್ಫಲವೇ 'ತುಂಟಾಟ".

ಬಾಲಿವುಡ್‌ನ 'ಕುಚ್ ಕುಚ್ ಹೋತಾ ಹೈ" ನೋಡಿ ಇಷ್ಟಪಟ್ಟಿದ್ದ ಇಂದ್ರಜಿತ್ ಅದೇ ಕಥೆಯನ್ನು ಹೋಲುವ ವಸ್ತುವನ್ನು 'ತುಂಟಾಟ"ಕ್ಕೆ ಇಟ್ಟುಕೊಂಡರು. ರೇಖಾ, ಅನಿರುದ್ಧ ಅಭಿನಯದ ಈ ಸಿನಿಮಾ ಹೆಚ್ಚು ಹಣ ಮಾಡದೇ ಹೋದರೂ ಇಂದ್ರಜಿತ್‌ಗೆ ನಿರ್ದೇಶಕನ ವೃತ್ತಿಪರತೆಯ ಪಟ್ಟ ಕಟ್ಟಿತು. ಆಮೇಲೆ ಸಿಕ್ಕಿದ್ದೇ ದರ್ಶನ್ ಕಾಲ್‌ಶೀಟ್. ಅಪ್ಪನ ಪತ್ರಿಕೆಯ ಹೆಸರನ್ನೇ ಇಟ್ಟು 'ಲಂಕೇಶ್ ಪತ್ರಿಕೆ" ಚಿತ್ರ ಬಂತು. ಪತ್ರಿಕೆಯ ಹೆಸರನ್ನು ಕೆಡಿಸಿದ ಚಿತ್ರ ಅಂತ ಕೆಲವರು ಲೇವಡಿ ಮಾಡಿದ್ದೂ ಉಂಟು. ಈ ಸಿನಿಮಾ ಹಣ ಹಾಗೂ ಕೀರ್ತಿ ಎರಡನ್ನೂ ತಂತು. ಮುಂದೆ 'ಮೊನಾಲಿಸಾ". ಇದು ಕಲಸುಮೇಲೋಗರದ ಸಿನಿಮಾ. ಧ್ಯಾನ್ ಹಾಗೂ ಸದಾ ಮುದ್ದುಮುಖಗಳನ್ನು ಸಾಕಷ್ಟು ಪ್ರೇಕ್ಷಕರನ್ನು ಸೆಳೆದದ್ದು ಸುಳ್ಳಲ್ಲ. ಈ ಸಿನಿಮಾಗೆ ರಾಜ್ಯಪ್ರಶಸ್ತಿಯೂ ಒಲಿಯಿತು, ವಿವಾದಗಳೂ ಬೆನ್ನುಹತ್ತಿದವು.

ಇಂದ್ರಜಿತ್‌ಗೆ ಖೇಣಿ ಪರಿಚಯವಾದ್ದದು 'ಐಶ್ವರ್ಯಾ" ಸಿನಿಮಾ ನಿರ್ದೇಶನದ ಹಂತದಲ್ಲಿ. ಅವರಿಗೆ ಚಿತ್ರದಲ್ಲಿ ಒಂದು ಪಾತ್ರವನ್ನೂ ದಯಪಾಲಿಸಿದರು. ಖೇಣಿಗೂ ಇಂದ್ರಜಿತ್ ವರಸೆ ಹಿಡಿಸಿತೋ ಏನೋ; ಇಬ್ಬರ ನಡುವೆ ವ್ಯವಹಾರ ಕುದುರಿತು.

ಬೇರೆಬೇರೆ ಚಿತ್ರಗಳ ದೃಶ್ಯಗಳನ್ನು ಕಡತಂದು ಸಿನಿಮಾ ನೇಯುವುದು ಇಂದ್ರಜಿತ್ ಜಾಯಮಾನ. 'ಐಶ್ವರ್ಯಾ"ದಲ್ಲಿ ಕೂಡ ನಾಲ್ಕಾರು ತೆಲುಗು ಚಿತ್ರಗಳ ಛಾಯೆ ಇತ್ತು. ಉಪೇಂದ್ರ ಜೊತೆ ದೀಪಿಕಾ ಪಡುಕೋಣೆ ನಟಿಸಿದ ಈ ಚಿತ್ರ ನಿರೀಕ್ಷಿಸಿದಷ್ಟು ಓಡಲಿಲ್ಲ. ಆದರೆ, ದೀಪಿಕಾ ಸಿನಿಮಾ ಕೆರಿಯರ್ರಿಗೆ ಸೋಪಾನವಾದದ್ದಂತೂ ನಿಜ. ಅದಕ್ಕಿಂತ ಮಿಗಿಲಾಗಿ ವಿತರಕರಾಗಿ ಖುದ್ದು ಇಂದ್ರಜಿತ್ ಒಂದಿಷ್ಟು ಕಾಸು ಮಾಡಿಕೊಂಡರು!

ದೊಡ್ಡ ಕುಳ ಖೇಣಿ ಈಗ ಇಂದ್ರಜಿತ್ ಮೇಲೆ ಮುರಕೊಂಡು ಬೀಳುತ್ತಿದ್ದಾರೆ. ಅದಕ್ಕೆ ಕಾರಣ ಇದ್ದೇಇದೆ. ಅಂದಹಾಗೆ, ಇಂದ್ರಜಿತ್ ಅವರ ವೆಬ್‌ಸೈಟ್ www.indrajitlankesh.comಕೂಡ ಉಂಟು. ಅದು ಡೌನ್‌ಲೋಡ್ ಆಗುವವರೆಗೆ ಕಾಯುವ ತಾಳ್ಮೆ ಬೇಕಷ್ಟೆ!

ಪೂರಕ ಓದಿಗೆ

ನೈಸ್ ರೋಡಿನಲ್ಲಿ ಜಾರಿದರೆ ಇಂದ್ರಜಿತ್?
ಖೇಣಿಯಿಂದ ಸಿದ್ಧಗಂಗಾ ಶ್ರೀಗಳ ಧಾರಾವಾಹಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada