»   » ಸ್ಯಾಂಡಲ್‌ವುಡ್‌ನಲ್ಲಿ ಮೋಹನ್‌ಲಾಲ್‌

ಸ್ಯಾಂಡಲ್‌ವುಡ್‌ನಲ್ಲಿ ಮೋಹನ್‌ಲಾಲ್‌

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಮಲೆಯಾಳಿ ಸಿನಿಮಾದಲ್ಲಿ ಬುಟ್ಟಿ ತುಂಬಾ ಪ್ರಶಸ್ತಿ ಸಂಪಾದಿಸಿರುವ ಖದರು ನಟ ಮೋಹನ್‌ಲಾಲ್‌ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಮೋಹನ್‌ಲಾಲ್‌ ಪ್ರತಿಭಾವಂತ ಕಲಾವಿದ ಅಷ್ಟೇ ಅಲ್ಲ. ಈತನ ಕಾಲ್ಗುಣ ಚೆನ್ನಾಗಿದೆ ಅನ್ನುವ ಮಾತನ್ನು ಬಾಲಿವುಡ್‌ ಕೂಡ ಅನುಮೋದಿಸಿದೆ. ಸದಾ ಹೊಸತನ್ನು ಹಿಡಿದು, ದೊಡ್ಡ ದೊಡ್ಡ ರಿಸ್ಕಿಗೆ ಎದೆಗೊಡುವ ರಾಮ್‌ಗೋಪಾಲ್‌ ವರ್ಮಾ ‘ಕಂಪನಿ’ ಚಿತ್ರದ ಮೂಲಕ ಮೋಹನ್‌ಲಾಲ್‌ರನ್ನು ಬಾಲಿವುಡ್‌ಗೆ ತಂದು ಜಯಿಸಿದ್ದರು. ಚಿತ್ರದಲ್ಲಿ ಮೋಹನ್‌ಲಾಲ್‌ ಖುದ್ದು ಹಿಂದಿ ಮಾತಾಡಿದ್ದು ಇನ್ನೊಂದು ಸುದ್ದಿಯಾಗಿತ್ತು.

ಈಗ ಸ್ಯಾಂಡಲ್‌ವುಡ್‌ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ತಮ್ಮ ಮಗ ಆದಿತ್ಯ ನಾಯಕನಾಗಿರುವ ‘ಲವ್‌’ ಚಿತ್ರಕ್ಕೆ ಮೋಹನ್‌ಲಾಲ್‌ ಅವರನ್ನು ಕರೆ ತಂದಿದ್ದಾರೆ. ಈ ಚಿತ್ರದಲ್ಲಿ ನನ್ನದು ಟ್ಯಾಕ್ಸಿ ಡ್ರೆೃವರ್‌ ಪಾತ್ರ ಎಂದು ಮೋಹನ್‌ಲಾಲ್‌ ತವರಿನಲ್ಲಿ ಪತ್ರಕರ್ತರಿಗೆ ಇತ್ತೀಚೆಗೆ ಹೇಳುವವರೆಗೆ ಈ ವಿಷಯಕ್ಕೆ ಅಧಿಕೃತತೆ ಸಿಕ್ಕಿರಲಿಲ್ಲ.

ಮೋಹನ್‌ಲಾಲ್‌ ಅವರಂಥ ನಟ ಕೇವಲ ಟ್ಯಾಕ್ಸಿ ಡ್ರೆೃವರ್‌ ಪಾತ್ರಕ್ಕೆ ಒಪ್ಪಿಕೊಂಡರಾ? ಅದು ಇಂಡಿಯನ್‌ ಟ್ಯಾಕ್ಸಿ ಡ್ರೆೃವರ್‌ ಪಾತ್ರವಲ್ಲ, ದುಬೈನಲ್ಲಿನ ಟ್ಯಾಕ್ಸಿ ಡ್ರೆೃವರ್‌ ಪಾತ್ರ. ಚಿತ್ರದಲ್ಲಿ ಪಾತ್ರಕ್ಕೆ ಭಾರೀ ತೂಕವಿದೆ ಎಂದು ಮೋಹನ್‌ಲಾಲ್‌ ಪತ್ರಕರ್ತರಿಗೆ ಸಮಜಾಯಿಷಿಯನ್ನೂ ಕೊಟ್ಟರು. ಸಂಭಾವನೆ ವಿಷಯ ಎತ್ತಿದಾಗ, ಅದು ಗುಟ್ಟು ಎಂದು ನಕ್ಕರು. ಈ ಪ್ರಶ್ನೆಯನ್ನು ಸಿಂಗ್‌ ಬಾಬು ಮುಂದಿಟ್ಟರೆ ಅವರ ಪ್ರತಿಕ್ರಿಯೆಯೂ ಹೀಗೇ ಇದೆ.

ಅನು ಮಲ್ಲಿಕ್‌ ಸಂಗೀತ, ಈಗ ಮೋಹನ್‌ಲಾಲ್‌ ಸೇರ್ಪಡೆ- ಹೀಗೆ ಹೊಸತನ್ನು ಒಂದಾದ ಮೇಲೊಂದರಂತೆ ಅಳವಡಿಸಿಕೊಳ್ಳುತ್ತಿರುವ ಸಿಂಗ್‌ ಬಾಬು ಪುತ್ರನ ಚೊಚ್ಚಲ ಚಿತ್ರ ಬಹಳ ನಿರೀಕ್ಷೆ ಹುಟ್ಟಿಸಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada