»   » ಜಗ್ಗೇಶ್‌ ‘ಸೂಪರ್‌ ನನ್ಮಗ’ ನಾಗಿ ಬೆಳೆದ ಸೂಪರ್‌ ಕತೆ!

ಜಗ್ಗೇಶ್‌ ‘ಸೂಪರ್‌ ನನ್ಮಗ’ ನಾಗಿ ಬೆಳೆದ ಸೂಪರ್‌ ಕತೆ!

Subscribe to Filmibeat Kannada

‘ತರ್ಲೆ ನನ್ಮಗ’ನಾಗಿ ಬಂದು ‘ಮಠ’ದಲ್ಲಿ ಫಳಫಳನೆ, ಮಿರಮಿರನೆ ಮತ್ತು ಲಕಲಕನೆ ಮಿಂಚಿರುವ ಮತ್ತು ಮಿಂಚುತ್ತಿರುವ ಶ್ರೀ ಶ್ರೀ ಶ್ರೀ ಜಗ್ಗೇಶಾನಂದರಿಗೆ ಒಂದು, ಇನ್ನೊಂದು ಮತ್ತು ಹನ್ನೊಂದು ನಮಸ್ಕಾರಗಳು.

‘ಮಠ’ದ ಸ್ವಾಮ್ಗೊಳೆ, ಮೆಜೆಸ್ಟಿಕ್‌ನಲ್ಲಿ ಗಿರಗಿರಗಿರ ಸುತ್ತಿದ ನಂತರವೂ, ಮಠಕ್ಕೆ ಹೋಗಿ ಬಂದ ಅನಂತರ ನಾವು ಸಖತ್ತಂದ್ರೆ ಸಖತ್‌ ಖುಷಿಯಾಗಿದೀವಿ. ಬೆಂಗ್ಳೂರಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲೇ ಜಗ್ಗೇಶಾನಂದ ಸ್ವಾಮಿಗಳ ಕುರಿತು ಜನ ಅಬ್ಬಬ್ಬಬ್ಬಾ ಅಂತ ಮಾತಾಡ್ತಿರೋದು ಕಂಡು ಬೆರಗಾಗಿ ಹೋಗಿದೀವಿ...

ಜನ ಹೇಳ್ತಾನೇ ಇದಾರೆ- ಮಠ ನೋಡ್ದೇನಪ್ಪಾ? ನಮ್‌ ಜಗ್ಗೇಶು ಏನ್‌ ಮಾಡವ್ನೆ ಗೊತ್ತ? ಒಂದೊಂದು ದೃಶ್ಯದಲ್ಲೂ ನವರಸ, ನವರಸ ಕಲೆಯ ಪ್ರದರ್ಶನ ನೀಡಿದಾನೆ. ಅವನ ಮಾತು, ಸೂಪರ್ಬ್‌. ಫೇಸ್‌ ಎಕ್ಸ್‌ಪ್ರೆಶನ್ನು ಮತ್ತು ಬೊಂಬಾಟ್‌ ಎಂಬಂಥ ಡೈಲಾಗ್‌ ಡೆಲಿವರಿ, ತರಹೇವಾರಿ ಡ್ರೆಸ್ಸು, ಅದಕ್ಕೆ ಒಪ್ಪುವಂಥ ಮೇಕಪ್ಪು, ಎಲ್ಲಕ್ಕೂ ಮಿಗಿಲಾಗಿ ಡಿಂಗ್‌-ಡಾಂಗ್‌ ಡ್ಯಾನ್ಸು... ವಾಹ್‌ ವಾಹ್‌... ಜಗ್ಗೇಶು ಈ ಹೊತ್ತಿನ ಹಾಸ್ಯ ಸಾರ್ವಭೌಮ ಅನ್ನಲು ‘ಮಠ’ ಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ, ಬೇಕಿಲ್ಲ, ಬೇಕಿಲ್ಲ...

ತಮ್ಮ ಮಾತಿಗೆ ಯಾರೊಬ್ಬರೂ ಬ್ರೇಕ್‌ ಹಾಕದೆ ಹೀಗೆ ವಟ್ರ ವಟ್ರ ಮಾತಾಡುತ್ತ ಇದ್ದಾಗಲೇ ನಿಂಗೊಂದು ಕಲರ್‌ ಕಲರ್‌ ಪತ್ರ ಬರೀದಿದ್ರೆ ಹ್ಯಾಗೆ ಅನ್ನಿಸಿಬಿಡ್ತು ಕಣೋ ಜಗ್ಗೇಶಣ್ಣಾ...

*

ಜಗ್ಗೇಶಣ್ಣಾ, ಒಂದು ಕೆಲ್ಸ ಮಾಡುವ. ನೀನು ‘ಮಠ’ದಿಂದ ಸ್ವಲ್ಪ ಹೊತ್ತು ಹೊರಗಡೆ ಬಾ. ಹಳೆಯ ದಿನಗಳತ್ತ ತಿರುಗಿ ನೋಡೋಣ. ಈಗ ನೂರನೇ ಮೈಲಿಗಲ್ಲುನಲ್ಲಿ ನಿಂತು ಸುಮ್ನೇ ಹಿಂತಿರುಗಿ ನೋಡಿದ್ರೆ ನಿಂಗೂ ಒಂಥರಾ ಖುಷಿಯಾಗ್ತದೇನೋ, ಓಕೇನಾ? ಕೇಳು: ಹೌದಲ್ವ ಗುರೂ? ತುರವೇಕೆರೆಯ ಭೂಪ ನೀನು. ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ. ನಿಮ್ಮ ತಂದೆಗೆ- ಮಾಯಸಂದ್ರದಲ್ಲಿ ‘ಕೋಮಲ್‌’ ಹೆಸರಿನ ಥಿಯೇಟರ್ರೂ ಇತ್ತು. ಮಗ ಎಂಜಿನಿಯರ್‌ ಆಗಲಿ ಅಂತ ಆಸೆ ಇತ್ತು.

ನೀನೋ ಥಿಯೇಟರಿಗೆ ಬಂದ ಸಿನಿಮಾಗಳನ್ನೆಲ್ಲ ನೋಡಿ ನೋಡಿ ನೋಡೀೕೕ.... ಸೀದಾ ಗಾಂಧಿನಗರಕ್ಕೆ ಬಂದೆ. ಕಂಡಕಂಡವರ ಬಳಿ ಛಾನ್ಸು ಕೇಳಿದೆ. ಒಮ್ಮೆ ಪುಟ್ಟಣ್ಣ ಕಣಗಾಲರ ಹತ್ರ ಹೋದ್ರೆ- ಅವರು ಬಯ್ದು ಕಳಿಸಿದ್ರು. ಆಮೇಲೆ ಗಾಂಧಿನಗರದ ಮಂದಿ ‘ನಿನ್‌ ಮುಸುಡೀಗೆ ಯಾರಪ್ಪಾ ಪಾತ್ರ ಕೊಡ್ತಾರೇೕೕ’ ಎಂದು ಹೀಯಾಳಿಸಿದರು. ನಿನ್ನ ಮುಖದಲ್ಲಿ ಲುಕ್ಕೇ ಇಲ್ಲ. ನಿಂಗೆ ಲಕ್ಕೂ ಇಲ್ಲ. ಹೀಗಿರೋವಾಗ ಛಾನ್ಸ್‌ ಕೊಡೋದು ಹ್ಯಾಗೆ ಅಂದರು. ಭಂಡ ನೀನು. ಹಠ ಬಿಡಲಿಲ್ಲ, ಮತ್ತೆ ಮತ್ತೆ ಗಾಂಧಿನಗರದ ಮಂದಿಗೇ ಗಂಟು ಬಿದ್ದೆ. ಅದೊಂದು ದಿನ ಸಾಯಿ ಪ್ರಕಾಶ್‌ ನಿನ್ನನ್ನ ಕರೆದು- ‘ಮನ್ಮಥ ರಾಜ’ ಸಿನಿಮಾ ಮಾಡ್ತಿದೀನಿ. ಅದಕ್ಕೆ ನೀನೇ ಹೀರೋ ಅಂದರು!

