»   » ದುನಿಯಾ ಸೂರಿಯೊಂದಿಗೆ ಕುಶಲೋಪರಿ

ದುನಿಯಾ ಸೂರಿಯೊಂದಿಗೆ ಕುಶಲೋಪರಿ

Subscribe to Filmibeat Kannada
director suri
'ಪದೇಪದೇ ಪ್ರೇಕ್ಷಕರು ರಿಜೆಕ್ಟ್ ಮಾಡಿದರೆ ಈ ಫೀಲ್ಡೇ ಬಿಟ್ಟುಬಿಡ್ತೀನಿ..." ಥೇಟ್ ಸಿನಿಮಾ ಶೈಲಿಯಲ್ಲೇ ಹೇಳಿದರು ಸೂರಿ- ಅರ್ಥಾತ್- ದುನಿಯಾ ಸೂರಿ. ಹಿಂದಿ ಹೆಸರುಗಳ ಮೋಹಿ ಸೂರಿಯದ್ದು ಈ ಸಲ 'ಜಂಗ್ಲಿ"ಯನ್ನು ತೇಲಿಸುವ ಸಂಕಲ್ಪ. ಜನ ದುನಿಯಾ ತರಹದ್ದೇ ಸಿನಿಮಾ ಮಾಡಿ ಅಂತ ಎಲ್ಲಿ ಹೋದರೂ ಕೇಳಿಕೇಳಿ ಅದನ್ನೇ ತಲೆಯಲ್ಲಿ ತುಂಬಿಕೊಂಡಿದ್ದರ ಫಲವೇ ಜಂಗ್ಲಿ.

ಹಾಗಾದರೆ ಜಂಗ್ಲಿ ಹೇಗೆ ಭಿನ್ನ ಅಂದರೆ ಸೂರಿ ಸಣ್ಣಗೆ ನಗುತ್ತಾರೆ. 'ದೊಡ್ಡ ವಿಚಾರವಿಲ್ಲ. ಮನರಂಜನೆಯೇ ಎಲ್ಲ. ದುನಿಯಾಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ತರಹ ಅಂತೂ ಇರುತ್ತೆ. ಅದು ಇನ್ನೊಂಥರ ಸಿನಿಮಾ ಆಗುತ್ತೆ..." ವಿಲಕ್ಷಣವಾಗಿ ಹೇಳಿ ಮಾತನ್ನು ಮೊಟಕುಗೊಳಿಸುತ್ತಾರೆ ಸೂರಿ.

ನಾಯಕ ವಿಜಯ್ ಈ ಚಿತ್ರದಲ್ಲಿ ಎಲ್ಲಾ ಸ್ಟಂಟ್‌ಗಳನ್ನೂ ಸ್ವಯಂ ಮಾಡಿ ಬಲಗಾಲಿನ ಲಿಗಮೆಂಟ್ ಮುರಿದುಕೊಂಡಿದ್ದಾರೆ. ಅವರು ಈಗಷ್ಟೇ ಚೇತರಿಸಿಕೊಂಡಿದ್ದು ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿ. ಇನ್ನೂ ಎರಡು ತಿಂಗಳ ಕೆಲಸವಿದೆ. ರಿಲೀಸ್ ಯಾವಾಗ ಅಂತ ಇನ್ನೂ ನಿರ್ಧರಿಸಿಲ್ಲ. ಚಿತ್ರವು ಹೊಡೆದಾಟಗಳಿಂದ ಭರ್ತಿಯಾಗಿರುತ್ತದೆ ಅನ್ನೋದಂತೂ ದಿಟ.

ವಿಜಯ್‌ಗೆ ಅಂದ್ರಿತಾ ನಾಯಕಿ. ರಂಗಾಯಣ ರಘುವಿಗೆ ಈ ಚಿತ್ರದಲ್ಲೂ ಬೇರೆ ತರಹದ ಪಾತ್ರವಿದೆ. ವಿ.ಹರಿಕೃಷ್ಣ ಹಾಡುಗಳಿಗೆ ಮಟ್ಟು ಹಾಕಿದ್ದಾರೆ. ಒಂದೇ ಫ್ಲೋನಲ್ಲಿ ಶೂಟಿಂಗ್ ಮಾಡುತ್ತಿರುವ ಸೂರಿ ಯಾರ ಹತ್ತಿರವೂ ಈ ಸಿನಿಮಾ ಬಗ್ಗೆ ಮುಕ್ತವಾಗಿ ಏನನ್ನೂ ಹೇಳುತ್ತಿಲ್ಲ.

'ಜನ ಹೇಳೋದನ್ನಷ್ಟೇ ಮಾಡಬೇಕು ಅಂತೇನೂ ಇಲ್ಲ. ನನ್ನ ಕೈಲಿ ಆಗೋವರೆಗೆ ಸಿನಿಮಾ ಮಾಡ್ತೀನಿ. ಬೇಸರವಾಯಿತೋ ಚಿತ್ರ ಬರೆಯುವ ನನ್ನ ಬ್ರಶ್ಶು ಇದ್ದೇಇದೆ. ಇಷ್ಟಕ್ಕೂ ನಾವು ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಬಂದವರು ನೋಡಿ. ಬಂದೆ. ದಿಢೀರನೆ ಹಣ ಬಂತು. ಇಂತಿ ನಿನ್ನ ಪ್ರೀತಿಯ ಮಾಡಿದೆ. ಜನ ಕೊಟ್ಟ ಹಣ ಹಾಕಿದೆ. ಕಳಕೊಂಡೆ. ಆ ಸಿನಿಮಾ ಮಾಡಿದ್ದು ಒಂದು ರೀತಿ ಒಳ್ಳೆಯದೇ ಆಯಿತು. ಇನ್ನೊಂದು ರೀತಿಯಲ್ಲಿ ಕೆಟ್ಟದ್ದೂ ಆಯಿತು. ಏನಾಗುತ್ತದೋ ನೋಡೋಣ...." ಸೂರಿ ಮಾತು ತತ್ವಜ್ಞಾನದಲ್ಲಿ ಮುಕ್ತಾಯವಾಯಿತು.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada