ದೇವೀರಿ ಖ್ಯಾತಿಯ ನಂದಿತಾ ದಾಸ್ ಗೆ ಗಂಡು ಮಗು
'ಫೈರ್' ಬ್ರಾಂಡ್ ನಂದಿತಾದಾಸ್(41) ಅಮ್ಮನಾಗಿದ್ದಾರೆ. ಬುಧವಾರ ಬೆಳಗ್ಗೆ 10.45ಕ್ಕೆ ಸರಿಯಾಗಿ ಆಕೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿಸುದ್ದಿ ತಿಳಿಯುತ್ತಿದ್ದಂತೆ ನಂದಿತಾ ಹಾಗೂ ಆಕೆಯ ಪತಿ ಸುಭೋದ್ ಮಸ್ಕರ ಅವರ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು.
"ನಮಗೆ ತುಂಬ ಸಂತೋಷವಾಗಿದೆ. ಮಗು ಮತ್ತು ನಂದಿತಾ ಇಬ್ಬರೂ ಆರೋಗ್ಯವಾಗಿದ್ದಾರೆ" ಎಂದು ಉದ್ಯಮಿಯೂ ಆಗಿರುವ ಆಕೆಯ ಪತಿ ಸುಭೋದ್ ಮಸ್ಕರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಗಂಡು ಮಗುವೆ ಆಗಬೇಕು ಎಂದು ನಾವೇನು ಬಯಸಿರಲಿಲ್ಲ. ಆರೋಗ್ಯದಿಂದಿರುವ ಮಗುವೊಂದನ್ನು ಬಯಸಿದ್ದೆವು ಎಂದಿದ್ದಾರೆ.
ಸುಭೋದ್ ಮತ್ತು ನಂದಿತಾ ಪ್ರೇಮ ವಿವಾಹವಾಗಿದ್ದರು. ಜನವರಿ, 2010ರಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಈ ಹಿಂದೆ ಆಕೆಯ ಬಹುಕಾಲದ ಗೆಳೆಯ ಸೌಮ್ಯ ಸೇನ್ ರನ್ನು 2002ರಲ್ಲಿ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ 2009ರಲ್ಲಿ ವಿವಾಹ ವಿಚ್ಛೇದನ ಪಡೆದಿದ್ದರು.
1999ರಲ್ಲಿ 'ದೇವೀರಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ನಂದಿತಾ ದಾಸ್ ಕನ್ನಡಿಗರಿಗೆ ಪರಿಚಯವಾಗಿದ್ದರು. ದಿವಂಗತ ಪಿ ಲಂಕೇಶ್ ಅವರ 'ಅಕ್ಕ' ಕಾದಂಬರಿ ಆಧಾರಿತವಾಗಿ 'ದೇವೀರಿ' ಚಿತ್ರವನ್ನು ಕವಿತಾ ಲಂಕೇಶ್ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ 1999-2000 ಸಾಲಿನ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.


Click it and Unblock the Notifications











