»   » ಮೋಹನ ಮುರಲಿ ಮನೋಮೂರ್ತಿ ಜನುಮದಿನ

ಮೋಹನ ಮುರಲಿ ಮನೋಮೂರ್ತಿ ಜನುಮದಿನ

Subscribe to Filmibeat Kannada

ಬೆಂಗಳೂರು, ಜ.13: ಮನೋಮೂರ್ತಿ ಎಂದೇ ಸುಪರಿಚಿತರಾದ ಮನೋಹರಮೂರ್ತಿ ಅವರ ಹುಟ್ಟುಹಬ್ಬ ಇಂದು(ಜ.13). ಅಮೆರಿಕ ಅಮೆರಿಕಾದ ನೂರು ಜನುಮಕು, ನನ್ನ ಪ್ರೀತಿಯ ಹುಡುಗಿಯ ಕಾರ್ ಕಾರ್, ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು, ಕುಣಿದು ಕುಣಿದು ಬಾರೆ, ಒಂದೇ ಒಂದು ಸಾರಿ, ಮುಂಗಾರು ಮಳೆಯೇ... ಈ ಹಾಡುಗಳು ಕಿವಿಗೆ ಬೀಳುತ್ತಿದ್ದರೆ ಮನದಲ್ಲಿ ಉಲ್ಲಾಸದ ಹೂಮಳೆ ಸುರಿದು ಎಂತವರನ್ನೂ ಗೆಲುವಾಗಿಸುತ್ತದೆ! ಆ ಟ್ಯೂನ್‌ಗಳ ಹಿಂದಿನ ಮೋಡಿಯೇ ಹಾಗೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ! ಅಮೆರಿಕಾ!! ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದ ಮೂರ್ತಿ ನಂತರ ಹರಿಸಿದ್ದು ಸಂಗೀತ ಸುಧೆ. ಮೂರ್ತಿಯವರ ಹಾಡುಗಳನ್ನು ಕೇಳಿದವರಿಗೆ ಏನೋ ಒಂದು ರೀತಿಯ ಶಕ್ತಿ ಸಂಚಯವಾಗುತ್ತದೆ. ಅವರ ಶ್ರಮ ನಿಜಕ್ಕೂ ಸಾರ್ಥಕ. ಆದರೆ, ಇತ್ತೀಚೆಗೆ ಮುಂಗಾರು ಮಳೆ ಚಿತ್ರದ ಸಂಗೀತವನ್ನು 'ವಾನಾ' ಎಂಬ ತೆಲುಗು ಚಿತ್ರದಲ್ಲಿ ಬಳಸಿಕೊಂಡಿದ್ದರು. ಧ್ವನಿಸುರುಳಿಯಲ್ಲಿ ನನ್ನ ಹೆಸರನ್ನು ನೀಡುವ ಸೌಜನ್ಯತೆಯನ್ನು ಅವರು ತೋರಿಸಿಲ್ಲ. ಇದು ಪೈರೆಸಿಗಿಂತಾ ನೀಚವಾದ ಕೆಲಸ. ಸೃಜನಶೀಲ ಕೃತಿಯೊಂದನ್ನು ಹಗಲು ಹೊತ್ತಿನಲ್ಲೇ ಹರಣ ಮಾಡಿದಂತಾಗಿದೆ. ಯಾರದೋ ಮಗುವನ್ನು ಎತ್ತಿಕೊಂಡು ಹೋಗಿ ತಮ್ಮದೇ ಆ ಮಗು ಎನ್ನುವಂತಿದೆ ಈ ಪ್ರಸಂಗ ಎಂದು ನೊಂದು ನುಡಿದಿದ್ದರು ಮೂರ್ತಿ.

ಉಸ್ತಾದ್ ಜಾಕಿರ್ ಹುಸೇನ್ ಬಳಿ ಹಿಂದೂಸ್ತಾನಿ ತಬಲಾ, ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತ ಮನೋ ಮೂರ್ತಿ ಸಂಗೀತ ಸಂಯೋಜಿಸಿದ ಚಿತ್ರಗಳು ಹೀಗಿವೆ. ಅಮೆರಿಕ ಅಮೆರಿಕ, ನನ್ನ ಪ್ರೀತಿಯ ಹುಡುಗಿ, ಪ್ರೀತಿ ಪ್ರೇಮ ಪ್ರಣಯ, ಅಮೃತಧಾರೆ, ಜೋಕ್ ಫಾಲ್ಸ್, ಮುಂಗಾರು ಮಳೆ, ಚೆಲುವಿನ ಚಿತ್ತಾರ, ಮಾತಾಡ್ ಮಾತಾಡ್ ಮಲ್ಲಿಗೆ, ಗೆಳೆಯ, ಮಿಲನ, ಹೆತ್ತರೆ ಹೆಣ್ಣನ್ನೇ ಹೆರಬೇಕು, ಈ ಬಂಧನ. ಅವರ ಸಂಗೀತ ಸಂಯೋಜನೆಯಲ್ಲಿ ಮತ್ತಷ್ಟು ಮಳೆ ಸುರಿದು ನೂರು ಜನುಮಕು ನೂರಾರು ಜನುಮಕು ಮೆಲುಕು ಹಾಕುವ ಹಾಡುಗಳು ಮತ್ತಷ್ಟು ಬರಲಿ, ಸೆಳೆಯುತಿರಲಿ ಅವರ ಮೋಹನ ಮುರಲಿ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada