»   » ‘ನಂದಿ ನನ್ನ ಶ್ರೇಷ್ಠ ಅಭಿನಯದ ಚಿತ್ರ’

‘ನಂದಿ ನನ್ನ ಶ್ರೇಷ್ಠ ಅಭಿನಯದ ಚಿತ್ರ’

Posted By: Super
Subscribe to Filmibeat Kannada

ಸುದೀಪ್‌ ಕೈಲಿ ಫಿಲಂಫೇರ್‌ ಪ್ರಶಸ್ತಿಯ ಮೂರನೇ ಕಪ್‌ ಇತ್ತು. ಅವರು ತೊಟ್ಟಿದ್ದ ಅಂಗಿ ರಂಗಾಗಿತ್ತು. ಅಪರೂಪವೇನೋ ಎಂಬಂತೆ ಮೊಗದಲ್ಲಿ ಕೋಪದ ಗೆರೆ ಇರಲಿಲ್ಲ. ಸುದೀಪ್‌ ಅಷ್ಟು ಹಸನ್ಮುಖಿಯಾಗಬಲ್ಲರು ಅಂತ ಅನೇಕರಿಗೆ ಗೊತ್ತಾದದ್ದೇ ಆಗ !

ಪತ್ರಕರ್ತರನ್ನು ಬೆನ್ನ ಹಿಂದೆ ಬೈದುಕೊಂಡು ಓಡಾಡುವ ಜಾಯಮಾನದವರು ಎಂಬ ಆರೋಪ ಹೊತ್ತಿರುವ ಸುದೀಪ್‌, ಅದನ್ನು ಸುಳ್ಳಾಗಿಸಲೋ ಎಂಬಂತೆ ಮಾಧ್ಯಮಗಳ ಅಕ್ಷರ ಪ್ರೇಮಿಗಳಿಗೆ ಪದೇಪದೇ ಥ್ಯಾಂಕ್ಸ್‌ ಹೇಳಿದರು. ಹಳೆಯ ಕಿರಿಕ್ಕುಗಳನ್ನು ಕೆದಕಹೊರಟವರ ಕೈಗೆ ಶರಾಬು ಗ್ಲಾಸು ಕೊಟ್ಟು, ಅದನ್ನು ಮರೆತುಬಿಡಿ ಅಂತ ನಗೆಯ ಬೊಕೆ ಕೊಟ್ಟರು. ಚಿತ್ರ ನಟನಾಗಿ ಸುದೀಪ್‌ಗೆ 'ನಂದಿ" ಎರಡನೇ ಫಿಲ್ಮ್‌ಫೇರ್‌ ಪ್ರಶಸ್ತಿ ಕೊಡಿಸಿತು. ಇದಕ್ಕೂ ಮುಂಚೆ 'ಹುಚ್ಚ"ನ ಕಿಚ್ಚಿಗೆ ಸಿಕ್ಕ ಕಪ್ಪನ್ನು ಅವರು ತಂದಿರಲಿಲ್ಲ. ಸ್ಪರ್ಶ ಚಿತ್ರದ ನಿರ್ಮಾಪಕನಾಗಿಯೂ ಮೊದಲೇ ಸುದೀಪ್‌ ಕಪ್ಪಿನ ರುಚಿ ನೋಡಿದ್ದರು. ಹೀಗಾಗಿ ಅವರದ್ದು ಹ್ಯಾಟ್ರಿಕ್‌ ಕಪ್ಪಿನ ಸಾಧನೆ.

ಅವರು ನಗುನಗುತಾ ಇದ್ದ ಕಾರಣ ಕೂತು ಮಾತಾಡಿಸುವ ಮನಸ್ಸಾಯಿತು. ಅವರೂ ಮನ ಬಿಚ್ಚಿ ಮಾತಾಡಿದರು...

ಸಾಲು ಸಾಲಾಗಿ ಮೂರು ಪ್ರಶಸ್ತಿ ಬಂದಿವೆ. ಏನನ್ನಿಸುತ್ತೆ?
ಅವಾರ್ಡ್‌ ಬಂತು ಅಂತ ನಂಗೆ ನಂದಿ ಚಿತ್ರದ ಪ್ರೊಡ್ಯೂಸರ್‌ ಫೋನ್‌ ಮಾಡಿ ಹೇಳಿದಾಗ ನಂಬೋಕೇ ಆಗಲಿಲ್ಲ. ಪತ್ರಕರ್ತರ ಮಿತ್ರರೊಬ್ಬರಿಗೆ ಫೋನಾಯಿಸಿ, ಖಾತ್ರಿ ಮಾಡಿಕೊಂಡೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದಂತಹ ಪರಿಸ್ಥಿತಿಯಲ್ಲಿ ಇಂಥ ಸಂತೋಷದ ಸುದ್ದಿ ಬಂತು. ಲೈಮ್‌ಲೈಟಿನಿಂದ ದೂರವಿದ್ದು, ನನ್ನ ಪಾಡಿಗೆ ನಾನು ಕೆಲಸ ಮಾಡಬೇಕು ಅಂತ ತೀರ್ಮಾನಿಸಿದ್ದೆ. ನಂಗೆ ತೀರಾ ಅಗತ್ಯವಿರುವ ಸಂದರ್ಭದಲ್ಲಿಯೇ ಅವಾರ್ಡ್‌ ಬಂತು. ನನ್ನ ಆತ್ಮ ಸ್ಥೈರ್ಯ ಈಗ ಹೆಚ್ಚಿದೆ. ಸದಾ ತಣ್ಣಗಿರಬೇಕು. ಯಾವುದೇ ಕಾರಣಕ್ಕೂ ಪ್ರಚೋದಿತನಾಗಬಾರದು ಅಂತ ತೀರ್ಮಾನಿಸಿದ್ದೇನೆ.

ಇಂದ್ರಜಿತ್‌ ಜತೆ ಈಗ ನೀವು ಮಾತಾಡ್ತೀರ, ನೀವಿಬ್ಬರೂ ರಾಜಿ ಆಗಿದ್ದೀರಾ ಅಂತ ಸುದ್ದಿ ಹಬ್ಬಿದೆ. ಇದು ನಿಜವಾ?
ಖಂಡಿತ ಇಲ್ಲ. ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಸರಿ ಮಾಡಿಕೊಳ್ಳಬೇಕು ಅಂತ ನಾನೇ ನಿರ್ಧರಿಸಿದ್ದೇನೆ. ಫಿಲ್ಮ್‌ ಚೇಂಬರ್‌ನ ಹಿರಿಯರು ಹಾಗೂ ಸ್ನೇಹಿತರು ಸಿನಿಮಾದ ಹಿತಾಸಕ್ತಿಯ ಕಾರಣಕ್ಕೆ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅವನ್ನು ನಾನು ಸೀರಿಯಸ್ಸಾಗಿ ತೆಗೆದುಕೊಂಡಿದ್ದೇನೆ.

ನಟನೆಗೆ ಎರಡನೇ ಪ್ರಶಸ್ತಿ ಬಂದಿರುವುದರ ಬಗ್ಗೆ ಏನನ್ನಿಸುತ್ತೆ?
'ನಂದಿ" ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ. ಚಿತ್ರದ ಸೆಕೆಂಡ್‌ ಹಾಫ್‌ ನೋಡುತ್ತಾ ವೈಭವ್‌ ಥಿಯೇಟರ್‌ನಲ್ಲಿ ಬಿಕ್ಕಿಬಿಕ್ಕಿ ಅತ್ತ ಜನರನ್ನು ನಾನು ನೋಡಿದ್ದೇನೆ. ಇದುವರೆಗಿನ ನನ್ನ ಕೆರಿಯರ್ರಿನ ಬೆಸ್ಟ್‌ ಆ್ಯಕ್ಟಿಂಗ್‌ ಈ ಚಿತ್ರದಲ್ಲಿ ಮಾಡಿದ್ದೇನೆ ಅಂತ ನನಗನಿಸುತ್ತೆ. ಹುಚ್ಚ ಚಿತ್ರದ ಪಾತ್ರ ನನಗಾಗೇ ಹೊಲೆಸಿಟ್ಟ ಅಂಗಿಯಂತಿತ್ತು. ಆದರೆ 'ನಂದಿ"ಯಲ್ಲಿ ಪಾತ್ರ ಬಹಳ ಕಾಂಪ್ಲಿಕೇಟ್‌ ಆಗಿತ್ತು. ನಿರ್ದೇಶಕ ಡಿ.ರಾಜೇಂದ್ರ ಬಾಬು ಸಾಕಷ್ಟು ಟಿಪ್ಸ್‌ ಕೊಟ್ಟರು. ಅಭಿಮಾನಿಗಳಿಂದ ದಂಡಿಯಾಗಿ ಪತ್ರಗಳು ಬಂದವು. ವಿತರಕರು, ನಿರ್ಮಾಪಕರಿಗೂ ದುಡ್ಡು ಗಿಟ್ಟಿತು. ಹೀಗಿದ್ದೂ, ಉದ್ದಿಮೆ ಪಂಡಿತರು ಅಂತ ಹೇಳಿಕೊಳ್ಳುವವರು ಚಿತ್ರ ಫ್ಲಾಪು ಅಂತ ಹುಯಿಲೆಬ್ಬಿಸಿದರು.

ದಾವಣಗೆರೆಯಲ್ಲಿ ಒಂದು ಪ್ರೋಗ್ರಾಂಗೆ ಬರ್ತೀನಿ ಅಂತ ಹೇಳಿ ಕೈಕೊಟ್ಟಿರಿ. ಹಾಗಾಗಿ ಜನ ಕೋಪದಿಂದ ದಾಂಧಲೆ ಮಾಡಿದರು ಅಂತ ಕೆಲವು ಪತ್ರಿಕೆಗಳು ಬರೆದವು. ನಡೆದಿದ್ದು ನಿಜವಾ?
ದಾವಣಗೆರೆ ಮೇಳಕ್ಕೆ ಬರ್ತೀನಿ ಅಂತ ನಾನು ಡೇಟ್ಸ್‌ ಕೊಟ್ಟಿರಲಿಲ್ಲ. ಅಲ್ಲಿನ ಕೆಲವು ಅಭಿಮಾನಿಗಳು ನೀವು ಬಂದು ಹಾಡಿ- ಕುಣೀಬೇಕು ಅಂತ ಪದೇಪದೇ ಒತ್ತಾಯಿಸುತ್ತಿದ್ದರು. ಒಂದು ದೊಡ್ಡ ಮೈದಾನದಲ್ಲಿ ಸ್ಟೇಜ್‌ ಹಾಕುವ ಮಟ್ಟಿಗೆ ತಯಾರಿ ಮಾಡಿಕೊಳ್ಳಿ ಅಂತಷ್ಟೆ ಸಲಹೆ ಕೊಟ್ಟೆ. ನನ್ನ ಜತೆ ಇನ್ನಷ್ಟು ನಟರನ್ನು ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿದ್ದೆ. ಇನ್ನೂ ಮಾತುಕತೆ ನಡೆಯುತ್ತಿತ್ತು. ಅಷ್ಟರಲ್ಲೇ ಆಯೋಜಕರು ಟಿಕೇಟು ಮಾರತೊಡಗಿದರು. ನಾನು ಮೊದಲೇ ಹೇಳಿದ್ದೆ, ಟಿಕೇಟಲ್ಲಿ ಕಮಿಟ್‌ ಆಗ ಕೂಡದು ಅಂತ. ಅವರ್ಯಾರೂ ಕೇಳಲಿಲ್ಲ. ಇಲ್ಲೂ ನನ್ನದಲ್ಲದ ತಪ್ಪಿಗೆ ನಾನು ಮಾತಿಗೆ ಸಿಕ್ಕಬೇಕಾಯಿತು. ನಾನು innocent.

ಸುದೀಪ್‌ ಬಗ್ಗೆ ನಿಮಗೇನನ್ನಿಸುತ್ತೆ

English summary
An interview with Sudeep

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada