»   » ಲಕಲಕ ಅದಿತಿಯಿಂದಲಾದರೂ ಇಂದ್ರಜಿತ್‌ ಗೆಲ್ಲುವರೇ?

ಲಕಲಕ ಅದಿತಿಯಿಂದಲಾದರೂ ಇಂದ್ರಜಿತ್‌ ಗೆಲ್ಲುವರೇ?

Posted By: Staff
Subscribe to Filmibeat Kannada

'ಲಂಕೇಶ್‌ ಪುತ್ರಿಕೆ"ಯ ಲಗಾಮಿನಲ್ಲಿ 'ಲಂಕೇಶ್‌ ಪತ್ರಿಕೆ" ಸೊರಗಿದ್ದರೂ, ಪತ್ರಿಕೆಯ ಹೆಸರಿಗೇ ಒಂದು ವಿಚಿತ್ರ ತಾಕತ್ತಿದೆ. ಅದೇ ಕಾರಣಕ್ಕೋ ಏನೋ, ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಬದಲು ದುಡ್ಡು ಹಾಕಲು ಮುಂದಾಗಿರುವ ಕೊಬ್ರಿ ಮಂಜುವಿಗೆ ಲಂಕೇಶ್‌ ಪುತ್ರ ಇಂದ್ರಜಿತ್‌ ಮೇಲೆ 'ತುಂಟಾಟ" ಸೋತ ನಂತರವೂ ಅಪಾರ ನಂಬುಗೆ.

ಚಿತ್ರದ ಸ್ಟಾರ್‌ ಕಾಸ್ಟ್‌ ನೋಡಿ- ವಸುಂಧರ ದಾಸ್‌, ಅದಿತಿ ಗೋವಿತ್ರಿಕರ್‌, ಅನಂತನಾಗ್‌, ದರ್ಶನ್‌. ಬಜೆಟ್ಟು ಒಂದೂವರೆ ಕೋಟಿ ಆದ್ರೂ ಚಿಂತೆಯಿಲ್ಲ ಅಂತ ಕೊಬ್ರಿ ಮಂಜು ಭರವಸೆ ಕೊಟ್ಟಿದ್ದೇ ತಡ, ಲಂಕೇಶ್‌ ಪುತ್ರ 'ಲಂಕೇಶ್‌ ಪತ್ರಿಕೆ" ವಿಷಯದಲ್ಲಿ ಸ್ಪೀಡಾಗಿ ಹೋಗುತ್ತಿದ್ದಾರೆ. ಈ ಹಿಂದೆ ನಾಯಕನಾಗಿ ಶಿವರಾಜ್‌ ಕುಮಾರ್‌ ಗೊತ್ತಾಗಿದ್ದರು. ಆದರೆ ಡೇಟ್ಸ್‌ ಸಮಸ್ಯೆಯಿಂದಾಗಿ ಆ ಜಾಗಕ್ಕೆ ದರ್ಶನ್‌ರನ್ನು ತರಬೇಕಾಯಿತು. ಶಿವಣ್ಣ ನಟಿಸದ ಕಾರಣಕ್ಕೆ ದುಡ್ಡು ಹಾಕಲು ಕನಕಪುರ ಶ್ರೀನಿವಾಸ್‌ ಕೂಡ ಒಲ್ಲೆ ಅಂದರು. ಕೊಂಬ್ರಿ ಮಂಜುವಿಗೆ ಬಂಡವಾಳ ವಿನಿಯೋಗದ ಅವಕಾಶ ಗಿಟ್ಟಿತು.

ಪಾತ್ರದ ತೂಕ, ಗಾಯನಕ್ಕೇ ಪ್ರಾಶಸ್ತ್ಯ, ಸಂಭಾವನೆ- ಹೀಗೆ ಬಗೆಬಗೆಯ ನೆಪವೊಡ್ಡಿ ಈವರೆಗೆ ಕನ್ನಡ ಸಿನಿಮಾದ ಆಫರ್‌ಗಳಿಂದ ತಪ್ಪಿಸಿಕೊಳ್ಳುತ್ತಿದ್ದ ವಸುಂಧರಾ ದಾಸ್‌ ಅವರನ್ನು ಒಪ್ಪಿಸುವಲ್ಲಿ ಇಂದ್ರಜಿತ್‌ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಹುಡುಗಿ ವಸುಂಧರ ಎಷ್ಟು ಫೇಮಸ್‌ ಅಂದರೆ, ಈಕೆ ಮೋಹನ್‌ ಲಾಲ್‌ ಜೊತೆ ನಟಿಸಿರುವ ಮಲೆಯಾಳಿ ಸಿನಿಮಾ ಒಂದೂವರೆ ವರ್ಷದಿಂದ ಬಲು ಜೋರಾಗಿ ಓಡುತ್ತಿದೆ. ನಾಯಕಿಯಾಗಿ ವಸುಂಧರಾ ಗೊತ್ತಾಗಿರುವುದರಿಂದ ಅವರ ಹಿನ್ನೆಲೆ ಗಾಯನವೂ ಚಿತ್ರಕ್ಕೆ ಬೋನಸ್ಸಾಗಿ ದೊರೆಯಲಿದೆ. ಆ ಮೂಲಕ ಸಂಗೀತ ನಿರ್ದೇಶಕ ಹಾಗೂ ಗೀತ ರಚನಕಾರ ಕೆ.ಕಲ್ಯಾಣ್‌ಗೆ ಮಿಂಚಲು ಇನ್ನೊಂದು ಸದವಕಾಶ.

ಮೂಲತಃ ವೈದ್ಯೆಯಾಗಿರುವ ಅದಿತಿ ಗೋವಿತ್ರಿಕರ್‌ 'ಲಂಕೇಶ್‌ ಪತ್ರಿಕೆ"ಯ ಇನ್ನೊಬ್ಬ ನಾಯಕಿ. ಒಂದು ಮಗುವಿನ ತಾಯಿಯಾಗಿರುವ ಈಕೆ ಮಾಡೆಲ್‌ ಆಗಿ ಸಾಕಷ್ಟು ಹೆಸರು ಮಾಡಿರುವಾಕೆ. ಒಂದು ಹಿಂದಿ ಸಿನಿಮಾದಲ್ಲಿ ನಟಿಸಿರುವ ಅನುಭವವಿದೆ. ಸಿನಿಮಾ ವಿಮರ್ಶರ ಪ್ರಕಾರ ಈಕೆಯ ನಟನೆ ಶೂನ್ಯ; ಗ್ಲ್ಯಾಮರ್‌ ಭರಪೂರ.

ಇವರ ನಡುವೆ 'ಮೆಜೆಸ್ಟಿಕ್‌" ನಂತರ ಸೋಲುಗಳನ್ನೇ ಕಂಡಿರುವ ದರ್ಶನ್‌ ತಮ್ಮ ಅದೃಷ್ಟ ಒರೆಗೆ ಹಚ್ಚುತ್ತಿದ್ದಾರೆ. ಗಿರೀಶ್‌ ಕಾರ್ನಾಡರ ಕೈಲಿ ಮಾಡಿಸಬೇಕೆಂದಿದ್ದ ಲಂಕೇಶರ ಪಾತ್ರಕ್ಕೆ ಈಗ ಅನಂತ ನಾಗ್‌ ಬಂದಿದ್ದಾರೆ. ಪುಟ್ಟವನಾಗಿದ್ದಾಗಿನಿಂದ 'ಲಂಕೇಶ್‌ ಪತ್ರಿಕೆ"ಯನ್ನು ಮುಟ್ಟಿ ನೋಡಿ, ಅಪ್ಪನ ಬರಕತ್ತನ್ನು ಜೀರ್ಣಿಸಿಕೊಂಡಿರುವ ಇಂದ್ರಜಿತ್‌ ತಮಗೆ ಸಿಕ್ಕಿರುವ ಭಿನ್ನ ಸ್ಟಾರ್‌ ಕಾಸ್ಟನ್ನು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಬಳಸಿಕೊಳ್ಳುತ್ತಾರೆ ಅನ್ನುವುದಷ್ಟೇ ಉಳಿದಿರುವ ಕುತೂಹಲ.

English summary
Vasundhara Das and Aditi to act in Lankesh Patrike

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada