»   » ಶರಣೆಂಬೆ ಜಾನಕಿಗೆ! ಶರಣೆಂಬೆ ಕಲಾಸರಸ್ವತಿಗೆ!ಎಸ್‌.ಜಾನಕಿ ಗಾನಸಾಮ್ರಾಜ್ಯಕ್ಕೆ ಭರ್ತಿ ಐವತ್ತು!

ಶರಣೆಂಬೆ ಜಾನಕಿಗೆ! ಶರಣೆಂಬೆ ಕಲಾಸರಸ್ವತಿಗೆ!ಎಸ್‌.ಜಾನಕಿ ಗಾನಸಾಮ್ರಾಜ್ಯಕ್ಕೆ ಭರ್ತಿ ಐವತ್ತು!

Posted By:
Subscribe to Filmibeat Kannada


ಒಂದಲ್ಲ ಎರಡಲ್ಲ, ನೂರಲ್ಲ.. ಸಾವಿರವಲ್ಲ.. 20ಸಾವಿರ! ಹೌದು 20ಸಾವಿರ ಹಾಡುಗಳ ಹಾಡಿದ ಗಾನಕೋಗಿಲೆ; ಎಸ್‌.ಜಾನಕಿ. ತಮ್ಮ ಸುಮಧುರ ಕಂಠದಿಂದ ಕೇಳುಗರ ಹೃದಯ ಕದ್ದವರು ಅವರು. ಜಾನಕಿ ಗಾನಲೋಕ ಪ್ರವೇಶಿಸಿ ಏ.4ಕ್ಕೆ ಭರ್ತಿ ಐವತ್ತು ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಕಲಾಸರಸ್ವತಿಯ ಸಾಧನೆಗೆ ನಮ್ಮೆಲ್ಲರ ಅಕ್ಷರ ಚಪ್ಪಾಳೆ.

  • ಮೀರಾ ಕೃಷ್ಣ, ಕ್ಯಾಲಿಫೋರ್ನಿಯ
ಮಧುರ ಕಂಠದ ಗಾಯಕಿ, ಗಾನ ಕೋಗಿಲೆ ಎಂದೆಲ್ಲಾ ಹೆಸರು ಪಡೆದಿರುವ ಎಸ್‌.ಜಾನಕಿಯವರು ಇದೇ ಏಪ್ರಿಲ್‌ 4ರಂದು ಚಿತ್ರರಂಗಕ್ಕೆ ಬಂದು 50 ವರ್ಷಗಳು ಸಂದವು. 1957 ಏಪ್ರಿಲ್‌ 4ರಂದು ಅವರು ‘ವಿಧಿಯಿನ್‌ ವಿಳೈಯಾಟ್ಟು’ ಎಂಬ ತಮಿಳು ಚಿತ್ರಕ್ಕೆ ಪ್ರಪ್ರಥಮವಾಗಿ ಹಾಡಿದರು. ನಂತರ ಅದೇ ವರ್ಷದಲ್ಲಿ ಅವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.

ಪೆಂಡ್ಯಾಲ ನಾಗೇಶ್ವರರಾವ್‌ ಅವರ ಸಂಗೀತ ನಿರ್ದೇಶನದಲ್ಲಿ ‘ಶ್ರೀ ಕೃಷ್ಣಗಾರುಡಿ’ ಚಿತ್ರಕ್ಕಾಗಿ ಪೆಂಡ್ಯಾಲ ನಾಗೇಶ್ವರರಾವ್‌ ಅವರೊಂದಿಗೇ ಹಾಡಿದ ‘ಭಲೇ ಭಲೇ ಗಾರುಡಿ ಬರುತಿಹ ನೋಡಿ’ ಎಂಬ ಶೀರ್ಷಿಕೆ ಗೀತೆಯಿಂದ ಅವರ ಪಯಣ, ಕನ್ನಡ ಚಿತ್ರರಂಗದಲ್ಲಿ ಆರಂಭವಾಯಿತು. ಈ 50 ವರ್ಷಗಳಲ್ಲಿ ಈ ಗಾಯಕಿಯ ಸಾಧನೆ ಅಪಾರ. ಅದರಲ್ಲೂ ನಮ್ಮ ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿರುವ ಸೇವೆ ಶ್ಲಾಘನೀಯ.

ಇವರು ಹಾಡಿರುವ ಅನೇಕ ಜನಪ್ರಿಯ ಗೀತೆಗಳಲ್ಲಿ ಒಂದಕ್ಕಿಂತ ಒಂದು ಆಣಿಮುತ್ತುಗಳು. ಅದರಲ್ಲಿ ‘ನಂದಾದೀಪ’ ಚಿತ್ರದ ‘ಗಾಳಿಗೋಪುರಾ ನಿನ್ನಾಶಾತೀರ’, ‘ಪ್ರೇಮಕ್ಕೂ ಪರ್ಮಿಟ್ಟೆ’ ಚಿತ್ರದ ‘ಎಚ್ಚರವಿರಬೇಕು ಮೈಯಲಿ ಎಚ್ಚರವಿರಬೇಕು’, ‘ನವಜೀವನ’ ಚಿತ್ರದ ‘ಕರೆಯೇ ಕೋಗಿಲೇ ಮಾಧವನಾ’,‘ಉಪಾಸನೆ ಚಿತ್ರದ ‘ಭಾರತ ಭೂಷಿರ ಮಂದಿರ ಸುಂದರಿ’, ‘ಬಯಲು ದಾರಿ’ ಚಿತ್ರದ ‘ಬಾನಲ್ಲು ನೀನೇ ಭುವಿಯಲ್ಲು ನೀನೇ’, ಮತ್ತು ‘ಹೇಮಾವತಿ’ ಚಿತ್ರದ ‘ಶಿವ ಶಿವ ಎನ್ನದ ನಾಲಿಗೆ ಏಕೆ’ ಇತ್ಯಾದಿ ಇತ್ಯಾದಿ.. ಯಾವ ಹಾಡಿಗಾದರೂ ಅದರ ಅರ್ಥಕ್ಕೆ ತಕ್ಕಂತೆ ಭಾವ ತುಂಬಿ ಹಾಡುವುದರಲ್ಲಿ ಎತ್ತಿದ ಕೈ ಅವರದು.

ಆ ಹಾಡು ಭಕ್ತಿಗೀತೆಯಾಗಲಿ, ಪ್ರಣಯಗೀತೆಯಾಗಲಿ ಅಥವಾ ಶೋಕಗೀತೆಯಾಗಿರಲಿ ಅದಕ್ಕೆ ತಕ್ಕಂತೆ ಹಾಡುವುದರಲ್ಲಿ ನಿಸ್ಸೀಮರು. ನಿರ್ಭಾವ ಮುಖದಿಂದ ಮೈಕ್‌ ಮುಂದೆ ನಿಂತು ಆ ಗೀತೆಗೆ ಮಾತ್ರ ಭಾವ ತುಂಬುತ್ತಾರೆ.

ಇವರು 50ರ ದಶಕದ ಪೆಂಡ್ಯಾಲ ನಾಗೇಶ್ವರರಾವ್‌ ಅವರಿಂದ ಮೊದಲುಗೊಂಡು 90ರ ದಶಕದ ಹಂಸಲೇಖಾರವರ ತನಕ ಎಲ್ಲಾ ಖ್ಯಾತ ಸಂಗೀತ ನಿರ್ದೇಶನದಲ್ಲೂ ಹಾಡಿದ್ದಾರೆ. ಸರಾಸರಿ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 20,000 ಹಾಡುಗಳನ್ನು ಹಾಡಿರುವ ಖ್ಯಾತಿ ಇವರದು. ನಾಲ್ಕು ಬಾರಿ ರಾಷ್ಟಪ್ರಶಸ್ತಿಗಳನ್ನು ಪಡೆದಿರುವ ಇವರು ತೆಗೆದುಕೊಂಡ ರಾಜ್ಯ ಪ್ರಶಸ್ತಿಗಳು ಲೆಕ್ಕವಿಲ್ಲದಷ್ಟು.

ಕೇರಳ ರಾಜ್ಯಸರ್ಕಾರದಿಂದ 14, ತಮಿಳುನಾಡು ಸರ್ಕಾರದಿಂದ 7, ಮತ್ತು ಆಂಧ್ರಪ್ರದೇಶದಿಂದ ಕೂಡ 10 ಬಾರಿ ರಾಜ್ಯಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದಲ್ಲದೆ ತಮಿಳುನಾಡಿನ ಶ್ರೇಷ್ಠ ಪ್ರಶಸ್ತಿ ಎನಿಸಿದ ‘ಕಲೈಮಾಮಣಿ’ ಮತ್ತು, ‘ಸುರ್‌ ಸಿಂಗಾರ್‌’ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada