»   » ಲಗೋರಿ ನಾಯಕಿಯಾಗಿ ಜಯಮಾಲಾ ಪುತ್ರಿ

ಲಗೋರಿ ನಾಯಕಿಯಾಗಿ ಜಯಮಾಲಾ ಪುತ್ರಿ

Subscribe to Filmibeat Kannada
Jaymala's daughter soundarya
ಅಂತೂ ಇಂತೂ ಭಟ್ಟರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪುನೀತ್ ಗೆ ನಾಯಕಿ ಸಿಗುವುದು ಇಷ್ಟು ಬರವಾ ಎಂದು ಆಪ್ತರಲ್ಲಿ ಕೇಳಿಕೊಂಡಿದ್ದು ಇದೆ. ಕಾರಣ ಇಷ್ಟೆ, ಲಗೋರಿ ಚಿತ್ರಕ್ಕೆ ಮರಾಠಿ, ತಮಿಳು, ಮಲೆಯಾಳಿ ಮೂಲದ ನಾಯಕಿಯರಿಗೆಲ್ಲಾ ಟ್ರೈ ಮಾಡಿ ಸೋತು ಕಡೆಗೆ ಅಚ್ಚ ಕನ್ನಡತಿಯನ್ನು ತಂದು ಪವರ್ ಸ್ಟಾರ್ ಪಕ್ಕದಲ್ಲಿ ನಿಲ್ಲಿಸಿದ್ದಾರೆ.

ಯೋಗರಾಜ್ ಭಟ್ಟರ ಚಿತ್ರವೆಂದರೆ ಕುತೂಹಲ ಮೂಡುವುದು ಸಹಜ ಅದರಲ್ಲೂ ಪುನೀತ್ ಚಿತ್ರಕ್ಕೆ ನಿರ್ದೇಶನ ಎಂದ ಮೇಲೆ ಕಾತುರತೆಯ ತುತ್ತ ತುದಿಯಲ್ಲಿ ರಸಿಕರನ್ನು ನಿಲ್ಲಿಸಿ ಬಿಡುತ್ತದೆ. ರಾಕ್ ಲೈನ್ ರಂತಹ 'ಧೀರ' ನಿರ್ಮಾಪಕರಿದ್ದರೂ ತಮಿಳು, ಮಲೆಯಾಳಂ ನಾಯಕಿಯರು ಒಲ್ಲೆ ಎಂದಿದ್ದು ಯಾಕೋ ಕರುಮಾರಿಯಮ್ಮನೇ ಬಲ್ಲಳು. ತ್ರಿಷಾ, ಮೀರಾಜಾಸ್ಮಿನ್ ..ಬಾಂಬೆಯಿಂದ ಹೊಸನಟಿ ಕರೆಸುವ ಸುದ್ದಿ ಅಲ್ಲಲ್ಲಿ ಹರಿದಾಡಿ ಈಗ ನಿಂತಿದೆ.

ಕನ್ನಡದ ಹೆಮ್ಮೆಯ ನಟಿ ಜಯಮಾಲಾ ಅವರ ಸುಪುತ್ರಿ ಸೌಂದರ್ಯ ಈಗ ಪುನೀತ್ ಜತೆ ಲಗೋರಿ ಆಡುವ ಪೋರಿ ಎಂಬುದು ಸತ್ಯದ ಮಾತು. ಇದನ್ನು ಸ್ವತಃ ಹಾಲಿ ಕೆಎಫ್ ಸಿಸಿ ಅಧ್ಯಕ್ಷರೇ ದೃಢಪಡಿಸಿದ್ದಾರೆ. ಸೌಂದರ್ಯ ಪ್ರೊಡಕ್ಷನ್ ಸ್ಥಾಪಿಸಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದ ಜಯಮಾಲಾ ಮೇಡಂ ಅವರು, ತಮ್ಮ ಮಗಳ ಚಿತ್ರರಂಗ ಪ್ರವೇಶಕ್ಕೆ ಉತ್ತಮ ಭೂಮಿಕೆಯನ್ನು ಆರಿಸಿದ್ದಾರೆ.

ಮುಂಬಯಿ ಪ್ರತಿಷ್ಠಿತ ಕಿಶೋರ್ ನಮಿತಾ ಕಪೂರ್ ಶಾಲೆಯಲ್ಲಿ ಅಭಿನಯದ ಓನಾಮವನ್ನು ಸೌಂದರ್ಯ ಕಲಿತು ಬಂದಿದ್ದಾರೆ. ನಾಯಕಿಯಾಗುವ ಗುಣಲಕ್ಷಣಗಳನ್ನು ಹೊಂದಿರುವ ಸೌಂದರ್ಯ ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಾರೆಯಾಗಿ ಬೆಳಗಲು ಲಗೋರಿ ಚಿತ್ರದಲ್ಲಿ ಸುವರ್ಣಾವಕಾಶವಿದೆ.

ಕಲಾವಿದರ ಮಕ್ಕಳು ಕಲಾವಿದರೇ ಆಗುತ್ತಿರುವ ಟ್ರೆಂಡ್ ಮುಂದುವರಿಯುತ್ತಿದೆ. "ಸವಿಮಾತು" ಚಿತ್ರದ ಮೂಲಕ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಮಗಳು ಮೇಘನಾ ಚಿತ್ರರಂಗಕ್ಕೆ ಪ್ರವೇಶ ಕೊಟ್ಟಿದ್ದರು. ಹಾಗೆ ನಿರ್ಮಾಪಕ, ನಿರ್ದೇಶಕ ಡಿ. ರಾಜೇಂದ್ರ ಬಾಬು - ಸುಮಿತ್ರ ದಂಪತಿಯ ಮಗಳು 'ನಕ್ಷತ್ರ' ಸರಿಗಮ ಚಿತ್ರದಲ್ಲಿ ನಟಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada