»   » ವಿಷ್ಣು ಆಧ್ಯಾತ್ಮ ಹಾಗೂ ರಾಜಕೀಯ ಪ್ರಜ್ಞೆ

ವಿಷ್ಣು ಆಧ್ಯಾತ್ಮ ಹಾಗೂ ರಾಜಕೀಯ ಪ್ರಜ್ಞೆ

Posted By:
Subscribe to Filmibeat Kannada

ಉಡುಪಿ : ತಾರಾ ದಂಪತಿ ವಿಷ್ಣುವರ್ಧನ್‌- ಭಾರತಿ ಸೋಮವಾರ ಉಡುಪಿಗೆ ಆಗಮಿಸಿ, ಬಾಲಗೋಪಾಲ (ಶ್ರೀಕೃಷ್ಣ) ನಿಗೆ ಸಂಕಲ್ಪದಂತೆ ಆ.12, ಮಂಗಳವಾರ ಗೋದಾನ ಮಾಡಿದರು.

ಪುರೋಹಿತ ಮಧುಸೂದನ ಆಚಾರ್ಯರ ನೇತೃತ್ವದಲ್ಲಿ ವಿಷ್ಣು ದಂಪತಿ ಗೋವು ಹಾಗೂ ಕರುವಿಗೆ ರೇಷ್ಮೆ ಬಟ್ಟೆ ತೊಡಿಸಿ, ಪೂಜೆ ಸಲ್ಲಿಸಿ ಶ್ರೀಕೃಷ್ಣನಿಗೆ ಸಮರ್ಪಿಸಿದರು.

ಎಲ್ಲರಿಗೂ ಅಕ್ಕರೆಯಿಂದ ಕೈಮುಗಿದ, ಸಾಹಸ ಸಿಂಹ (ವಿಷ್ಣುವರ್ಧನ್‌) ರೇಷ್ಮೆ ಶಾಲು, ಪೈಜಾಮ, ತಂಪು ಕನ್ನಡಕ ಧರಿಸಿದ್ದರು.

ಮುದ್ದುಕೃಷ್ಣನ ಕ್ಷೇತ್ರಕ್ಕೆ ಬಂದಿರುವೆ, ಏನಿದ್ದರೂ ಮೊದಲು ಅವನ (ದೇವರ) ಸೇವೆ, ಆಮೇಲೆ ಮಾತಾಡೋಣ ಎಂದು ಅಭಿಮಾನಿಗಳಿಗೆ ಉತ್ತರಿಸಿದರು. ಸೇವೆ ಸಲ್ಲಿಸಿದ ಬಳಿಕ ಅಭಿಮಾನಿಗಳ ದಂಡೇ ಹರಿದುಬಂತು.

ಪ್ರಯಾಸದಿಂದಲೇ ಶ್ರೀಕೃಷ್ಣ ಮಠದ ಕನಕ ಮಂಟಪಕ್ಕೆ ವಿಷ್ಣು ತೆರಳಿದರೆ, ನಟಿ ಭಾರತಿ ಮಾರುಕಟ್ಟೆಗೆ ತೆರಳಿದರು.

ರಾಜಕೀಯ ದೂರ : ರಾಜಕೀಯ ದೂರದ ಬೆಟ್ಟ. ಅದನ್ನು ಹತ್ತೋಕಾಗುತ್ತೋ ಇಲ್ವೋ ಗೊತ್ತಿಲ್ಲ. ಎಲ್ಲವೂ ದೇವರಿಗೆ ಬಿಟ್ಟಿದ್ದು ಎಂದು ವಿಶೇಷ ಸಂದರ್ಶನದಲ್ಲಿ ವಿಷ್ಣುವರ್ಧನ್‌ ಹೇಳಿದರು.

ಚಿತ್ರರಂಗ, ರಾಜಕೀಯ ಎರಡೂ ರಂಗದಲ್ಲಿ ಜನರ ದೃಷ್ಟಿಯಲ್ಲಿ ಅಂಬರೀಶ್‌ ಯಶಸ್ವಿಯಾಗಿದ್ದಾರೆ. ಎಲ್ಲವೂ ದೇವರ ಇಚ್ಛೆ, ಸೂತ್ರಧಾರ ಹೇಗೆ ಹೇಳುತ್ತಾನೊ ಹಾಗೆ ಬದುಕಿನ ಆಗುಹೋಗುಗಳಿವೆ ಎಂದು ಆಧ್ಯಾತ್ಮದ ಲೇಪ ಹಚ್ಚಿದರು.

ಆದರೆ, ಯಾವುದೇ ವಿಷಯದಲ್ಲಿ ತುಂಬಾ ನಿರೀಕ್ಷೆ ಸಲ್ಲ ಎಂದ ವಿಷ್ಣು, ಸಿನಿಮಾ ರಂಗದಲ್ಲಿ ತೃಪ್ತಿ ಇದೆ ಅಂದ್ರೆ ಇದೆ, ಇಲ್ಲಾಂದ್ರೆ ಇಲ್ಲ. ಆಧ್ಯಾತ್ಮ (ಖಾಸಗಿ) ಅನುಭವದ ಜತೆ ಬಂದಿದ್ದು, ಸಹಜವಾಗೇ ಬದುಕಿನಲ್ಲಿ ಆಧ್ಯಾತ್ಮಿಕ ಒಲವು ಹೆಚ್ಚಿದೆ. ಆಂತರ್ಯದಲ್ಲಿ ಏನಿದೆಯಾ ಅದು ಹೊರಬರಲು ಅವಕಾಶ ಬೇಕು. ಆಧ್ಯಾತ್ಮಿಕ ಹಿನ್ನೆಲೆಯ ಸಿನಿಮಾ ಪಾತ್ರದ ಬಗ್ಗೆ ಒಲವಿದ್ದು, ಅವಕಾಶ, ಸೂಕ್ತ ಕಥೆ, ಪಾತ್ರ ದೊರಕಿದರೆ ನಟಿಸಲೂ ಸೈ ಎಂದರು.

ಸೆ. 1ರಿಂದ ನೂತನ ಚಿತ್ರ ‘ಕದಂಬ’ದ ಚಿತ್ರೀಕರಣ ನಡೆಯಲಿದೆ. ‘ಹೃದಯವಂತ’ ಇತ್ತೀಚೆಗಷ್ಟೇ ಚಿತ್ರೀಕರಣ ಪೂರೈಸಿದೆ. ನಟಿಸಿದ ಸಿನಿಮಾಗಳ ಲೆಕ್ಕವಿಟ್ಟಿಲ್ಲ. ಅದೆಲ್ಲ ಅಭಿಮಾನಿಗಳ, ನಿಮ್ಮಂತಹವರ ಕೆಲಸ. 150ಕ್ಕೂ ಹೆಚ್ಚು ಸಿನಿಮಾಗಳಾಗಿರಬಹುದು ಎಂದು ಹೇಳಿದರು.

ಪ್ರತಿ ಪಾತ್ರವೂ ನನಗೆ ಸವಾಲು ಎನ್ನುವ ವಿಷ್ಣುವರ್ಧನ್‌, ಚಿತ್ರರಂಗ ಒಂದು ವೃತ್ತವಿದ್ದಂತೆ, ಒಂದು ಸಿನಿಮಾ ಕೆಳಗೆ, ಮತ್ತೊಂದು ಮೇಲೇರುವುದು ಸಹಜ. ಅಭಿನಯಕ್ಕೆ ಭಾಷೆ, ಜಾತಿ ಭೇದವೂ ಇಲ್ಲ. ಅವಕಾಶಕ್ಕೆ ಆಕಾಶ ಸೀಮಿತ ಎಂದರು.

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಇದನ್ನೂ ಓದಿ
ಕಲಾಕ್ಷೇತ್ರದಲ್ಲಿ ‘ವಿಷ್ಣು’ ಸಹಸ್ರನಾಮ !


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada