»   » ರಾಜ್‌ ಮನೆಯಲ್ಲಿ ಬಿಜೆಪಿ ನಾಯಕರು

ರಾಜ್‌ ಮನೆಯಲ್ಲಿ ಬಿಜೆಪಿ ನಾಯಕರು

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಬೆಂಗಳೂರು : ಕುತೂಹಲಕಕಾರಿ ಘಟನೆಯಾಂದರಲ್ಲಿ ರಾಜ್ಯ ಬಿಜೆಪಿ ಮುಖಂಡರು ವರನಟ ಡಾ.ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿ, ನಾಡು ನುಡಿ ಕುರಿತು ಹೋರಾಟಕ್ಕೆ ಬೆಂಬಲ ಕೋರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಅನಂತ್‌ಕುಮಾರ್‌, ಬಿ.ಎಸ್‌. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಚಂದ್ರು ಸೇರಿದಂತೆ ವಿವಿಧ ಬಿಜೆಪಿ ನಾಯಕರು ಸದಾಶಿವನಗರದ ಬಂಗಲೆಯಲ್ಲಿ ಡಾ.ರಾಜ್‌ಕುಮಾರ್‌ ಅವರನ್ನು ಭಾನುವಾರ (ಅ.12) ಭೇಟಿ ಮಾಡಿ ಮಾತುಕತೆ ನಡೆಸಿದರು.

ಕನ್ನಡ ನಾಡು, ನುಡಿ, ಜಲ ರಕ್ಷಣೆಗಾಗಿ ಭಾರತೀಯ ಜನತಾ ಪಕ್ಷ ಹೋರಾಟ ನಡೆಸುತ್ತಿದ್ದು , ಈ ಹೋರಾಟಕ್ಕೆ ವರನಟ ರಾಜ್‌ಕುಮಾರ್‌ ಅವರ ಆಶೀರ್ವಾದ ಬೆಂಬಲವನ್ನು ಪಕ್ಷ ಕೋರಿದೆ ಎಂದು ರಾಜ್‌ ಭೇಟಿಯ ಸಂದರ್ಭದಲ್ಲಿ ಅನಂತಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ತಾವು ಆಶೀರ್ವಾದ ಮಾಡಿಸಿಕೊಳ್ಳುವವರೇ ಹೊರತು ಆಶೀರ್ವಾದ ಮಾಡುವವರಲ್ಲ ಎಂದು ಬಿಜೆಪಿ ನಾಯಕರೊಂದಿಗಿನ ಭೇಟಿಯ ನಂತರ ರಾಜ್‌ ಸುದ್ದಿಗಾರರಿಗೆ ತಿಳಿಸಿದರು.

ಜನ ಸಂಘರ್ಷ ಯಾತ್ರೆಯ ಆರಂಭದ ದಿನವೇ ಬಿಜೆಪಿ ನಾಯಕರು ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿದ ಘಟನೆ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕೆಲ ದಿನಗಳ ಹಿಂದಷ್ಟೇ, ತಮ್ಮ ಕುಟುಂಬಕ್ಕೆ ರಾಜಕಾರಣದಲ್ಲಿ ಆಸಕ್ತಿ ಇಲ್ಲವೆಂದು ಪಾರ್ವತಮ್ಮ ರಾಜ್‌ಕುಮಾರ್‌ ಸ್ಪಷ್ಟಪಡಿಸಿದ್ದರು. ಎರಡು ಬಾರಿ ತಮಗೆ ಎಂಎಲ್‌ಸಿ ಆಮಿಷ ಒಡ್ಡಲಾಗಿತ್ತು ಎನ್ನುವುದನ್ನೂ ಪಾರ್ವತಮ್ಮ ಬಹಿರಂಗಪಡಿಸಿದ್ದರು.

ಮನೆ ಮಡದಿ ಮಕ್ಕಳೊಂದಿಗೆ ಕಾಲಕ್ಷೇಪ : ಬಿಜೆಪಿ ನಾಯಕರೊಂದಿಗೆ ಗೋಕಾಕ್‌ ಚಳವಳಿಯ ನೆನಪುಗಳನ್ನು ಹಂಚಿಕೊಂಡ ರಾಜ್‌ಕುಮಾರ್‌, ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯಾಬ್ಬರೂ ತಾಯಿಯನ್ನು ಪ್ರೀತಿಸುವಷ್ಟೇ ತೀವ್ರವಾಗಿ ಕನ್ನಡವನ್ನೂ ಪ್ರೀತಿಸಬೇಕು ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಕೃಷ್ಣ ಅವರ ನಾಲ್ಕು ವರ್ಷಗಳ ಆಡಳಿತದ ಬಗ್ಗೆ ಪ್ರತಿಕ್ರಿಯಿಸಿದ ರಾಜ್‌, ಎಲ್ಲವೂ ಚೆನ್ನಾಗಿದೆ ಎಂದರು. ವೀರಪ್ಪನ್‌ ಬಂಧನದಿಂದ ತಮ್ಮನ್ನು ಬಿಡುಗಡೆಗೊಳಿಸಲು ಸಹಕರಿಸಿದ ಎಲ್ಲ ರಾಜಕೀಯ ಪಕ್ಷಗಳಿಗೂ ಹಾಗೂ ಜನತೆಗೆ ರಾಜ್‌ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದರು.

ನರಹಂತಕ ವೀರಪ್ಪನ್‌ನನ್ನು ಸೆರೆ ಹಿಡಿಯುವ ಮೂಲಕ ಗಾಜನೂರಿಗೆ ತೆರಳಲು ತಮಗೆ ಅವಕಾಶ ಕಲ್ಪಿಸಿಕೊಡಬೇಕೆಂದು ರಾಜ್‌ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಪ್ರಸ್ತುತ ಮನೆ ಮಡದಿ ಮಕ್ಕಳೊಂದಿಗೆ ತಾವು ಕಾಲ ಕಳೆಯುತ್ತಿರುವುದಾಗಿ ರಾಜ್‌ ಹೇಳಿದರು. ಪಾರ್ವತಮ್ಮ ರಾಜ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada