»   » ಮಾ.9ರಂದು ಪ್ರೇಮ್‌-ರಕ್ಷಿತಾ ಮ್ಯಾರೇಜು ಗ್ಯಾರಂಟಿ

ಮಾ.9ರಂದು ಪ್ರೇಮ್‌-ರಕ್ಷಿತಾ ಮ್ಯಾರೇಜು ಗ್ಯಾರಂಟಿ

Subscribe to Filmibeat Kannada


ಪತ್ರಕರ್ತರ ಬಾಯಿಗೆ ಬೀಗ ಹಾಕಲು ಪ್ರೇಮ್‌-ರಕ್ಷಿತಾ ನಿರ್ಧರಿಸಿದ್ದಾರೆ. ಮಾರ್ಚಿ 9ರಂದು ಈ ಪ್ರೇಮಿಗಳು, ಹಸೆಮಣೆ ಹತ್ತುವುದರಲ್ಲಿ ಯಾವುದೇ ಅನುಮಾನವಿಲ್ಲ.... ‘ಪ್ರೇಮಿಗಳ ದಿನ’ಕ್ಕೆ ಮುನ್ನಾ ದಿನವಾದ ಮಂಗಳವಾರ ಈ ಸುದ್ದಿಯನ್ನು ಪ್ರೇಮ್‌ ಖಚಿತಪಡಿಸಿದ್ದಾರೆ...

‘ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರ ಮುಗಿಯುವ ಮೊದಲೇ ಪ್ರೇಮ್‌-ರಕ್ಷಿತಾ ಮದುವೆ ನಡೆಯಲಿದೆ. ಪ್ರೀತಿ ಏಕೆ ಭೂಮಿ ಮೇಲಿದೆ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಅವರು ಆತುರ ತೋರಿಸುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಪ್ರತಿಕ್ರಿಯೆ.

ಅದೇನೇ ಇರಲಿ ತಮ್ಮ ಮದುವೆ ಗುಟ್ಟನ್ನು ಪ್ರೇಮ್‌ ಮತ್ತು ರಕ್ಷಿತಾ ಮಂಗಳವಾರ ರಟ್ಟು ಮಾಡಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಭಾವಿ ದಂಪತಿಗಳು, ಮದುವೆ ಖುಷಿಯಲ್ಲಿದ್ದರು. ಸುದ್ದಿಗಾರರಿಗೆ ಅದ್ಧೂರಿಯ ಮದುವೆ ಕರೆಯೋಲೆಯನ್ನು ನೀಡಿ, ತಪ್ಪದೇ ಬರಬೇಕು ಎಂದು ಒತ್ತಿಒತ್ತಿ ಹೇಳಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಮಹಾಲಕ್ಷ್ಮೀ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮಾರ್ಚ್‌8ರಂದು ಆರತಕ್ಷತೆ ಹಾಗೂ 9ರಂದು ವಿವಾಹ ನಡೆಯಲಿದೆ ಎಂದು ಪ್ರೇಮ್‌ ಹೇಳಿದರು. ರಕ್ಷಿತಾ ತುಟಿ ಕಚ್ಚುತ್ತಲೇ, ಮುಖ ಅರಳಿಸಿದರು! ಆ ಕ್ಷಣವನ್ನು ಸೆರೆಯಿಡಿಯುವುದನ್ನು ಕ್ಯಾಮೆರಾಗಳು ಮಿಸ್‌ ಮಾಡಿಕೊಳ್ಳಲಿಲ್ಲ.

ಮಾದೇಶ ಚೆನ್ನಾಗಿಟ್ಟಿರಲಿ...

‘ಜೋಗಿ’ ಚಿತ್ರದ ಮೂಲಕ ಮಿಂಚಿದ ಪ್ರೇಮ್‌, ರಕ್ಷಿತಾರನ್ನು ಕೈಹಿಡಿಯುತ್ತಿದ್ದಾರೆ. ಈ ತಾರಾಜೋಡಿಯ ದಾಂಪತ್ಯ ಸುಖಮಯವಾಗಲಿ... ರಸಮಯವಾಗಲಿ... ಇದು ದಟ್ಸ್‌ಕನ್ನಡದ ಹಾರೈಕೆ.

ಅಂದ ಹಾಗೆ, ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ, ಮೋಹಿಸಿದವರು ಪ್ರೇಮ್‌-ರಕ್ಷಿತಾ. ಏನೋ ಬ್ರಹ್ಮ ರಹಸ್ಯವೇನೋ ಎಂಬಂತೆ ತಮ್ಮ ಪ್ರೀತಿಯನ್ನು ಕಪ್ಪೆಚಿಪ್ಪಿನಲ್ಲಿ ಮುಚ್ಚಿಟ್ಟಿದ್ದ ಈ ಜೋಡಿ, ಮದುವೆ ಬಗ್ಗೆಯೂ ಎಲ್ಲೂ ಮಾತನಾಡಿರಲಿಲ್ಲ. ಆದರೆ ಒಬ್ಬರ ಮೇಲೆ ಒಬ್ಬರು ಪ್ರೇಮದ ಮಳೆ ಸುರಿಸುತ್ತಿದ್ದರು! ಮೀಡಿಯಾಗಳ ಮುಂದೆಯೇ ಕಣ್ಣಾ ಮುಚ್ಚೆ ಕಾಡೇ ಗೂಡೇ ಆಡುತ್ತಿದ್ದರು!

ಮದುವೆ ನಂತರ ರಕ್ಷಿತಾ, ನಟನೆಗೆ ಮಂಗಳ ಹಾಡುವ ಮಾತಿಗೆ ಅಂಟಿಕೊಂಡಿದ್ದಾರೆ. ‘ಪ್ರೀತಿ ಏಕೆ ಭೂಮಿಮೇಲಿದೆ?’ ಚಿತ್ರದಲ್ಲಿ ನಟಿಸುವ ಸಾಧ್ಯತೆಗಳಿರುವುದರಿಂದ ಅದೇಕೊನೆ ಚಿತ್ರವಾಗಲಿದೆ.

ಭರದ ಸಿದ್ಧತೆ : ಮದುವೆಗೆ ಕೇವಲ ಆತ್ಮೀಯರು, ಬಂಧುಗಳಿಗೆ ಮಾತ್ರ ಆಹ್ವಾನ. ಚಿತ್ರೋದ್ಯಮದವರಿಗೆ ವಿಶೇಷ ಸಮಾರಂಭ ಏರ್ಪಡಿಸುವ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಎರಡೂ ಕುಟುಂಬಗಳಲ್ಲಿ ಮದುವೆ ಸಡಗರ ಪ್ರಾರಂಭವಾಗಿದೆ. ವಿವಾಹದ ಚುಕ್ಕಾಣಿಯನ್ನು ರಕ್ಷಿ ತಾ ತಾಯಿ ಮಮತಾರಾವ್‌ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada