twitter
    For Quick Alerts
    ALLOW NOTIFICATIONS  
    For Daily Alerts

    ಸಾವಿಲ್ಲದ ಸರದಾರ ಹೃದಯ ಕದ್ದ ಕತೆ!

    By Staff
    |
    ನಿನ್ನೆ ಮಧ್ಯಾಹ್ನ 3 ಗಂಟೆಗೆ ಟ್ರಿನ್‌..ಟ್ರಿನ್‌ ಎಂದು ಫೋನ್‌ ಕಿರುಗುಟ್ಟಿತು. ಹಲೋ..ಎಂದಾಗ ನನ್ನ ಅಕ್ಕ ಟಿ.ವಿ. ಆನ್‌ ಮಾಡೇ ಎಂದಳು. ಯಾಕೆ, ಯಾವ ಟಿ.ವಿ. ಎಂದೆ. ಉದಯ ಅಥವಾ ಈ-ಟಿ.ವಿ. ಹೋಗೇ ಅದು ಎರಡೂ ಇಲ್ಲಿ ಬರೋಲ್ಲ. ಯಾಕೆ ನೀನ್‌ ಬರ್ತೀಯಾ ಟಿ.ವಿ.ನಲ್ಲಿ ಎಂದು ಕೆಣಕಿದೆ. ರಾಜ್‌ಕುಮಾರ್‌ ಹೋಗಿಬಿಟ್ಟ ಕಣೇ ಎಂದಾಗ ಶಾಕ್‌ ಬಡಿದಂತಾಯಿತು. ಏನು, ಯಾವಾಗ, ಹೇಗೆ ಎನ್ನುತ್ತಿದ್ದಂತೆ ಅಳು ಉಮ್ಮಳಿಸಿ ಬಂತು. ತೀರ ಆತ್ಮೀಯರೊಬ್ಬರನ್ನು ಕಳೆದುಕೊಂಡ ಅನುಭವ, ಖಾಲಿತನ ಕಂಡು ಬಂದಿತು.

    ರಾಜ್‌ಕುಮಾರ್‌ ಇಲ್ಲ ಎಂಬುದು ನಂಬಲರ್ಹವಾದುದು. ಅವರ ಸಾವಿನ ಸುದ್ಧಿ ಸುಳ್ಳಾಗಬಾರದೇ ಎಂದು ಆಶಿಸಿದೆ ಕೂಡ. ತಕ್ಷಣ ರಿkುೕ, ಸೋನಿ, ಸ್ಟಾರ್‌ಪ್ಲಸ್‌, ಸನ್‌ ಸೇರಿದಂತೆ ಸಿಂಗಪುರದಲ್ಲಿ ಬರುವ ಚಾನೆಲ್‌ಗಳನ್ನು ಹಾಕಿ ನೋಡಿದೆ. ಎಲ್ಲಾ ಚಾನಲ್‌ಗಳಲ್ಲೂ ಅದೇ ಸುದ್ದಿ. ಆದರೆ ರಾಜ್‌ ಇನ್ನಿಲ್ಲ ಎನ್ನುವುದು ನಂಬಲು ಅಸಾಧ್ಯವಾಗಿತ್ತು. ಇನ್ನು ಕಂಪ್ಯೂಟರ್‌ ಮೊರೆಹೊಕ್ಕಾಗ ಯಾವ ಲಿಂಕ್‌ ನೋಡಲು ಹೋದರೂ ಸರ್ವರ್‌ ಡೌನ್‌. ಈ ತರಹದ ಸಂದರ್ಭಗಳಲ್ಲಿ ಹೀಗೆಯೇ ಆಗುತ್ತದೆ.

    ರಾಜ್‌ಕುಮಾರ್‌ ಎಂದಾಕ್ಷಣ ಕಣ್‌ಮುಂದೆ ನಿಲ್ಲುವ ಚಿತ್ರ ಬಿಳಿ ಶರಟು, ಬಿಳಿ ಪಂಚೆ, ತುಂಬು ನಗೆ, ವಿನಯವೆತ್ತಂತ ಮೂರುತಿ. ಅಂದು ಇಂದೂ ಪ್ರತಿಯೋರ್ವ ಕನ್ನಡಿಗನೂ ಹುಟ್ಟಿನಿಂದ ಬೆಳೆಯುವ ಪ್ರತಿ ಹಂತದಲ್ಲೂ ಅವರನ್ನು ತೆರೆಯಲ್ಲಿ ವಿವಿಧ ವ್ಯಕ್ತಿತ್ವದ ರೂಪದಲಿ ಕಂಡು ಆರಾಧಿಸಿ, ಆತ್ಮೀಯತೆ ಬೆಳೆಸಿಕೊಂಡು, ನಮ್ಮ ಮನೆ, ಮನಗಳಲ್ಲಿ ಅವರನ್ನು ಒಂದಾಗಿಸಿಕೊಂಡು ನಮ್ಮವರು ಎಂದು ಹೆಮ್ಮೆಯಿಂದ ಬೀಗುವ ವ್ಯಕ್ತಿ ಡಾ.ರಾಜ್‌ಕುಮಾರ್‌ ಒಬ್ಬರೇ. ಈ ಭಾವನೆಗೆ ನಾನೂ ಹೊರತಾಗಿಲ್ಲ.

    ರಾಜ್‌ಕುಮಾರ್‌ ಅವರನ್ನು ನಾನು ನೋಡಿದ್ದು ಒಮ್ಮೆ ಮಾತ್ರ. ಅವರ ನೂರನೇ ಚಿತ್ರ ಜಯಭೇರಿ ಗಳಿಸಿದ ಸಂದರ್ಭ ಅದು. ಅಂದು ಮೈಸೂರಿನ ನೂರಡಿ ರಸ್ತೆಯಲ್ಲಿ ಅವರನ್ನು ಲಾರಿಯ ಮೇಲೆ ಹತ್ತಿಸಿ ಮೆರವಣಿಗೆ ಮಾಡಿದರು. ನಾನು, ನನ್ನಕ್ಕ(ಇನ್ನೂ ಚಿಕ್ಕವರು) ಕೈ ಹಿಡಿದು ಸಂಸ್ಕೃತ ಪಾಠಶಾಲೆಯ ಕಾಂಪೌಂಡ್‌ ಹತ್ತಿ ತುಂಬಿದ ಜನಸಂದಣಿಯ ಮಧ್ಯೆಸಾಗುತ್ತಿದ್ದೆವು.

    ಅಚ್ಚ ಬಿಳಿಯ ಪಂಚೆ, ಬಿಳಿಯ ಶರಟು, ತಲೆಗೆ ಮೈಸೂರು ಪೇಟ, ಶಲ್ಯ ಧರಿಸಿ ಎರಡೂ ಕೈ ಎತ್ತಿ ತುಂಬಿದ ಜನಸಾಗರದತ್ತ ಕೈಮುಗಿಯುತ್ತಿದ್ದ ಧೀಮಂತ ವ್ಯಕ್ತಿ ರಾಜ್‌ ಅವರನ್ನು ಕಂಡಾಗ ಮೈ ರೋಮಾಂಚನಗೊಂಡಿತ್ತು. ರಾಜ್‌ಕುಮಾರನ ನೋಡಿದೆ, ರಾಜ್‌ಕುಮಾರನ ನೋಡಿದೆ ಎಂದು ಎಂದು ಹೆಮ್ಮೆಯಿಂದ ಎಲ್ಲರೆದುರೂ ಬೀಗಿದ್ದೆ. ಇಂದು ಅವರು ಇನ್ನಿಲ್ಲ ಎಂದು ತಿಳಿದಾಗ ಸದ್ಯ ಒಮ್ಮೆಯಾದರು ಅವರನ್ನು ಎದುರಿಗೆ ಕಂಡಿದ್ದೇನಲ್ಲಾ ಎನ್ನುವ ಸಮಾಧಾನ, ಮತ್ತೆ ಅವರನ್ನು ನೋಡಲಾರೆ ಎಂಬ ನೋವು ಎರಡೂ ಕೂಡಿತ್ತು. ಅಂದು ಕಂಡ ಜೀವಂತ ರಾಜ್‌ ನೆನಪು ಆಜೀವ ಪರ್ಯಂತ.

    ‘ಆಡು ಮುಟ್ಟದ ಸೊಪ್ಪಿಲ್ಲ’ ರಾಜಕುಮಾರ್‌ ಅಭಿನಯಿಸದ ಪಾತ್ರವಿಲ್ಲ. ಒಳ್ಳೆಯತನ, ಸ್ಟೈಲ್‌, ನಟನೆ, ಫೈಟಿಂಗ್‌ ನನಗೆ ಅಂದು ಇಷ್ಟವಾಗಿತ್ತು. ಹದಿ ಹರೆಯದಲ್ಲಿ ಕೇಳಲೇ ಬೇಡಿ, ಕನಸಿನಲೋಕದ ನಲ್ಲ ರಾಜ್‌ನಂತಿರಬೇಕೆಂದು ಬಯಸಿದ್ದೆ. ಪ್ರೌಢತೆ ಬಂದಂತೆ ಅವರ ಮನ ಮುಟ್ಟುವ ನಟನಾ ಕೌಶಲ್ಯ, ನವರಸ ಅಭಿನಯ ಕಂಡು ಅಭಿಮಾನಿಯಾಗಿದ್ದೆ. ಇತ್ತೀಚಿನ ದಶಕಗಳಲ್ಲಿ ಅವರನ್ನು ಕಂಡಾಗ ‘ಅಪ್ಪಾಜಿ’ ಎಂಬ ಅತ್ಮೀಯತೆಯ ಪದ ಅವರಿಗೆ ಅನ್ವರ್ಥವಾಗುತ್ತೆ ಎಂದೆನಿಸಿತ್ತು.

