ಕರಿಯ ದುನಿಯಾ ವಿಜಯ್ ಹಿಂದೆ ಕಾವೇರಿ
ಹುಡುಗ ಹುಡುಗಿಯನ್ನು ಪ್ರೀತಿಸುವುದು ನ್ಯಾಚುರಲ್. ಆದರೆ ಹುಡುಗಿಯೊಬ್ಬಳು ಹುಡುಗನ ಹಿಂದೆ ಬೀಳುವುದು ಸ್ವಲ್ಪ ವಿರಳ. ಅಂದರೆ ಈ ರೀತಿಯ ಚಿತ್ರಗಳು ಬಂದಿಲ್ಲ ಎಂದರ್ಥವಲ್ಲ. ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಅವುಗಳಲ್ಲಿ ಕೆಲವು ಗೆದ್ದಿವೆ, ಕೆಲವು ಮಕಾಡೆ ಮಲಗಿವೆ.
ಈಗ 'ಬ್ಲ್ಯಾಕ್ ಕೋಬ್ರಾ' ವಿಜಯ್ ಅದೇ ರೀತಿಯ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಕಾವೇರಿ ಲವ್ಸ್ ಕರಿಯ'. ಶೀರ್ಷಿಕೆ ನೋಡಿದರೆ ಒಳ್ಳೆ ಕಾಮಿಡಿ ಚಿತ್ರದಂತಿದೆ. ಆದರೆ ಇದು ಪಕ್ಕಾ ಲವ್ ಸ್ಟೋರಿ. ಚಿತ್ರದ ನಾಯಕಿ 'ಕಾವೇರಿ' ಪಾತ್ರಕ್ಕೆ ಹುಡುಕಾಟ ನಡೆದಿದೆ.
'ಕಾವೇರಿ ಲವ್ಸ್ ಕರಿಯ' ಚಿತ್ರದ ನಿರ್ಮಾಪಕರು ಎಂ ಬದ್ರಿ. ವಿ ಹರಿಕೃಷ್ಣ ಸಂಗೀತ, ಜಗದೀಶ್ ವಾಲಿ ಅವರ ಛಾಯಾಗ್ರಹಣ, ದೀಪು ಎಸ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಎಸ್ ರಮೇಶ್ ಅವರ ಕಥೆ ಹಾಗೂ ಸಂಭಾಷಣೆ ಚಿತ್ರಕ್ಕಿದೆ. ಚಿತ್ರದ ಉಳಿದ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಕಾವೇರಿಗಾಗಿ ಕರಿಯನ ಹುಡುಕಾಟವೆ ಚಿತ್ರದ ಒನ್ ಲೈನ್ ಸ್ಟೋರಿ. ಲವ್ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಗಳನ್ನು ಹೊಂದಿರುವ ಚಿತ್ರವಿದು. ಸೆಪ್ಟೆಂಬರ್ ಮೊದಲ ವಾರ 'ಕಾವೇರಿ ಲವ್ಸ್ ಕರಿಯ'ನಿಗೆ ಗ್ರೀನ್ ಸಿಗ್ನಲ್ ಸಿಗಲಿದೆ. ಅಂದಹಾಗೆ ಈ ಚಿತ್ರಕ್ಕೆ ಸಾಯಿ ರಮೇಶ್ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.


Click it and Unblock the Notifications











