ತೆಲುಗು ಬೆಳ್ಳಿತೆರೆಗೆ ಕನ್ನಡ ತಂಗಿ ರಾಧಿಕಾ ರಂಗ ಪ್ರವೇಶ
ಕನ್ನಡ ಬೆಳ್ಳಿ ಪರದೆ ಮೇಲೆ ತಂಗಿಯಾಗಿ ಮೆರಿದಿದ್ದ ರಾಧಿಕಾ ದಿಢೀರ್ ಪ್ರತ್ಯಕ್ಷವಾಗಿದ್ದಾರೆ! ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ರಾಧಿಕಾ ಬೇರೆ ಬೇರೆ ಕಾರಣಗಳಿಂದ ಜನಪ್ರಿಯರಾಗಿದ್ದರು. ರಾಧಿಕಾಗೆ ಸಂತಾನಭಾಗ್ಯ ಧಕ್ಕಿದ ಮೇಲಂತೂ ಇನ್ನು ಬೆಳ್ಳಿತೆರೆಗೆ ಹಿಂತಿರುಗುವುದು ದೂರದ ಮಾತೇ ಆಗಿತ್ತು.
ಎಲ್ಲರ ಊಹೆ ತಲೆಕೆಳಗಾಗುವಂತೆ ರಾಧಿಕಾ ಬೆಳ್ಳಿತೆರೆಗೆ ಮರಳಿದ್ದಾರೆ. ಆದರೆ ಈ ಬಾರಿ ಅವರು ಅಲಂಕರಿಸುತ್ತಿರುವುದು ಕನ್ನಡ ಬೆಳ್ಳಿಪರದೆಯಲ್ಲ ತೆಲುಗು ತೆರೆ! ಇದು ಹಳೇ ಕಮಿಂಟ್‌ಮೆಂಟ್ ಅಂತೆ. ಹಾಗಾಗಿ ಚಿತ್ರದಲ್ಲಿ ಅಭಿನಯಿಸುವುದು ಅನಿವಾರ್ಯ ಎನ್ನುತ್ತಾರೆ ಅವರು.
ಬಾಣಂತಿತನ ಎಲ್ಲ ಮುಗಿಸಿಕೊಂಡು ರಾಧಿಕಾ ಈಗ ಮುಕ್ತರಾಗಿದ್ದಾರೆ. ಹಾಗಾಗಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ತೆಲುಗಿನ ಈ ಚಿತ್ರವನ್ನು ಕೋಡಿ ರಾಮಕೃಷ್ಣ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶೀರ್ಷಿಕೆ ಇನ್ನೂ ಇಟ್ಟಿಲ್ಲ. ಕಳೆದ ಎರಡು ಮೂರು ದಿನಗಳಿಂದ ಮೇಲುಕೋಟೆ ಮತ್ತು ನಂದಿಗ್ರಾಮದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. 'ಬೇಬಿ' ಶ್ಯಾಮಿಲಿ ಸಹೋದರ ರಿಷಿಚಿತ್ರದ ನಾಯಕ ನಟ.
"ಈ ಚಿತ್ರದಲ್ಲಿ ನಾನು ದೇವರ ಭಕ್ತೆಯಾಗಿ ಕಾಣಿಸುತ್ತಿದ್ದೇನೆ. ನನ್ನ ಸ್ವಭಾವಕ್ಕೆ ಒಪ್ಪುವ ಪಾತ್ರ. ಈಗಾಗಲೆ ಇಂತಹ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ಅಂತಹದ್ದೇ ಮತ್ತೊಂದು ಪಾತ್ರದಲ್ಲಿ ನಟಿಸುತ್ತಿದ್ದೇನೆ. ಲಂಗ ಧಾವಣಿಯಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿರುವುದಾಗಿ" ರಾಧಿಕಾ ತಿಳಿಸಿದ್ದಾರೆ.
ಆಕೆ ಅಭಿನಯ 'ಈಶ್ವರ' ಚಿತ್ರಕ್ಕೆ ಇನ್ನೂ ಬಿಡುಗಡೆ ಭಾಗ್ಯ ಸಿಗದೆ ಹರೋ ಹರ ಎಂಬಂತಾಗಿತ್ತು. ಚಿತ್ರದ ನಾಯಕಿ ರಾಧಿಕಾ ತಾಯ್ತನ, ಬಾಣಂತನ ಎಂದು ಬ್ಯುಸಿಯಾಗಿದ್ದೇ ಇದಕ್ಕೆ ಕಾರಣ. ಈಗ ಜನವರಿಯಲ್ಲಿ 'ಈಶ್ವರ'ನಿಗೆ ಮೋಕ್ಷ ಸಿಗಲಿದೆ ಎನ್ನುತ್ತವೆ ಮೂಲಗಳು.
ಅಂದಹಾಗೆ ರಾಧಿಕಾ ಚಿತ್ರೀಕರಣಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಮೂಲಗಳ ಪ್ರಕಾರ, ಬಹುತೇಕ ಭದ್ರತಾ ಸಿಬ್ಬಂದಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಡೆಯವರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಅವರ 'ಆಪ್ತ'ರ ಉಪಸ್ಥಿತಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.


Click it and Unblock the Notifications