    ಈ ಅನಿಸಿಕೆ ನನ್ನೊಬ್ಬಳದಲ್ಲ. ಇದು ರಾಜ್‌ ಅವರ ನಟನಾ ಕೌಶಲ್ಯದ ಪ್ರಭಾವ. ಒಬ್ಬ ವ್ಯಕ್ತಿಯಲ್ಲಿ ವಿವಿಧ ರೂಪಗಳಿರುತ್ತವೆ ಎಂಬುದಕ್ಕೆ ಅವರು ಸಾಕ್ಷಿ. ರಾಜ, ಸೇವಕ, ನಂಬಿಕಸ್ತ, ಅಪ್ಪ, ತಾತ, ಅಣ್ಣ, ನಲ್ಲ, ಸ್ನೇಹಿತ, ಮಗ -ಹೀಗೆ ನಾನಾ ಪಾತ್ರಗಳ ಮೂಲಕ ರಾಜ್‌, ಆತ್ಮೀಯತೆಯ ದರ್ಶನ ಮಾಡಿಸಿದ್ದಾರೆ.

    ಮಗನಿದ್ದರೆ ರಾಜ್‌ಕುಮಾರ್‌ ತರಹ ಇರಬೇಕು ಎಂದು ತಾಯಂದಿರು, ನನ್ನ ಗಂಡ ಹೀಗಿರಬೇಕೆಂದು ಹುಡುಗಿಯರು ಆಸೆಪಡುತ್ತಿದ್ದರು. ಒಳ್ಳೆಯ ಮಗ, ಗಂಡ, ಯಜಮಾನ, ಶಿಕ್ಷಕ, ಸೇವಕ, ಕಾರ್ಮಿಕ, ರೈತ, ಅಧಿಕಾರಿ, ಸಂತ, ಸತ್ಯವಂತ ದೇವಾನುದೇವತೆಗಳ ರೂಪ ಹೊತ್ತ ಡಾ. ರಾಜ್‌ ಅಬಾಲವೃದ್ಧರಾದಿಯಾಗಿ ಎಲ್ಲರ ಮನಗೆದ್ದು ಕನ್ನಡಿಗರ ಮನೆಯ ಮಗನಾಗಿ ಹೋದದ್ದು ಇತಿಹಾಸ.

    ರಾಜ್‌ ಅಭಿನಯಕ್ಕೆ ಸಾಟಿಯಿಲ್ಲ ಎನ್ನುವುದಕ್ಕೆ 1964ರಲ್ಲಿ ತೆರೆಕಂಡ ಚಿತ್ರ ‘ನಾಂದಿ’ಯೇ ಸಾಕ್ಷಿ. ಕಿವುಡ ಮೂಗರ ನಿಜವಾದ ದೈನಂದಿನ ಸಮಸ್ಯೆಯ ಮೇಲೆ ವಸ್ತುನಿಷ್ಠವಾಗಿ ಬೆಳಕು ಚೆಲ್ಲಿದ ಚಿತ್ರ ಅದು. ಮೊದಲ ಪತ್ನಿಯನ್ನು ಹೆರಿಗೆಯ ಸಮಯದಲ್ಲಿ ಕಳೆದುಕೊಂಡ ಸರಳ ಶಾಲಾಮಾಸ್ತರನೊಬ್ಬ ಉದ್ದೇಶಪೂರ್ವಕವಾಗಿ ಕಿವುಡು-ಮೂಗು ಹುಡುಗಿಯನ್ನು ಮರುಮದುವೆಯಾಗುತ್ತಾನೆ. ಅಂತಹ ಯುವತಿಯ ಜೀವನದಲ್ಲಿ ನಿಜವಾದ ಅರ್ಥದಲ್ಲಿ ಆಸರೆಯಾಗಿ ನಿಲ್ಲುತ್ತಾನೆ.

    ಶಾಲಾ ಮಾಸ್ತರನಾಗಿ ಡಾ. ರಾಜ್‌, ಸ್ನೇಹಿತ ಮಾಸ್ತರನಾಗಿ ದಿನೇಶ್‌, ಮೊದಲ ಪತ್ನಿಯಾಗಿ ಕಲ್ಪನಾ, ಕಿವುಡು-ಮೂಗಿ ಪತ್ನಿಯಾಗಿ ಹರಿಣಿ ನಟಿಸಿದ ಚಿತ್ರವದು. ಎಲ್ಲಿಯೂ ಎಲ್ಲೆ ಮೀರದೇ ತನ್ಮಯವಾಗಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಘಟನೆ, ಪಾತ್ರ ಒಂದಲ್ಲಾ ಒಂದು ಸಾಮಾಜಿಕ ಸಂದೇಶವನ್ನು ಪ್ರತಿಬಿಂಬಿಸುತ್ತದೆ.

    ಕಿವುಡಿ- ಮೂಗಿ ಪತ್ನಿ ಗರ್ಭಿಣಿಯಾದಾಗ ನಾಯಕ ಹಾಡುವ ‘ಹಾಡೊಂದ ಹಾಡುವೆ ನೀ ಕೇಳು ಮಗುವೇ’ ಗೀತೆ ಇಂದೂ ಮನ ತಟ್ಟುತ್ತದೆ.

    ‘ಕಸ್ತೂರಿ ನಿವಾಸ’ ನೋಡಿ ತ್ಯಾಗಿಗಳಾದವರು, ‘ಬಂಗಾರದ ಮನುಷ್ಯ’ ನೋಡಿ ವ್ಯವಸಾಯದ ಬಗ್ಗೆ ನಿಷ್ಠೆ- ಅಭಿಮಾನ ಮತ್ತು ಗೌರವ ಬೆಳೆಸಿಕೊಂಡರು, ರೈತರಾಗಿ ಒಳ್ಳೆಯ ಬೆಳೆ ಬೆಳೆದವರು, ‘ಬಡವರ ಬಂಧು’ ನೋಡಿ ತಮ್ಮಲ್ಲೇ ಸ್ವಾಭಿಮಾನ ತಳೆದವರು, ಕನಕ, ರಾಘವೇಂದ್ರ, ಕುಂಬಾರ, ದಾಸರನ್ನು ಕಂಡು ವಿನಯ, ವಿವೇಕ, ಭಕ್ತಿ ಕಲಿತವರು, ವೀರಕೇಸರಿ, ಕೃಷ್ಣದೇವರಾಯ, ಮಯೂರ, ರಣಧೀರ ಕಂಠೀರವ, ಪುಲಿಕೇಶಿ ನೋಡಿ ಇತಿಹಾಸ ಅರಿತವರು, ಪೌರಾಣಿಕ ಚಿತ್ರಗಳನ್ನು ನೋಡಿ ನಮ್ಮಲ್ಲಿನ ಭವ್ಯ ಪೌರಾಣಿಕ ಪ್ರಸಂಗಗಳನ್ನು ಓದದೇ ತಿಳಿದವರುಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ರಾಜ್‌ ಅವರ ಚಿತ್ರಗಳನ್ನು ನೋಡಿ ಪ್ರಭಾವಿತಗೊಂಡು ಒಳ್ಳೆತನ, ಹಿರಿಯರ ಬಗ್ಗೆ ಗೌರವ, ಕಿರಿಯರೊಂದಿಗೆ ವಾತ್ಸಲ್ಯ, ಹೆತ್ತವರ ಬಗ್ಗೆ ಭಕ್ತಿ, ಅನೇಕ ಚಟಗಳ ದೂರಮಾಡಿದ ಪಾಠ ಕಲಿತ ಮಂದಿ ನಮ್ಮಲ್ಲಿ ಬಹಳಷ್ಟುಂಟು.

    ‘ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡಮಣ್ಣು ಮೆಟ್ಟಬೇಕು’ ಎಂದು ಸಾರಿದ ಅಪ್ಪಟ ಕನ್ನಡಿಗ, ಪರಿಪೂರ್ಣ ನಟ ಡಾ. ರಾಜ್‌. ಕನ್ನಡನಾಡಿಗೆ ಕಲಾದೇವಿಯಿತ್ತ ಅಪೂರ್ವ ಕೊಡುಗೆ ರಾಜ್‌ಕುಮಾರ್‌. ಈ ಕೊಡುಗೆ ನೀಡಿದ ಭಗವಂತನಿಗೆ ಸಮಸ್ತ ಕನ್ನಡಿಗನೂ ಋಣಿ.

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 23, 2024, 23:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X