»   » ಶರಣೆಂಬೆ ಜಾನಕಿಗೆ! ಶರಣೆಂಬೆ ಕಲಾಸರಸ್ವತಿಗೆ!ಎಸ್‌.ಜಾನಕಿ ಗಾನಸಾಮ್ರಾಜ್ಯಕ್ಕೆ ಭರ್ತಿ ಐವತ್ತು!

ಶರಣೆಂಬೆ ಜಾನಕಿಗೆ! ಶರಣೆಂಬೆ ಕಲಾಸರಸ್ವತಿಗೆ!ಎಸ್‌.ಜಾನಕಿ ಗಾನಸಾಮ್ರಾಜ್ಯಕ್ಕೆ ಭರ್ತಿ ಐವತ್ತು!

Posted By:
Subscribe to Filmibeat Kannada


ಹಾಡುಹಕ್ಕಿಯ ಬಾಲ್ಯ :

ಗುಂಟೂರು ಜಿಲ್ಲೆಯ ‘ಪಲ್ಲಪಟ್ಲ’ ಎಂಬುದು ಜಾನಕಿ ಅವರ ಹುಟ್ಟೂರು. ಜನ್ಮದಿನ ಏಪ್ರಿಲ್‌ 23, 1938 . ಅವರು ಮೂರು ವರ್ಷದ ಮಗುವಾಗಿದ್ದಾಗಿನಿಂದ ಹಾಡುವುದನ್ನು ರೂಡಿಸಿಕೊಂಡಿದ್ದರಂತೆ(ಚೈಲ್ಡ್‌ ಪ್ರೋಡಿಜಿ) ಕೇವಲ ಒಂದೇ ಒಂದು ವರ್ಷ ಮಾತ್ರ ನಾದಸ್ವರ ವಿದ್ವಾನ್‌ ಪೈದಿಸ್ವಾಮಿ ಎಂಬುವವರಲ್ಲಿ ಸಂಗೀತಾಭ್ಯಾಸ ಮಾಡಿದರು. ನಂತರ ಮದ್ರಾಸ್‌ಗೆ ಬಂದ ಮೇಲೆ ಇವರ ಮಾವ ಡಾ.ಚಂದ್ರಶೇಖರ್‌ ಅವರು ಇವರಲ್ಲಿರುವ ಪ್ರತಿಭೆಗೆ ನೀರೆರೆದು ಪೋಷಿಸಿದರು.

1956ರಲ್ಲಿ ಆಲ್‌ ಇಂಡಿಯಾ ರೇಡಿಯೋ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಆಗಿನ ಮಾಜಿ ರಾಷ್ಟ್ರಪತಿ ಡಾ.ರಾಜೇಂದ್ರಪ್ರಸಾದ್‌ ಅವರಿಂದ ಪಡೆದರು. ಮುಂದೆ ಅಲ್ಲಿನ ಪ್ರಮುಖ ಸಂಸ್ಥೆಯಾದ ಎವಿಎಂನಲ್ಲಿ ಗಾಯಕಿಯಾಗಿ ಸೇರ್ಪಡೆಯಾದರು.

ಧ್ವನಿ ಬದಲಿಸುವ ಕೋಗಿಲೆ :

ಧ್ವನಿಯನ್ನು ಬದಲಾಯಿಸಿ ಬೇರೆ ಬೇರೆ ಧ್ವನಿಗಳಲ್ಲಿ ಹಾಡುಲು ತನ್ನಿಂದ ಸಾಧ್ಯವಿದೆ ಎಂದು ಮೊದಲೇ ಅರಿತಿದ್ದ ಜಾನಕಿ ಅವರು ಅದನ್ನೂ ಪ್ರಯೋಗ ಮಾಡಿ ತೋರಿಸಿದರು. ಆದ್ದರಿಂದಲೇ ಮಗುವಿನ ಧ್ವನಿಯಲ್ಲಿ, ಗಂಡಸಿನ ಧ್ವನಿಯಲ್ಲಿ ಮತ್ತು ತೀರಾ ವಯಸ್ಸಾದ ಹೆಂಗಸಿನ ಧ್ವನಿಯಲ್ಲಿ ಸಹ ಹಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.

ಹಾಡಿನ ಮಧ್ಯದಲ್ಲಿ ಅವರು ನಗುವುದನ್ನು ಕೇಳಿದಾಗ ಸುಮ್ಮಸುಮ್ಮನೆ ಈ ರೀತಿ ನಗಲು ಸಾಧ್ಯವೇ ಅನ್ನಿಸಿಬಿಡುತ್ತದೆ. ಅಷ್ಟು ಮಧುರ ಅವರ ನಗು. ಈ ರೀತಿಯ ಗೀತೆಗಳನ್ನು ನಾವು ಅವರ ಎಷ್ಟೋ ಗೀತೆಗಳಲ್ಲಿ ಕಾಣಬಹುದು(ಉದಾ: ‘ಗಂಗಿ ನಿನ್‌ ಮೇಲ್‌ ನಂಗೆ ಮನಸೈತೆ’, ‘ಅಹಹಾ ಮಾಗಿಯ ಚಳಿಯಲ್ಲಿ ಈ ಬಿಸಿಯೇನು’, ‘ನಿನ್ನ ನಗುವು ಹೂವಂತೆ’, ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು).

ಅವರೊಬ್ಬ ಅಪ್ರತಿಮ ಗಾಯಕಿ ಮಾತ್ರವಲ್ಲ ಒಬ್ಬ ಉತ್ತಮ ಸಂಗೀತ ನಿರ್ದೇಶಕಿ ಕೂಡ, ಅವರು ಒಂದೆರಡು ತೆಲುಗು ಚಿತ್ರಗಳಿಗೆ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

ಜಾನಕಿ ಅಮ್ಮನಿಗೆ ಸನ್ಮಾನ :

ಚಲನಚಿತ್ರರಂಗದಲ್ಲಿ ಜಾನಕಿ, 50 ವರ್ಷ ಅನಭಿಷಕ್ತ ರಾಣಿಯಾಗಿರುವುದು ಒಂದು ಹೆಮ್ಮೆಯ ಸಂಗತಿ. ಇದೊಂದು ಅತ್ಯುನ್ನತ ಸಾಧನೆ. ಇವತ್ತಿನ ಯುವ ಗಾಯಕಿಯರಿಗೆ ಮಾರ್ಗದರ್ಶನ ನೀಡುವಂತಿದೆ ಇವರ ಹಾಡುಗಾರಿಕೆ. ಇಂತಹ ಅಸಮಾನ್ಯ ಗಾಯಕಿಯನ್ನು ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಗೌರವಿಸಿ, 5ದಶಕಗಳ ಸಂಗೀತ ಸಾಧನೆಯನ್ನು ಗುರ್ತಿಸಿದೆ. ಏಪ್ರಿಲ್‌ 4ರಂದು ನಡೆದ ಕಾರ್ಯಕ್ರಮದಲ್ಲಿ ಚಿತ್ರರಂಗದ ಎಲ್ಲಾ ಹಿರಿ-ಕಿರಿ ಗಾಯಕ ಗಾಯಕಿಯರು ಭಾಗವಹಿಸಿದ್ದರು.

ಪರನಾಡಿನಿಂದ ಬಂದು ಗಾಯಕ ಗಾಯಕಿಯರು ನಮ್ಮಲ್ಲಿ ಹಾಡಿ ಹೋಗುವುದು ಮೊದಲಿನಿಂದಲೂ ನಡೆದು ಬಂದಿದೆ. ಆದರೆ ಬಂದವರು ಬಂದಂತೆ ಹೋದವರೂ ಇದ್ದಾರೆ, ಆದರೆ ಶ್ರೀಮತಿ ಎಸ್‌.ಜಾನಕಿಯವರು ಎಲ್ಲಿಂದಲೋ ಬಂದು ಕನ್ನಡ ಚಲನಚಿತ್ರರಂಗದಲ್ಲಿ ಬಲವಾದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಇವರು ಕನ್ನಡದ ಹೆಣ್ಣುಮಗಳೇನೋ ಅನ್ನುವಷ್ಟು ಇಲ್ಲಿ ಬೆರೆತು ಹೋಗಿದ್ದಾರೆ.

ಇಂತಹ ಒಂದು ಅಪರೂಪದ ಪ್ರತಿಭೆ ನಮ್ಮ ಕನ್ನಡಿಗರಿಗೆ ದೊರೆತದ್ದು ನಮ್ಮ ಭಾಗ್ಯವಿಶೇಷ ಅನ್ನಿಸುತ್ತದೆ. ಈ ಗಾನಕೋಗಿಲೆಗೆ ಸುಖ, ಸಂತೋಷ ಮತ್ತು ಆರೋಗ್ಯವನ್ನು ಆ ಸರ್ವಶಕ್ತನು ದಯಪಾಲಿಸಲಿ ಎಂಬುದೇ ಅವರ ಅಭಿಮಾನಿಗಳ ಹಾರೈಕೆ. ಈ ಚಿಕ್ಕ ಲೇಖನದ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದೇ ಆ ಕಲಾಸರಸ್ವತಿಗೆ ಅಭಿಮಾನಿಗಳು ಮಾಡುವ ಒಂದು ಸುವರ್ಣ ಮಹೋತ್ಸವ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada