»   » ವರನಟ ರಾಜ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ವರನಟ ರಾಜ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಅನೇಕ ವರ್ಷಗಳಿಂದ ಬಿಟ್ಟೂ ಬಿಡದೆ ಕಾಡುತ್ತಿದ್ದ ಮಂಡಿನೋವು ತಾರಕಾವಸ್ಥೆಗೆ ತಲುಪಿದ್ದರಿಂದ ಚೆನ್ನೈನ ಮಿಯೋಟ್‌ ಆಸ್ಪತ್ರೆಗೆ ದಾಖಲಾಗಿದ್ದ ವರನಟ ರಾಜ್‌ಕುಮಾರ್‌ ಅವರ ಎಡ ಪೃಷ್ಠದ ಶಸ್ತ್ರ ಚಿಕಿತ್ಸೆ ಗುರುವಾರ ಬೆಳಗ್ಗೆ ಯಶಸ್ವಿಯಾಗಿ ನಡೆಯಿತು.

ತೀವ್ರಗೊಂಡ ಮಂಡಿ ನೋವಿನಿಂದಾಗಿ ನಡೆದಾಡಲು ಕಷ್ಟಪಡುತ್ತಿದ್ದ ರಾಜ್‌ಕುಮಾರ್‌ ಅವರು ಮಾರ್ಚ್‌ 12ರ ಬುಧವಾರ ಚೆನ್ನೈನ ಮಿಯೋಟ್‌ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಬೆಳಗ್ಗೆ 1 ಗಂಟೆಗೂ ಹೆಚ್ಚು ಕಾಲ ಮಂಡಿ ಶಸ್ತ್ರ ಚಿಕಿತ್ಸೆ ನಡೆಯಿತು.

ರಾಜ್‌ ಅವರ ಎಡ ಪೃಷ್ಠದ ಶಸ್ತ್ರ ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ರಾಜ್‌ ಅವರು ಆರೋಗ್ಯವಾಗಿದ್ದಾರೆ ಎಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಪ್ರಖ್ಯಾತ ಕೀಲುತಜ್ಞ ಹಾಗೂ ಮಿಯೋಟ್‌ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಪಿ.ವಿ.ಎ.ಮೋಹನ್‌ದಾಸ್‌ ಶಸ್ತ್ರಚಿಕಿತ್ಸೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ರಾಜ್‌ ಅವರ ಎಡ ಪೃಷ್ಠದ ಕೀಲುಗಳನ್ನು ಪೂರ್ಣವಾಗಿ ಬದಲಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಬಲ ಮಂಡಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗುವುದು. ರಾಜ್‌ ಅವರಿಗೆ 74 ವರ್ಷ ವಯಸ್ಸಾಗಿರುವುದರಿಂದ, ಎರಡೂ ಮಂಡಿಯ ಶಸ್ತ್ರ ಚಿಕಿತ್ಸೆಯನ್ನು ಒಮ್ಮೆಗೇ ನಡೆಸದಿರಲು ನಿರ್ಧರಿಸಿದ್ದೇವೆ ಎಂದು ಮೋಹನ್‌ದಾಸ್‌ ಹೇಳಿದರು.

ರಾಜ್‌ ಅವರು 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರು.

ನರಹಂತಕ ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿದ್ದ ರಾಜ್‌ಕುಮಾರ್‌ 108 ದಿನಗಳನ್ನು ಅರಣ್ಯದಲ್ಲಿ ಕಳೆದಿದ್ದು , ಈ ದಿನಗಳಲ್ಲಿ ಕಾಡುಮೇಡು ಬೆಟ್ಟಗುಡ್ಡಗಳಲ್ಲಿನ ಅಲೆದಾಟವೇ ಮಂಡಿ ನೋವು ಉಲ್ಬಣಗೊಳ್ಳಲು ಕಾರಣವಾಗಿರಬಹುದು ಎಂದು ಡಾ.ಮೋಹನದಾಸ್‌ ಅಭಿಪ್ರಾಯಪಟ್ಟರು.

ಕಾಡಿನಲ್ಲಿದ್ದ ದಿನಗಳಲ್ಲಿ ಪದೇಪದೇ ಅಡಗುತಾಣ ಬದಲಿಸುತ್ತಿದ್ದ ವೀರಪ್ಪನ್‌, ಪ್ರತಿದಿನ 25ರಿಂದ 30 ಕಿಮೀ ರಾಜ್‌ ಅವರನ್ನು ಕಾಡಿನಲ್ಲಿ ನಡೆಸುತ್ತಿದ್ದ . ಕಾಡಿನಲ್ಲಿಯೇ ರಾಜ್‌ ಅವರ ಮಂಡಿನೋವು ಉಲ್ಬಣಗೊಂಡಿತ್ತು . ಆದರೆ, ವೀರಪ್ಪನ್‌ ಹಚ್ಚಿದ ಯಾವುದೋ ತೈಲದಿಂದ ಈ ನೋವು ನಿಯಂತ್ರಣಕ್ಕೆ ಬಂದಿತ್ತು ಎಂದು ನಾಡಿಗೆ ಮರಳಿದ ನಂತರ ರಾಜ್‌ ತಿಳಿಸಿದ್ದರು.

ಪಾರ್ವತಮ್ಮ ರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಅವರುಗಳು ರಾಜ್‌ ಅವರೊಂದಿಗೆ ಚೆನ್ನೈಗೆ ತೆರಳಿದ್ದಾರೆ.

ಬರುವ ಏಪ್ರಿಲ್‌ 24 ಕ್ಕೆ ರಾಜ್‌ಕುಮಾರ್‌ ತಮ್ಮ ಎಪ್ಪತ್ತೆೈದನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆ ವೇಳೆಗೆ ಮಂಡಿನೋವಿನಿಂದ ರಾಜ್‌ ಸಂಪೂರ್ಣ ಗುಣಮುಖರಾಗಲಿ ಎಂದು ಆಶಿಸೋಣ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada