twitter
    For Quick Alerts
    ALLOW NOTIFICATIONS  
    For Daily Alerts

    2002ನೇ ಇಸವಿಯ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದಾಗ ಗಿರೀಶ್‌ ಕಾಸರವಳ್ಳಿ ವಾದಿರಾಜ್‌ ಆಯ್ಕೆ ವಿರುದ್ಧ ಕೆಂಡಕಾರಿದ್ದುಂಟು. ಪ್ರಶಸ್ತಿ ಆಯ್ಕೆಯಲ್ಲಿ ದ್ವೀಪಕ್ಕೆ ಅನ್ಯಾಯವಾಯಿತು ಎನ್ನುವುದನ್ನು ವಾದಿರಾಜ್‌ ಈಗ ಒಪ್ಪಿಕೊಂಡಿದ್ದಾರೆ ; ತಾವು ಹಾಗೆ ಮಾಡಿದ್ದೇಕೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

    By Staff
    |

    *ನಾಡಿಗೇರ್‌ ಚೇತನ್‌

    2002 ನೇ ಇಸವಿಯ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದಾಗ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ವಾದಿರಾಜ್‌ ಮೇಲೆ ಹರಿಹಾಯ್ದವರೆಷ್ಟೊ. ಆಗ ಮುಗುಮ್ಮಾಗೇ ಇದ್ದು, ದುಃಖ ನುಂಗಿಕೊಂಡ ವಾದಿರಾಜ್‌ ನಿರ್ದೇಶಕರ ಜೊತೆಗಿನ ಸಂವಾದದಲ್ಲಿ ತಮ್ಮ ನೋವನ್ನು ಕಕ್ಕಿದರು. ಆ ಮೂಲಕ ಮಡುಗಟ್ಟಿದ್ದ ಅವರ ಅಸಹಾಯಕತೆ ವ್ಯಕ್ತವಾಯಿತು.

    ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ಚಿತ್ರಗಳ ನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನ ಸುಚಿತ್ರ ಫಿಲಂ ಸೊಸೈಟಿ ಭಾನುವಾರ(ಜ.12) ಏರ್ಪಡಿಸಿತ್ತು. ಅಲ್ಲಿ ವಾಸ್ತವವನ್ನು ವಾದಿರಾಜ್‌ ಹೊರಗೆಡವಿದ್ದು ಹೀಗೆ...

    • ‘ದ್ವೀಪ ಚಿತ್ರಕ್ಕೆ ಇನ್ನೂ 3 ಪ್ರಶಸ್ತಿಗಳು ಬರಬೇಕಿತ್ತು. ಇನ್ನೂ ಕೆಲವು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಬರಬೇಕಿತ್ತು.
    • ಅತಿಥಿ ಚಿತ್ರಕ್ಕೆ ಬಹಳ ಅನ್ಯಾಯವಾಗಿದೆ. ಬಹುಮತಕ್ಕೆ ನಾನು ತಲೆಬಾಗಬೇಕಾಯಿತು. ಬಹುಮತಕ್ಕೆ ಸಲಾಂ.
    • ಸಮಿತಿಯ ಪರವಾಗಿ ಎಲ್ಲ ತಪ್ಪುಗಳ ಹೊಣೆಯನ್ನು ನಾನು ಹೊರುತ್ತೇನೆ.
    • ಒತ್ತಡಕ್ಕೆ ಮಣಿಯದೇ ಇರುವ ಸದಸ್ಯರನ್ನು ಸರ್ಕಾರ ಆರಿಸಿ ಆಯ್ಕೆ ಸಮಿತಿಗೆ ಕಳುಹಿಸಬೇಕು. ಅರ್ಹ ಚಿತ್ರಗಳು, ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಸಮಿತಿ ಆರಿಸಿ ಪ್ರಶಸ್ತಿ ಕೊಡಬೇಕು.
    • ಆಗಿದ್ದು ಆಗಿ ಹೋಯ್ತು. ಈಗ ತುಂಬಾ ತಡವಾಗಿದೆ. ಮುಂದೆ ಇಂತಹ ತಪ್ಪುಗಳಾಗದ ಹಾಗೆ ಎಚ್ಚರವಹಿಸಬೇಕು. ಈ ಅನ್ಯಾಯ ನೋಡಿ ಬಹಳ ಬೇಸರಗೊಂಡಿದ್ದೆ. ಒಂದು ಹಂತದಲ್ಲಿ ಆಯ್ಕೆ ಸಮಿತಿಗೆ ರಾಜಿನಾಮೆ ಕೊಡಬೇಕು ಎಂದು ನಿರ್ಧರಿಸಿದ್ದೆ !
    • ದ್ವೀಪ ಚಿತ್ರಕ್ಕೆ ನಾ. ಡಿಸೋಜರ ಕಥೆ, ಶಶಿಧರ ಅಡಪರ ಕಲಾ ನಿರ್ದೇಶನ ಮತ್ತು ಅದರ ವಸ್ತ್ರ ವಿನ್ಯಾಸಕ್ಕೂ ಪ್ರಶಸ್ತಿ ಸಿಗಬೇಕಿತ್ತು. ಸಿಗದೆ ಇರುವುದು ವೈಯುಕ್ತಿಕವಾಗಿ ನನ್ನ ಸೋಲು, ಆಯ್ಕೆ ಸಮಿತಿಯದ್ದಲ್ಲ. ಇಂತಹ ಕೆಲವು ತಪ್ಪುಗಳಾಗಿದ್ದಕ್ಕೆ ಕ್ಷಮೆ ಕೋರುತ್ತೇನೆ.
    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್‌. ರಮೇಶ್‌ ಈ ಸಂವಾದ ಕಾರ್ಯಕ್ರಮನ್ನು ಉದ್ಘಾಟಿಸಿದರು. 2001-2002ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಚಿತ್ರಗಳ ನಿರ್ದೇಶಕರುಗಳಾದ ಗಿರೀಶ್‌ ಕಾಸರವಳ್ಳಿ, ಟಿ. ಎಸ್‌. ನಾಗಾಭರಣ, ಬಿ. ಆರ್‌. ಕೇಶವ್‌, ಸುಚಿತ್ರ ಫಿಲಂ ಸೊಸೈಟಿ ಅಧ್ಯಕ್ಷ ವಿ. ಎನ್‌. ಸುಬ್ಬರಾವ್‌ ಸಮಾರಂಭದಲ್ಲಿ ಹಾಜರಿದ್ದರು. ವಿ.ರವಿಚಂದ್ರನ್‌ ಬಂದಿರಲಿಲ್ಲ. ಬಹಳ ಗಡಿಬಿಡಿಯಲ್ಲಿದ್ದ ಎಸ್‌. ರಮೇಶ್‌ ಬಲು ಬೇಗ ಸಭೆಯಿಂದ ನಿರ್ಗಮಿಸಿದರು.

    ಪ್ರೇಕ್ಷಕರು ಗಿರೀಶ್‌ ಕಾಸರವಳ್ಳಿ ಮತ್ತು ಟಿ. ಎಸ್‌. ನಾಗಾಭರಣರತ್ತ ಅವರವರ ಚಿತ್ರಗಳ ಕುರಿತು ಸವಾಲುಗಳನ್ನು ಎಸೆದರು. ಇವುಗಳಿಗೆ ಸಿಕ್ಕಿದ ಜವಾಬುಗಳೂ ಸೊಗಸಾಗಿದ್ದವು. ನಿಮ್ಮ ಓದಿಗೆ ಕೆಲವು ಸ್ಯಾಂಪಲ್‌ಗಳು...

    ಭರಣಾಗೆ ಕೇಳಿದ ಪ್ರಶ್ನೆಗಳು :
    ನೀಲಾ ಚಿತ್ರದಲ್ಲಿ ಸಂಭಾಷಣೆ ಗ್ರಾಂಥಿಕವಾಯ್ತು?ಒಂದೊಂದು ಸಿನಿಮಾಗೆ ಒಂದೊಂದು style ಇರತ್ತೆ. ಇತ್ತೀಚಿನ ಚಿತ್ರಗಳ ಸಂಭಾಷಣೆಗೆ ಹೋಲಿಸಿ ನೋಡಿದರೆ ನಿಮಗೇ ಗೊತ್ತಾಗತ್ತೆ. ನೀಲಾ ಚಿತ್ರದ ಎಷ್ಟೋ ಪದಗಳನ್ನು ನಾವು ಮಾತಾಡೋದಿಲ್ಲ.

    ಆಸ್ಪತ್ರೆ ಸೀನ್‌ನಲ್ಲಿ ಅಷ್ಟೊಂದು ಗಂಭೀರವಾದ ಸನ್ನಿವೇಶದಲ್ಲೂ ವೈದ್ಯರ ಪಾತ್ರಧಾರಿಯಾದ ನೀವು ಹಾಡು ಹೇಳ್ತೀರಲ್ಲ. ಅದು ಬೇಕಿತ್ತಾ ?
    ಡಾ. ಬೆನಕಪ್ಪ ಅಂತ ಒಬ್ಬ ಡಾಕ್ಟ್ರಿದ್ದಾರೆ. ಅವರ ಹತ್ತಿರ ನೀವು ಹೋಗಿ ಬಂದರೆ, ಆಶ್ಚರ್ಯವಾಗಬಹುದು. ಅವರು ಹಾಡು ಗುನುಗುತ್ತಾ, ನಗಿಸುತ್ತಾ, ಸಂತೋಷವಾಗಿರ್ತಾರೆ. ನಗಿಸಿ, ತಾನೂ ಸಂತೋಷವಾಗಿರಬಲ್ಲ ವೈದ್ಯನ ಚಿಕಿತ್ಸೆ ಕಿಮ್ಮತ್ತೇ ಬೇರೆ.

    ಕಾಸರವಳ್ಳಿಗೆ ಕೇಳಿದ ಪ್ರಶ್ನೆಗಳು :
    ದ್ವೀಪ ಚಿತ್ರದಲ್ಲಿ ದುಗ್ಗಯ್ಯ (ವಾಸುದೇವ ರಾವ್‌) ನೀರು ಪಾಲಾಗೋಕೆ ಮುಂಚೆ ಆತ ಮೈಗೆ ಫ್ರೆಷ್‌ ಹೂವ ಸುತ್ತಿಕೊಂಡಿರುತ್ತಾನೆ. ಮುಳುಗಡೆಯ ಸ್ಥಿತಿಯಲ್ಲಿರುವ ಜಾಗದಲ್ಲಿ ಅಷ್ಟು ಹಸನಾದ ಹೂವು ಹೇಗೆ ಸಿಕ್ಕಿತು?
    ಅದು ಮಲೆನಾಡು. ದುಗ್ಗಯ್ಯ ಮುಳುಗೋಕೆ ಮುಂಚೆಯೂ ಇಡೀ ಸೀತಾ ಪರ್ವತ ಮುಳುಗಡೆಯಾಗಿರೋದಿಲ್ಲ. ಭೂತ ಆವಾಹಿಸಿಕೊಳ್ಳಬೇಕಾದಾಗ ಹೂಗಳನ್ನು ಸುತ್ತಿಕೊಳ್ಳುವುದು ಸಂಪ್ರದಾಯ. ಅಲ್ಲಿ ಖಂಡಿತ ಹೂವು ಸಿಗುವ ಸನ್ನಿವೇಶ ಇತ್ತು ಅನ್ನೋದು ನೀವು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಗುತ್ತೆ.

    ಇಡೀ ಚಿತ್ರವನ್ನು ನಾವೂ ಸಿಕ್ಕಾಪಟ್ಟೆ ಕಂಪ್ರೆಸ್‌ ಮಾಡಿದೀರಾ ಅನ್ನಿಸಲ್ವಾ? ಚಿತ್ರದಲ್ಲಿ ಸಂಗೀತ ಏನು ಹೇಳುತ್ತೆ?
    ದ್ವೀಪ ಚಿತ್ರವನ್ನು ಬಿಡಿಸಿ ಬಿಡಿಸಿ ಇನ್ನೂ ಮೂರು ಚಿತ್ರಗಳನ್ನಾಗಿ ತೋರಿಸಬಹುದಾಗಿತ್ತು. ಅಲ್ಲಿನ ಜನಜೀವನ, ಮುಳುಗಡೆಯ ಕಾಂಪೆನ್ಸೇಷನ್ನಿನ ಸಮಸ್ಯೆ... ಹೀಗೆ ಒಂದೊಂದೂ ವಿಷಯವನ್ನೂ ಸಿನಿಮಾ ಮಾಡಬಹುದಾಗಿತ್ತು. ಅಲ್ಲಿ ಮತ್ತೆ ‘ತಬರನ ಕಥೆ’ಯಂಥಾ ಕ್ಯಾನ್‌ವಾಸ್‌ ಮೂಡಬಹುದು ಅಂತ ಹಾಗೆ ಮಾಡಲಿಲ್ಲ. ಸಂಗೀತ ಚಿತ್ರಕ್ಕೆ ಪೂರಕವಾಗಿತ್ತು ಅಂತ ಮಾತ್ರ ಹೇಳಬಲ್ಲೆ.

    ಇಡೀ ಸಂವಾದ ಕಾರ್ಯಕ್ರಮ ಚಿತ್ರಗಳ ಹೂರಣವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಟ್ಟಿತು.

    ಅಂತರರಾಷ್ಟ್ರೀಯ ಚಿತ್ರೋತ್ಸವ :

    ಬರುವ ಮಾರ್ಚ್‌ 17ರಿಂದ 20ನೇ ತಾರೀಕಿನವರೆಗೆ ಬೆಂಗಳೂರಲ್ಲಿ ಖಾಸಗಿಯಾಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವುದಾಗಿ ಸುಚಿತ್ರಾ ಫಿಲಂ ಸೊಸೈಟಿ ಅಧ್ಯಕ್ಷ ವಿ.ಎನ್‌.ಸುಬ್ಬರಾವ್‌ ಹೇಳಿದರು. 20 ದೇಶಗಳ ವಿವಿಧ ಚಿತ್ರಗಳನ್ನು ಲಿಡೋ, ಸುಚಿತ್ರ ಮತ್ತು ಬಾದಾಮಿ ಥಿಯೇಟರುಗಳಲ್ಲಿ ಪ್ರದರ್ಶಿಸಲಾಗುವುದು. ಅಂದಹಾಗೆ, ಈ ಚಿತ್ರೋತ್ಸವದ ನಿರ್ದೇಶಕರು- ಗಿರೀಶ್‌ ಕಾಸರವಳ್ಳಿ.

    Post your views

    ಪೂರಕ ಓದಿಗೆ
    ಇಂಥದೊಂದು ಸಿನಿಮಾ ಬಂದು ಯಾವ ಕಾಲವಾಗಿತ್ತು ?
    ‘ನೀಲಾ’ಭರಣಾಗೊಂದು ಬಹಿರಂಗ ಪತ್ರ

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 11:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X