ಅಷ್ಟಾದ ಮೇಲೆ ಗಾಂಧಿನಗರ ಬದಲಾಯಿತು. ಒಂದು ಕಾಲದಲ್ಲಿ ‘ನಿನ್ನ ಮುಸುಡಿಗೆ ಯಾರು ಪಾತ್ರ ಕೊಡ್ತಾರಯ್ಯಾ’ ಅಂದಿದ್ದವರೇ- ಅರರೆ, ಜಗ್ಗೇಶಲ್ವ? ಹುಡುಗ ಚುರುಕಾಗಿದಾನೆ. ಸ್ವಲ್ಪ ರಜನೀಕಾಂತ್‌ ಥರಾ ಇದಾನೆ. ಕುಳ್ಳ ಅನ್ನೋದು ಅವನ ವೀಕ್‌ನೆಸ್ಸು . ಛಲ ಆತನ ಸ್ಟ್ರೆಂತು ಎಂದೆಲ್ಲಾ ಮಾತಾಡಿದ್ರು. ನಂತರದ ದಿನಗಳಲ್ಲಿ ನೀನು ಅದೆಷ್ಟೋ ಸಿನಿಮಾಗಳಲ್ಲಿ ವಿಲನ್‌ ಆಗಿ, ಅದೇ ಟೈಮಲ್ಲಿ ಜೋಕರ್ರೂ ಆಗಿ ‘ಅಣ್ಣೋವ್‌, ಅಕ್ಕೋವ್‌...’ ಎಂದೆಲ್ಲಾ ಮಾತಾಡುತ್ತ ಕಡೆಗೆ ಹೀರೋಗಳ ಕೈಲಿ ಲಾತಾ ತಿಂತಿದ್ಯಲ್ಲ ಡಿಯರ್‌- ಆಗೆಲ್ಲ ಥಿಯೇಟರಿನಲ್ಲಿದ್ದ ಜನ ಖುಷಿ ಪಡ್ತಿದ್ರು. ಬಾಡಿ ಲಾಂಗ್ವೇಜ್‌ ಚೆನ್ನಾಗಿದ್ರೂ ನೀನು ‘ಬ್ಯಾಡ್‌ ಲಾಂಗ್ವೇಜ್‌’ ಬಳಸೋದು ಕಂಡರೂ...ಈ ಹುಡ್ಗ ಚೆನ್ನಾಗಿ ಆಕ್ಟಿಂಗ್‌ ಮಾಡ್ತದೆ ಅಂತಿದ್ರು...

ಒಂದಷ್ಟು ದಿನ ವಿಲನ್‌ ಪಾತ್ರದಲ್ಲೇ ಸೈಕಲ್‌ ಹೊಡೆದ ಮೇಲೇ ಪಟಾಪಟ್ಟಿ ನಿಕ್ಕರ್‌- ಬನಿಯನ್‌ ಹಾಕ್ಕೊಂಡು ‘ಭಂಡ ನನ್ನ ಗಂಡ’ದಲ್ಲಿ ಪಾತ್ರ ಮಾಡಿ, ಒಂದು ಹಾಡೂ ಹೇಳಿಬಿಟ್ಯಲ್ಲ ಜಗ್ಗೇಶಣ್ಣಾ; ಅವತ್ತು ನೋಡ್ಬೇಕಿತ್ತು ನೀನು... ಜನ ಚಪ್ಪಾಳೆ ಹೊಡೆದ್ರು. ಕೆಲವೊಂದು ಸಂದರ್ಭಗಳಲ್ಲಿ ನಟಿ ಅಂಬರೀಷ್‌ ನಿನ್ನ ಬೆನ್ನು ತಟ್ಟಿದಾಗ- ಓಹೋ, ಇವ್ನು ಅಂಬ್ರೀಷ್‌ ಕಡೇ ಹುಡ್ಗಾ. ಇವನನ್ನು ತಡೆಯೋಕೆ ಆಗಲ್ಲ ಅಂದುಕೊಂಡ್ರು. ಅದೇ ಸಮಯಕ್ಕೆ ನಿನ್ನ ಲವ್‌ ಮ್ಯಾರೇಜು ಸುಪ್ರೀಂಕೋರ್ಟಿನ ತನಕಾ ಹೋಗಿ ಅಲ್ಲೂ ನಿಂಗೆ ಗೆಲುವು ಸಿಕ್ಕಾಗ- ಬಾಪ್‌ರೇ, ಇವ್ನು ಸಿನಿಮಾದಲ್ಲಿ ಮಾತ್ರ ತರ್ಲೆ ನನ್ಮಗ. ಒರಿಜಿನಲ್ಲಿ ಲೈಫ್‌ನಲ್ಲಿ ಸೂಪರ್‌ ನನ್ಮಗ ಅಂದರು!

ಹೌದಲ್ವಾ ಜಗ್ಗೇಶಣ್ಣಾ? ಹೀಗೆ ಟೀಕೆ, ಹೊಗಳಿಕೆ ಎರಡನ್ನೂ ಸಮ ಪ್ರಮಾಣದಲ್ಲಿ ಪಡೆದುಕೊಂಡ ನೀನು- ಒಂದು ಕಾಲದಲ್ಲಿ ಐನೂರು ರೂಪಾಯಲ್ಲಿ ತಿಂಗಳು ತುಂಬಿಸ್ತಿದ್ದೆ. ಈಗ ಹತ್ರ ಹತ್ರ ಐವತ್ಸಾವ್ರ ಖರ್ಚು ಮಾಡೋ ಮಟ್ಟಕ್ಕೆ ಬೆಳೆದಿದ್ದೀಯ. ಮೊದಲು ಉಪೇಂದ್ರನ್ನ ಡೈರಕ್ಟರ್‌ ಮಾಡ್ದೆ. ಈಗ ಗುರುಗೆ ಛಾನ್ಸು ಕೊಟ್ಟಿದೀಯ. ಸಹ ಕಲಾವಿದರ ಕಷ್ಟಕ್ಕೂ ಆಗೀದೀ(ಯಂತೆ!) ಮಿನಿಮಮ್‌ ಗ್ಯಾರಂಟಿ ಹೀರೋ ಅನ್ನಿಸ್ಕೊಂಡಿದೀಯ. ಈಗ ನೋಡಿದ್ರೆ ಮಠದ ಮೂಲಕಾನೇ ಮನೆ ಮಂದಿಯ ಗೆದ್ದು- ಎಲ್ಲರಿಗೂ ನಗೆ ಗುಳಿಗೆ ತಿನ್ನಿಸಿ- ಹಿ ಹ್ಹಿ ಹ್ಹೀ, ಹಹ್ಹಹ್ಹಾ, ಹೆಹ್ಹೆಹ್ಹೆ, ಹೊಹ್ಹೋಹ್ಹೋೕೕ ಅಂತ ನಗಿಸಿ ನಗಿಸಿ ನಗಿಸಿ ನಗಿಸೀೕೕ...

***

ಜಗ್ಗೇಶಣ್ಣೋ, ಇದನ್ನೆಲ್ಲ ಖುಷಿಯಿಂದಲೇ ಹೇಳಿದ್ಮೇಲೆ ಕುತೂಹಲದಿಂದಲೇ ಕೇಳ್ತಾ ಇದೀನಿ. ಹೇಳು: ನಿಂಗೆ ಅದ್ಭುತ ಎಂಬಂಥ ಟೈಮಿಂಗ್‌ ಇದೆ. ಹ್ಯಾಗೆ ಮಾತಾಡಿದ್ರೆ ಜನ ನಗ್ತಾರೆ ಅನ್ನೋ ಗುಟ್ಟು ಗೊತ್ತಿದೆ. ಕೆಲವೊಂದು ಸಿನಿಮಾದಲ್ಲಿ ನೀನೇ ಡೈಲಾಗ್‌ ಬರೆದದ್ದೂ ಇದೆಯಂತಲ್ಲ, ಹೌದಾ? ಎಷ್ಟೋ ಬಾರಿ ಗಾಂಧೀನಗರದ ಜನರಿಂದಾನೇ ಮೋಸ ಹೋಗಿದ್ದೀಯಂತೆ? ನಿಜಾನ? ಈ ಮಾತು ಅತ್ಲಾಗಿರಲಿ. ಒಂದು ಇಂಪಾರ್ಟೆಂಟ್‌ ಮಾತು ಹೇಳೋದಿದೆ ಕೇಳು.

ಏನಪಾ ಅಂದ್ರೆ- ನೀನು ಈ ಹೊತ್ತಿನ ಹಾಸ್ಯ ಸಾರ್ವಭೌಮ, ನಿಜ. ನವರಸ ನಾಯಕ ಅನ್ನೋದೂ ನಿಜ. ಆದ್ರೆ ಜಗ್ಗೇಶಣ್ಣಾ, ಮನೆ ಮಂದಿಯೆಲ್ಲಾ ಕೂತು ನೋಡುವ ಹಾಗೆ ನಿನ್ನ ಅದೆಷ್ಟೋ ಸಿನಿಮಾ ಇರಲ್ಲ. ತುಂಬ ಸಲ ನೀನು ಡಬಲ್‌ ಮೀನಿಂಗ್‌ ಡೈಲಾಗ್‌ ಹೊಡೀತೀಯ. ಆವಾಗೆಲ್ಲ ಹಾಸ್ಯ ಅಪಹಾಸ್ಯವಾಗುತ್ತೆ. ಹೆಣ್ಣು ಮಕ್ಕಳು ಮುಖ ಮುಚ್ಚಿ ಕೂರುವ ಹಾಗಾಗುತ್ತೆ. ಪ್ರೀತಿಯಿಂದಾನೇ ಹೇಳ್ತಾ ಇದೀನಿ. ಡಬಲ್‌ ಮಿನಿಂಗ್‌ ಬ್ಯಾಡ ಗುರೂ...ನೀನು ‘ಅಕ್ಕೋವ್‌’ ಅಂದ್ರೆ ಸಾಕು. ನಮ್ಗೆ ನಗು ಬರುತ್ತೆ. ಅಂಥಾದ್ರಲ್ಲಿ ಆ ಕೆಟ್‌ ಮಾತೆಲ್ಲ ಯಾಕ್‌ ಬೇಕು? ಆಮೇಲೆ ಬಹುಪಾಲು ಎಲ್ಲ ಸಿನಿಮಾಗಳಲ್ಲಿ ಕನ್ನಡಮ್ಮನ ಸುಪತ್ರನ ಗೆಟಪ್ಪಲ್ಲೇ ಇರುವ ನೀನು- ಪರಭಾಷೆ ಬೆಡಗಿಯರನ್ನೇ ಕರೆ ತಂದು ಮೆರೆಸ್ತೀಯಲ್ಲ- ಇದು ಸರೀನಾ ಜಗ್ಗೇಶಣ್ಣ?

ಎಲ್ರೂ ಅಷ್ಟೆ . ನಿನ್ನನ್ನು ನಮ್‌ ಹುಡುಗ ಅಂತಾರೆ. ಅದೇ ಪ್ರೀತಿಯಿಂದ ಇಲ್ಲಿ ಏಕವಚನವಿದೆ. ಪ್ರತಿ ಮಾತಿನಲ್ಲೂ ಪ್ರೀತಿಯಿದೆ. ಒಂದಿಷ್ಟು ಹಿತವಚನವಿದೆ. ಪ್ರೀತಿಯಿಂದಾನೇ ಕೇಳಿಸ್ಕೋ. ನೂರನೇ ಸಿನಿಮಾದಲ್ಲಿ ಮಿಂಚಿದೆಯಲ್ಲ. ಅದರಪ್ಪನಂಗೆ 200ನೇ ಸಿನಿಮಾದಲ್ಲಿ ಮಿಂಚು.

ನಿನ್‌ ಚಿತ್ರ ಜೀವನಕ್ಕೆ ಅಡ್ಡಗಾಲು ಹಾಕಲು ಪ್ರಯತ್ನಿಸಿದವರ ಎದುರಿಗೇ ನಿಂಗೀಗ ‘ಮಠ’ದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೀತಿದೆ. ಅದನ್ನ ಕಂಡು ನಮ್‌ ಜಗ್ಗೇಶು‘ಸೂಪರ್‌ ನನ್ಮಗ’ ಅಂತ ಸಂತೋಷದಿಂದ ಹೇಳ್ತಾ ಪತ್ರ ಮುಗಿಸ್ತೀನಿ. ಪರವಾಗಿಲ್ಲ. ಮಠದಲ್ಲಿ ಕೂತೇ ಉತ್ರ ಬರಿ...

(ಸ್ನೇಹ ಸೇತು: ವಿಜಯ ಕರ್ನಾಟಕ )

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada