»   »  ನಕಲಿ ಸಿಡಿ ಅಂಗಡಿ ಮೇಲೆ ನಿರ್ಮಾಪಕರ ದಾಳಿ

ನಕಲಿ ಸಿಡಿ ಅಂಗಡಿ ಮೇಲೆ ನಿರ್ಮಾಪಕರ ದಾಳಿ

Subscribe to Filmibeat Kannada

ಬೆಂಗಳೂರು, ಫೆ. 14 : ಗಾಂಧಿನಗರದಲ್ಲಿ ನಕಲಿ ಸಿಡಿ ತಯಾರಿಸುತ್ತಿದ್ದಾರೆಂದು ಆರೋಪಿಸಿ ಸಿಡಿದೆದ್ದಿರುವ ಕನ್ನಡ ಚಿತ್ರರಂಗದ ನಿರ್ಮಾಪಕರು ನಕಲಿ ಸಿಡಿ ಅಂಗಡಿಗಳ ಮೇಲೆ ತಾವೇ ದಾಳಿ ಮಾಡಿ 25 ಸಾವಿರಕ್ಕೂ ಹೆಚ್ಚಿನ ಸಿಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿ ಪೊಲೀಸರಿಗೆ ತಿಳಿಸದೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ನಿರ್ಮಾಪಕರನ್ನೇ ಬಂಧಿಸಿ ಕೆಲವರ ಮೇಲೆ ಹಲ್ಲೆ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ನಿರ್ಮಾಪಕ ಕೆ. ಮಂಜು ಸೇರಿದಂತೆ 15 ನಿರ್ಮಾಪಕರನ್ನು ಬಂಧಿಸಿ ಅಲಸೂರು ಪೊಲೀಸ್ ಠಾಣೆಗೆ ಒಯ್ದಿದ್ದರು. ನಕಲಿ ಮಾಡುತ್ತಿರುವ ಅಂಗಡಿ ಮಾಲಿಕರನ್ನು ಬಂಧಿಸದೆ ನಿರ್ಮಾಪಕರನ್ನು ಬಂಧಿಸಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಪೊಲೀಸರು ಕೆ. ಮಂಜು ಮತ್ತು ಮತ್ತಿತರರನ್ನು ಥಳಿಸಿದ್ದಾರೆಂದು ನಿರ್ಮಾಪಕರ ಸಂಘ ಆರೋಪಿಸಿದೆ.

ರೊಚ್ಚಿಗೆದ್ದ ನಿರ್ಮಾಪಕರು ಮತ್ತು ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ವಶಪಡಿಸಿಕೊಂಡ ಸಿಡಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ, ತುಳಿದು ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರದೊಳಗೆ ನಕಲಿ ಸಿಡಿ ಅಂಗಡಿ ಮಾಲಿಕರನ್ನು ಬಂಧಿಸಬೇಕು ಮತ್ತು ನಿರ್ಮಾಪಕರ ಮೇಲೆ ಆಕ್ರಮಣ ಮಾಡಿದ ಪೊಲೀಸರ ಮೇಲೂ ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಗಡುವು ನೀಡಿದ್ದಾರೆ. ಅಷ್ಟರೊಳಗೆ ಕ್ರಮ ಜರುಗಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಚಳವಳಿ ಮಾಡಬೇಕಾಗುತ್ತದೆಂದು ನಿರ್ಮಾಪಕರು ಎಚ್ಚರಿಸಿದರು.

ಮೊದಲೇ ಯೋಜಿಸಿದಂತೆ ತಂಡ ತಂಡವಾಗಿ ನಿರ್ಮಾಪಕರು ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ಅರಿವಾಗುತ್ತಿದ್ದಂತೆ ಇಬ್ಬರ ನಡುವೆ ವ್ಯಾಗ್ಯುದ್ಧ ನಡೆದಿದೆ. ಮಾಲಿಕರೇ ಪೊಲೀಸರಿಗೆ ತಿಳಿಸಿದ್ದರಿಂದ ನಿರ್ಮಾಪಕರನ್ನು ಪೊಲೀಸರು ಬಂಧಿಸಿದ್ದಾರೆ.

ರಾಕ್ ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು, ಕೆಸಿಎನ್ ಚಂದ್ರಶೇಖರ್, ಕೆ. ಮಂಜು ಮುಂತಾದವರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಕೂಡ ನಕಲಿ ಸಿಡಿ ವಹಿವಾಟು ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ಸಿಡಿ ಹಾವಳಿಯಿಂದಾಗಿ ಚಿತ್ರರಂಗಕ್ಕೆ 300 ಕೋಟಿ ರು. ನಷ್ಟವಾಗಿದೆ. ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಮುಂಜಾನೆಯ ಶೋಗಳಿಗೆ ಜನರೇ ಬರುತ್ತಿಲ್ಲ. ಅನೇಕ ಚಿತ್ರಮಂದಿರಗಳು ಬೆಳಗಿನ ಪ್ರದರ್ಶನವನ್ನು ರದ್ದುಪಡಿಸಿದ್ದಾರೆ. ಹೀಗಾದರೆ ಚಿತ್ರರಂಗ ಹೇಗೆ ಉದ್ಧಾರವಾಗಬೇಕು ಎಂದು ಅವರು ಪ್ರಶ್ನಿಸಿದರು. ನಕಲಿ ಸಿಡಿ ದಂಧೆ ಪೊಲೀಸರ ಕಣ್ಣಮುಂದೆಯೇ ನಡೆಯುತ್ತಿದೆ. ಆದರೂ ತಾಳ್ಮೆಯಿಂದ ವರ್ತಿಸುತ್ತಿದ್ದೆವು. ನಕಲಿ ಸಿಡಿಗಳ ಹಾವಳಿ ಮಿತಿಮೀರಿದೆ ಎಂದು ನಿರ್ಮಾಪಕರ ದಾಳಿಯನ್ನು ಸಮರ್ಥಿಸಿಕೊಂಡರು.

ಸರ್ಕಾರ ಮಧ್ಯಪ್ರವೇಶಿಸಿ ಕೂಡಲೆ ಕ್ರಮ ಕೈಗೊಳ್ಳಬೇಕು. ನಕಲಿ ಸಿಡಿ ಹಾವಳಿ ತಡೆಯಲು ಗೂಂಡಾ ಕಾಯ್ದೆ ಕೂಡಲೆ ಜಾರಿ ತರಬೇಕೆಂದು ಜಯಮಾಲಾ ಆಗ್ರಹಿಸಿದರು.

(ದಟ್ಸ್ ಸಿನಿ ವಾರ್ತೆ)

ಪೂರಕ ಓದಿಗೆ
ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada