»   » ಹೆಗಡೆ : ಅಂಕದ ಪರದೆ ಜಾರಿದಮೇಲೆ..

ಹೆಗಡೆ : ಅಂಕದ ಪರದೆ ಜಾರಿದಮೇಲೆ..

Posted By: Super
Subscribe to Filmibeat Kannada

ಚಿತ್ರಲೋಕಕ್ಕೆ ಹೆಗಡೆ ಅವರ ರಾಜಕೀಯ ಕೊಡುಗೆ ಅಪಾರ. ಮುಖ್ಯಮಂತ್ರಿಯಗಿದ್ದ ಕಾಲದಲ್ಲಿ 'ಸಂಕೇತ್‌ ಸ್ಟುಡಿಯಾ"ಗೆ ಅನುದಾನ ಹೆಚ್ಚಿಸಿದುದಲ್ಲದೆ , ಹೆಸರಘಟ್ಟದಲ್ಲಿ 'ಕನ್ನಡ ಫಿಲ್ಮ್‌ ಸಿಟಿ " ಸ್ಥಾಪಿಸಲು ಸ್ಥಳ ಮಂಜೂರು ಮಾಡಿದ್ದರು. ಕೇಂದ್ರದಲ್ಲಿ ಸಚಿವರಾಗಿದ್ದಾಗ ಮೊದಲ ಬಾರಿಗೆ ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡಿದರು. ರಾಜಕೀಯದಲ್ಲಿ ಮಾತ್ರವಲ್ಲ , ಚಿತ್ರರಂಗದಲ್ಲೂ ಹೆಗಡೆಗೆ ಅಪಾರ ಅಭಿಮಾನಿ ಬಳಗ. ಅನಂತನಾಗ್‌ ಅವರ ಆಪ್ತ ಶಿಷ್ಯ. ಮು. ಮ. ಚಂದ್ರುವಿನ ರಾಜಕೀಯ ಪ್ರವೇಶಕ್ಕೆ ಈ ಗಡ್ಡಧಾರಿಯೇ ಪ್ರೇರಣೆ .

ನಟರಾಗಿ ಹೆಗಡೆ ಅಂತಹ ಒಳ್ಳೆಯ ಹೆಸರೇನೂ ಗಳಿಸಿರಲಿಲ್ಲ . ಚಿದಂಬರಶೆಟ್ಟಿ ನಿರ್ಮಾಣದ 'ಮರಣ ಮೃದಂಗ " ಹಾಗೂ 'ಪ್ರಜಾಶಕ್ತಿ" ಅವರ ಅಭಿನಯದ ಎರಡು ಚಿತ್ರಗಳು. ಎರಡೂ ಚಿತ್ರಗಳಲ್ಲಿ ಹೆಗಡೆ ಮಾತಿನಲ್ಲಿ ಪರವಾಗಿಲ್ಲ ಅನ್ನಿಸಿಕೊಂಡಿದ್ದರೇ ವಿನಃ, ಮುಖದಲ್ಲಿ ಭಾವನೆಯ ಗೆರೆಗಳೇ ಮೂಡುತ್ತಿರಲಿಲ್ಲ .

ಹೆಗಡೆ ಅವರ ನಿಧನದಿಂದಾಗಿ ಚಿತ್ರೋದ್ಯಮದ ಗಣ್ಯರು ಕೂಡ ಸಂಕಟಪಟ್ಟಿದ್ದಾರೆ. ವರನಟ ರಾಜ್‌ಕುಮಾರ್‌ ಹೆಗಡೆ ಅವರ ಅಂತಿಮದರ್ಶನಕ್ಕೆ ಆಗಮಿಸಿದ್ದ ಚಿತ್ರರಂಗದ ಪ್ರಮುಖರು. 'ಕೆಲವೇ ಕ್ಷಣಗಳು ಮಾತ್ರ ಹೆಗಡೆ ಅವರ ಜೊತೆ ಕಳೆದಿದ್ದರೂ, ಆ ಕ್ಷಣಗಳನ್ನು ಯಾವತ್ತಿಗೂ ಮರೆಯಲಾರೆ. ಅವರ ನಾಯಕತ್ವದ ಪ್ರಭಾವಲಯದಿಂದ ಹೊರಬರಲಾಗದು. ಹೆಗಡೆ ಅವರ ಅಗಲುವಿಕೆಯಿಂದ ತೀವ್ರ ದುಃಖವಾಗಿದೆ" ಎನ್ನುತ್ತಾರೆ ವಿಷ್ಣುವರ್ಧನ್‌.

ಅಂಬರೀಷ್‌ ಪಾಲಿಗಂತೂ ಹೆಗಡೆ ರಾಜಕೀಯ ಮಾರ್ಗದರ್ಶಿ. 'ಅವರು ನನ್ನ ಗುರು . ನಾನು ಅವರಿಂದ ಕಲಿತದ್ದು ಬಹಳ" ಎಂದು ಅಂಬರೀಷ್‌ ಕಂಬನಿಗರೆದರು.

ಸಾರ್ವಜನಿಕ ಬದುಕಿನಲ್ಲಿ ಹಗರಣಗಳು ಹೆಗಲೇರುವುದು ಮಾಮೂಲು. ಹೆಗಡೆ ಕೂಡ ಹಗರಣಮುಕ್ತರಲ್ಲ . ನೃತ್ಯಗಾರ್ತಿ ಪ್ರೊತಿಮಾ ಬೇಡಿಗೆ ಹೆಸರುಘಟ್ಟ ಭೂಮಿ ಮಂಜೂರು ಮಾಡಿದ ಹಾಗೂ ಮತ್ತೊಬ್ಬ ನೃತ್ಯಾಂಗನೆ ಪ್ರತಿಭಾ ಪ್ರಹ್ಲಾದ್‌ ಜೊತೆ ಸಂಬಂಧ ಹೊಂದಿದ್ದ ಆರೋಪಗಳು ಹೆಗಡೆ ಮೇಲಿವೆ. ಈ ದೃಷ್ಟಿಯಿಂದ ಕೂಡ ಹೆಗಡೆ ಅವರದು ವರ್ಣರಂಜಿತ ವ್ಯಕ್ತಿತ್ವ.

'ಮರಣ ಮೃದಂಗ" ಚಿತ್ರದಲ್ಲಿ ಕೂಡ ಹೆಗಡೆ ಅವರದ್ದು ದುರಂತ ಪಾತ್ರ. ವಿಧಾನ ಸೌಧದ ಮುಂಭಾಗದಲ್ಲಿಯೇ ಹೆಗಡೆ ಸಾವಿಗೀಡಾಗುತ್ತಾರೆ. ಈಗ ನಿಜ ಜೀವನದಲ್ಲಿಯೂ ಅವರ ಪಾತ್ರ ಮುಗಿದಿದೆ. ಬಣ್ಣಗಳು ಮಾತ್ರ ಉಳಿದಿವೆ !

English summary
Former chief minister of Karnataka late R.K. Hegde and Kannada celluloid

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada