For Quick Alerts
ALLOW NOTIFICATIONS  
For Daily Alerts

ಒಬ್ಬ ಅಣ್ಣನಿದ್ದ, ಆತನೂ ನಿರ್ಗಮಿಸಿದ್ದಾನೆ !

By Staff
|
 • ರವಿ ಬೆಳಗೆರೆ
 • ಆತ ಮನೆಯ ಹಿರಿಯ. ಕೆಲವು ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್‌ ಆತನನ್ನು ಎತ್ತಿಕೊಂಡು ಹೋದಾಗ ಇಂದಲ್ಲ ನಾಳೆ ಅಣ್ಣ ಹಿಂತಿರುಗಿ ಬರುತ್ತಾನೆಂಬ ವಿಶ್ವಾಸವಾದರೂ ಇತ್ತು. ಇವತ್ತು ಅದೂ ಇಲ್ಲ. ಉಳಿದಿರುವುದು ಗಾಢ ದುಃಖ ಒಳಗೇ ತತ್ತರಿಸುವಂತೆ ಮಾಡುವ ವೇದನೆ ಟೀವಿಯಲ್ಲಿ ಪದೇ ಪದೆ ಕಾಣುವ ಪಾರ್ವತಮ್ಮನವರ, ಅವರ ಮಕ್ಕಳ ಹೃದಯ ವಿದ್ರಾವಕ ರೋದನ, ಬೀದಿಗಿಳಿದ ಅರಾಜಕ ಅಭಿಮಾನಿಗಳ ಅರ್ಥಹೀನ ಹಿಂಸಾಚಾರ. ಪಕ್ಕದ ಇನ್ನೊಂದು ಚಾನೆಲ್‌ನಲ್ಲಿ ರಾಜ್‌ ಕುಮಾರ್‌-ಭಾರತಿ ನಟಿಸಿದ ಚಿತ್ರಗಳ ಹಾಡುಗಳನ್ನು ಒಂದೇ ಸಮನೆ ಹಾಕುತ್ತಿದ್ದಾರೆ. ಅವುಗಳನ್ನು ನೋಡಿದರೂ ಕಣ್ಣು ತುಂಬಿ ಬರುತ್ತವೆ.

  ಒಳ್ಳೆಯದಕ್ಕೆ, ನೈತಿಕವಾದುದಕ್ಕೆ, ಸತ್ಯವಾದುದಕ್ಕೆ ಇನ್ನೊಂದು ಹೆಸರು ಎಂಬಂತೆ ನಟಿಸಿದವರು ಡಾ. ರಾಜ್‌ಕುಮಾರ್‌. ಅವರು ಒಂದೆಡೆ ಬಬ್ರುವಾಹನ, ಮಯೂರ, ವೀರ ಕೇಸರಿ, ರಣಧೀರ ಕಂಠೀರವ! ಇನ್ನೊಂದೆಡೆ ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ಭಕ್ತ ಕುಂಬಾರ! ಅವರು ಕನ್ನಡಿಗರ ಮನಗಳಲ್ಲಿ ಕಟ್ಟಿಕೊಂಡದ್ದು ಕಸ್ತೂರಿ ನಿವಾಸ! ಹೀಗಾಗಿಯೇ, ಆಡಿಸಿ ನೋಡಿದರೂ ಬೀಳಿಸಿ ನೋಡಿದರೂ, ಉರುಳಿ ಹೋಗದ ವ್ಯಕ್ತಿತ್ವ ಅವರದು.

  ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದಾಗ ಅವರನ್ನು ನಾನು ಕೇಳಿದ್ದೆ: ‘‘ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೀರಿ. ನಿಮಗೆ ಏನನ್ನಿಸುತ್ತಿದೆ?’’ ಅಂತ.

  ‘‘ನಂಗೆ ಗೊತ್ತೇ ಆಗಲಿಲ್ಲಾ. ಹಿಂದುಗಡೆಯಿಂದ ಯಾರೋ ಮುಂದಕ್ಕೆ ತಳ್ತಾ ಇದ್ರು. ಮೇಲಿನವರ್ಯಾರೋ ನೋಡಿ ಇವ್ನು ನಮ್ಮೋನು ಕಣ್ರೀ ಅಂತ ಕೈ ಹಿಡಿದು ಎಳೆದು ಎತ್ಕೊಂಡು ಬಿಟ್ರು. ಇಷ್ಟೆತ್ತರಕ್ಕೆ ಹತ್ತಿ ಬಂದೆ ಅನ್ನೋ ಆಯಾಸವೇ ನಂಗೆ ಗೊತ್ತಾಗಲಿಲ್ಲ...’’ ಅಂದಿದ್ದರು ರಾಜ್‌ಕುಮಾರ್‌

  ಅದು ಅವರ ದೊಡ್ಡತನ. ಎಷ್ಟು ಎತ್ತರಕ್ಕೆ ಬೆಳೆದ ನಂತರವೂ ನಾನು ಹಿಮಾಲಯಕ್ಕಿಂತ ಚಿಕ್ಕವನೇ ಎಂಬ ಪರಿವೆ ಉಳಿಸಿಕೊಂಡಿದ್ದ ಮಹನೀಯ. ಅವರ ಬದುಕಿನ ಅತಿ ದೊಡ್ಡ ಗಮನಾರ್ಹ ಅಂಶವೆಂದರೆ, ಅವರು ಯಾವತ್ತೋ ಕರ್ನಾಕದ ‘ರಾಜಕುಮಾರ’ನಾಗಬಹುದಿತ್ತು. ಆದರೆ ‘ರಾಜಕುಮಾರ’ನಾಗಿಯೇ ಉಳಿಯಬಯಸಿದರು. ಉಳಿದು ಬಿಟ್ಟರು. ತಮ್ಮದಲ್ಲದ ರಂಗಕ್ಕೆ ಹೋಗಿ ಅಗೌರವಿತರಾಗಕೂಡದು ಎಂಬ ಪ್ರಜ್ಞೆ ಅವರಲ್ಲಿತ್ತು. ಅಂತೆಯೇ, ತೆರೆಯ ಮೇಲೆ ತಾವು ವಹಿಸಿದ ಪಾತ್ರ ಪ್ರತಿನಿಧಿಸಿದ ಮೌಲ್ಯಗಳಿಗೆ ತದ್ವಿರುದ್ಧವಾಗಿ ಬದುಕಕೂಡದು ಎಂಬ ಅರಿವೂ ಅವರಿಗಿತ್ತು. ಚಿತ್ರರಂಗದ ಇತರರಂತೆ ರಾಜ್‌ಕುಮಾರ್‌ ಯಾವತ್ತಿಗೂ ತಮ್ಮ ಬಲಹೀನತೆಗಳ ಬಹಿರಂಗವಾಗಿ ಮೆರೆಯಗೊಟ್ಟವರಲ್ಲ.

  ರಾಜ್‌ಕುಮಾರ್‌ ಅವರ ಸೌಜನ್ಯ ಮತ್ತು ಅಮಾಯಕತೆ- ಎರಡೂ ಒಂದೇ ನಾಣ್ಯದ ಮುಖಗಳು. ಅವರ ಸೌಜನ್ಯ ಎಂಥದೆಂಬುದನ್ನು ಹತ್ತಿರದಿಂದ ನೋಡಿದವರಷ್ಟೇ ಬಲ್ಲರು. ಒಮ್ಮೆ ಅವರೊಂದಿಗೆ ಮಾತನಾಡುತ್ತ ಕುಳಿತಿದ್ದೆ. ಮಧ್ಯವಯಸ್ಕರೊಬ್ಬರು ಬಂದು ‘ನಮಸ್ಕಾರ’ ಅಂದರು. ಥಟ್ಟನೆ ರಾಜ್‌ಕುಮಾರ್‌ ನಿಂತು ಎರಡೂ ಕೈ ಮುಗಿದು ನಮಸ್ಕರಿಸಿ, ‘‘ಚೆನ್ನಾಗಿದ್ದೀರಾ?’ ಅಂದರು.

  ‘‘ಏನೋ ಅಣ್ಣಾ... ಹೀಗಿದ್ದೀನೀ... ರಿಟೈರಾಗಿ ಬಿಟ್ಟೆ’’ ಅಂದರು ಆತ.

  ‘‘ಹೌದೇ? ನೋಡಿ ನೋಡಿ, ಅದಕ್ಕೇ ಅಷ್ಟೊಂದು ಆರೋಗ್ಯವಾಗಿ ಕಾಣ್ತಿದೀರಾ? ಇನ್ಮೇಲೆ ಯಾವುದೇ ತರ್ಲೆ ತಾಪತ್ರಯಗಳಿಲ್ಲದೆ ಹಾಯಾಗಿದ್ದು ಬಿಡೀ... ಅಂದರು. ರಾಜ್‌ಕುಮಾರ್‌ ಅವರು ತಮ್ಮಲ್ಲಿಗೆ ಬರುತ್ತಿದ್ದ ಅಪರಿಚಿತ, ಅನಾಮಧೇಯರನ್ನೂ ಟ್ರೀಟ್‌ ಮಾಡುತ್ತಿದ್ದ ರೀತಿಯದು. ಬಂದವರನ್ನು ಗೌರವಿಸಬೇಕು. ಎದ್ದು ನಿಂತು ನಮಸ್ಕರಿಸಬೇಕು, ಒಳ್ಳೆ ಮಾತನಾಡಬೇಕು -ಅದು ಅವರಿಗೆ ಗೊತ್ತಾಗುತ್ತಿದ್ದುದು. ಕೆಲವೊಮ್ಮೆ ಇದು ಚಿಕ್ಕಪುಟ್ಟ ಯಡವಟ್ಟುಗಳಿಗೂ ಕಾರಣವಾಗಿಬಿಡುತ್ತಿತ್ತು.

  ಆಗಿನ್ನೂ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿರಲಿಲ್ಲ. ಆದರೆ ಸರಕಾರ ರಚಿಸುವುದು ಖಚಿತವಾಗಿತ್ತು. ಸರಕಾರ ರಚನೆಯಾದ ಮೇಲೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರಾಜ್‌ ಮನೆಗೆ ಭೇಟಿ ನೀಡುವುದು ವಾಡಿಕೆ ತಾನೆ? ಇವರು ಮೊದಲೇ ಹೋದರು. ಜತೆಯಲ್ಲಿ ಮುಖ್ಯಮಂತ್ರಿ ಚಂದ್ರು. ತುಂಬ ಹೊತ್ತು ಯಡಿಯೂರಪ್ಪನವರೊಂದಿಗೆ ಮಾತನಾಡಿದ ರಾಜ್‌ಕುಮಾರ್‌ ಕೇಳಿದ್ದು: ‘‘ಅಂದ್ಹಾಗೆ, ನಮ್ಮ ಯಡಿಯೂರಪ್ಪನವರದು ಯಾವ ಪಕ್ಷವೋ...?’’ ಇದು ಅವರ ಅಮಾಯಕತೆಗೆ ಸಾಕ್ಷಿ. ಅವರು ತಮ್ಮದೇ ಆದ ಪ್ರಪಂಚದಲ್ಲಿ ತನ್ಮಯರಾಗಿ ಬದುಕುತ್ತಿದ್ದುದಕ್ಕೆ ಸಾಕ್ಷಿ.

  ಚಿತ್ರವೊಂದರಲ್ಲಿ ಹೆಂಡದ ಲಾಬಿಯ ವಿರುದ್ಧ, ಮದ್ಯಪಾನದ ವಿರುದ್ಧ ಹೋರಾಡುವ ನಾಯಕನ ಪಾತ್ರ ಮಾಡಿದ ಡಾ. ರಾಜ್‌ಕುಮಾರ್‌, ಅದು ಬಿಡುಗಡೆಯಾದ ಹೊಸತರಲ್ಲೇ ಮೈಸೂರು ರಸ್ತೆಯಲ್ಲೊಂದು ಮದ್ಯದ ಡಿಸ್ಟಿಲರಿ ಕಾರ್ಖಾನೆಯ ಉದ್ಘಾಟನೆ ಮಾಡುವುದಿತ್ತು. ಹೀಗೆ ಮಾಡುವುದು, ನೀವು ತೆರೆಯ ಮೇಲೆ ಪ್ರತಿಪಾದಿಸಿದ ಮೌಲ್ಯಗಳಿಗೆ ವಿರುದ್ಧವಾದುದು ಎಂದು ಗೆಳೆಯರೊಬ್ಬರು ರಾಜ್‌ ಅವರ ತಮ್ಮ ವರದಪ್ಪನವರ ಮೂಲಕ ಹೇಳಿಸಿದರು. ‘ಉದ್ಘಾಟಿಸಿದರೆ ತಪ್ಪೇನಿದೆ? ಹೆಂಡ ಮಾರುವ ನಮ್ಮ ಕುಲಕಸುಬು ಅಂತ ಉಳಿದವರು ವಾದಿಸಿದರು. ತುಸು ಹೊತ್ತಿಗೆ ರಾಜ್‌ ಕೋಣೆಯಿಂದ ನಿರ್ಣಯ ಹೊರ ಬಂದಿತ್ತು: ‘‘ನನ್ನ ಪಾಲಿಗೆ ಮೌಲ್ಯ ದೊಡ್ಡದು. ನಾನು ಉದ್ಘಾಟಿಸುವುದಿಲ್ಲ!’’.

  ಅವರಿಗೆ ಎಲ್ಲ ಭಾಷೆಗಳಲ್ಲೂ ಸ್ನೇಹಿತರಿದ್ದರು. ನಟರು, ನಿರ್ದೇಶಕರು, ನಿರ್ಮಾಪಕರು ಇದ್ದರು. ಪೃಥ್ವಿರಾಜ್‌ ಕಪೂರ್‌ರಿಂದ ಹಿಡಿದು ಅಮಿತಾಭ್‌ ಬಚ್ಚನ್‌ ತನಕ: ಹಿಂದಿಯ ನಂಟಿತ್ತು. ತೆಲುಗಿನ ಅಕ್ಕಿನೇನಿ ನಾಗೇಶ್ವರರಾವ್‌, ತಮಿಳಿನ ರಜನಿಕಾಂತ್‌-ಹೀಗೆ ಅವರು ಬಯಸಿದ್ದರೆ ಪಕ್ಕದ ಮನೆಯ ಬಾಗಿಲು ಯಾವಾಗ ಬೇಕಿದ್ದರೂ ತೆರೆದುಕೊಳ್ಳುತ್ತಿದ್ದವು. ಆದರೆ ಅಭಿಮಾನದ ಹೊಸ್ತಿಲು ದಾಟಿ ಹೋಗಿ ಯಾರ ಮನೆಯ ಕದ ತಟ್ಟಲಿಲ್ಲ. ಅವರು ಇಲ್ಲೇ ಉಳಿದರು, ಇಲ್ಲೇ ಬೆಳೆದರರು. ಅಳಿಯಲಾಗದಂತೆ ಬೆಳಗಿದರು.

  ಇಷ್ಟಾಗಿ, ಡಾ. ರಾಜ್‌ಕುಮಾರ್‌ ಕನ್ನಡಕ್ಕೆ ಏನು ಮಾಡಿದ್ದಾರೆ -ಎಂಬ ಪ್ರಶ್ನೆ ಬರುತ್ತದೆ. ನಮ್ಮ ಕನ್ನಡವಿನ್ನೂ ಬೆಚ್ಚಗೆ, ಸ್ವಚ್ಛಗೆ ಉಳಿದಿದೆ. ಹೀಗೇ ಉಳಿಸಿಕೊಂಡು ಹೋಗುವಂತೆ ಅವರು ಹೇಳಿ ಹೋಗಿದ್ದಾರೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more