»   » ಸಿನಿಮಾ ಹೆಸರು? ಗುಟ್ಟು ಸಾರ್ ಗುಟ್ಟು!

ಸಿನಿಮಾ ಹೆಸರು? ಗುಟ್ಟು ಸಾರ್ ಗುಟ್ಟು!

Posted By:
Subscribe to Filmibeat Kannada
producer sl kumar's new movie
*ಜಯಂತಿ

ಎರಡನೇ ಪಿಯುಸಿ ಪರೀಕ್ಷೆ ಜ್ವರ ನಿಧಾನವಾಗಿ ಶುರುವಾಗುತ್ತಿದೆ. ಆದರೆ ಮೋನಿಷಾಳಿಗೆ ಪರೀಕ್ಷೆಯ ಭಯ ಇದ್ದಂತಿರಲಿಲ್ಲ. ಆಕೆ ಸಿನಿಮಾ ಪರೀಕ್ಷೆ ತೆಗೆದುಕೊಂಡ ರೋಮಾಂಚನದಲ್ಲಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಮೋನಿಷಾಗೆ ಕಿರುತೆರೆಯಲ್ಲಿ ನಟಿಸಿರುವ ಅನುಭವಿ! ಅವಕಾಶ ಬಂದಾಗಿ ಬಣ್ಣಹಚ್ಚಬೇಕು ಎನ್ನೋದು ಅವರು ನೆಚ್ಚಿರುವ ನೀತಿ. ಮುರುಗೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್.ಎಲ್.ಕುಮಾರ್ ನಿರ್ದೇಶಿಸುತ್ತಿದ್ದಾರೆ.

ಸಿನಿಮಾ ಹೆಸರೇನು? 'ಅದು ಗುಟ್ಟು" ಎಂದರು ಕುಮಾರ್. ನಾಯಕ ನಾಯಕಿಯನ್ನು ಗುಟ್ಟಾಗಿಟ್ಟವರಿದ್ದಾರೆ. ಕಥೆಯ ಎಳೆ ಬಿಟ್ಟುಕೊಡದರಿದ್ದಾರೆ. ಆದರೆ ಕುಮಾರ್ ಸಿನಿಮಾದ ಶೀರ್ಷಿಕೆಯನ್ನೇ ಹೊಟ್ಟೆಯಲ್ಲಿಟ್ಟುಕೊಂಡಿದ್ದರು. ಅವರೊಂಥರಾ ಡಿಫರೆಂಟು!

'ತಬ್ಬಲಿ ಹುಡುಗನನ್ನು ಸಮಾಜ ಹೇಗೆ ನೋಡುತ್ತದೆ? ಪರಿಸ್ಥಿತಿಯ ಸುಳಿಗೆ ಸಿಕ್ಕ ಆ ಹುಡುಗ ಏನಾಗುತ್ತಾನೆ?" ಈ ಎರಡು ಪ್ರಶ್ನೆಗಳ ಸುತ್ತ ಸಿನಿಮಾ ಕಥೆ ಗಿರಕಿ ಹೊಡೆಯುತ್ತದಂತೆ. ಅಲ್ಲಿಗೆ ಹೊಡಿಬಡಿ ಸಾಲಿನ ಚಿತ್ರಗಳಿಗೆ ಇನ್ನೊಂದು ಸೇರ್ಪಡೆ ಎಂದಾಯಿತು. ಆದರೂ 'ನಮ್ಮದು ಡಿಫರೆಂಟು" ಎಂದರು ನಿರ್ದೇಶಕರು.

ರವಿ ಚಿತ್ರದ ನಾಯಕ. ಸಿನಿಮಾಕ್ಕೆಂದು ಬಣ್ಣ ಹಚ್ಚುತ್ತಿರುವುದು ಇದೇ ಮೊದಲು. ಚೊಚ್ಚಲ ಯತ್ನದಲ್ಲೇ ಸೆಂಚುರಿ ಬಾರಿಸುವ ಹುಮ್ಮಸ್ಸು ಅವರದ್ದು. ಆದರೂ ಸೆಕೆಂಡ್ ಪಿಯುಸಿ ಮೋನಿಷಾ ಸನ್ನಿಧಾನದಲ್ಲಿ ರವಿ ಕೊಂಚ ನಾಚಿಕೊಂಡಂತಿತ್ತು.

ನಿರ್ದೇಶಕ ಕುಮಾರ್ ಚಿತ್ರರಂಗದಲ್ಲಿ ಸಾಕಷ್ಟು ನೀರು ಕುಡಿದಿದ್ದಾರೆ. ಬಿ.ರಾಮಮೂರ್ತಿ, ಜಿ.ಕೆ.ಮುದ್ದುರಾಜ್ ಬಳಿ ಸಹಾಯಕರಾಗಿ ದುಡಿದಿದ್ದಾರೆ. ಇನ್ನು ನಿರ್ಮಾಪಕ ಮುರುಗೇಶ್ ಕಳೆದ ಒಂದೂವರೆ ದಶಕದಿಂದ 'ಕಲಾಪ್ರಿಯ ಆರ್ಟ್ಸ್" ಎನ್ನುವ ಸಂಸ್ಥೆ ನಡೆಸುತ್ತಿದ್ದಾರೆ. ಆ ಕಾರಣದಿಂದಲೇ ಅವರು ಕಲಾಪ್ರಿಯ ಮುರುಗೇಶ್!

ಹೆಸರು ಗುಟ್ಟಾಗಿರುವ ಚಿತ್ರದ ಮುಹೂರ್ತ ನಡೆದದ್ದು ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ. ಹಿರಿಯ ನಗೆನಟ ಉಮೇಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಒಳ್ಳೇದಾಗಲಿ ಎಂದು ನಕ್ಕರು.

ಒಟ್ಟು ನಲವತ್ತೈದು ದಿನ ಚಿತ್ರೀಕರಣ. ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ ಮುಂತಾದ ಕಡೆ ಶೂಟಿಂಗ್ ನಡೆಯಲಿದೆ. ರಾಮ್‌ಕಿಶೋರ್, ಚಿತ್ರಾ ಶೆಣೈ, ಎಂ.ಎಸ್.ಉಮೇಶ್, ಶೋಭರಾಜ್, ಶಂಕರ ಭಟ್, ಬುಲೆಟ್ ಪ್ರಕಾಶ್, ಪದ್ಮಜಾ ರಾವ್ ತಾರಾಗಣದಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada