»   » ಸ್ನೇಹ ಜೀವಿ, ಪ್ರೇಮ ಜೀವಿ, ದುಷ್ಟಶಿಕ್ಷಕ ಸೀನ

ಸ್ನೇಹ ಜೀವಿ, ಪ್ರೇಮ ಜೀವಿ, ದುಷ್ಟಶಿಕ್ಷಕ ಸೀನ

Posted By:
Subscribe to Filmibeat Kannada

ಪ್ರೀತಿಸಿದವನ ಬಳಿ ಪ್ರೀತಿಯ ವಿಷಯ ತಿಳಿಸಲು ಹೆಣ್ಣುಮಕ್ಕಳಿಗೆ ಸೂಕ್ತ ಸ್ಥಳ ಬೇಕು. ನಮ್ಮಸೀನನ ದ್ವಿತೀಯ ನಾಯಕಿ ಅಂತರಾ ರೆಡ್ಡಿಗೂ ಇದೇ ಸಮಸ್ಯೆ ಎದುರಾದಾಗ ಆಕೆ ಬೆಂಗಳೂರಿನ ಮೂಲೆಮೂಲೆಗಳಲ್ಲೂ ತಲೆಯೆತ್ತಿರುವ, ಪ್ರೇಮಿಗಳ ಸಂದರ್ಶನಕ್ಕೆ ಶಾಶ್ವತ ನೆಲೆಯಾಗಿರುವ ಕಾಫಿ ಡೇಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತರಾಳ ಆಹ್ವಾನ ಮನ್ನಿಸಿ ಅಲ್ಲಿಗೆ ಆಗಮಿಸಿದ್ದ ನಾಯಕ ತರುಣ್ ಮುಂದೆ ಆಕೆ ಪ್ರೀತಿಯ ವಿಷಯ ಬಿಚ್ಚಿಟ್ಟಾಗ ಆತ ಪ್ರೀತಿಯನ್ನು ತಿರಸ್ಕರಿಸುತ್ತಾನೆ. ಸೀನನ ಪ್ರೀತಿ ಸಿಗದ ಅಂತರಾ ರೆಡ್ಡಿ ಬೆಪ್ಪಾಗುವ ಸನ್ನಿವೇಶವನ್ನು ಮಲ್ಲೇಶ್ವರಂನ ಕಾಫಿ ಡೇಯಲ್ಲಿ ಸೀನ ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳಲಾಯಿತು.

ದುಷ್ಟ ಶಿಕ್ಷಕನಾದ ಸೀನ : ಸೀನ ಯಾರ ತಂಟೆಗೂ ಹೋಗಲ್ಲ. ತನ್ನ ತಂಟೆಗೆ ಬಂದರೆ ಬಿಡೋಲ್ಲ. ಕಷ್ಟ ಜೀವಿಯಾಗಿರುವ ಸೀನ ಸ್ನೇಹಜೀವಿಯೂ ಹೌದು. ಯಾರ ಮೇಲೂ ಹಗೆ ಸಾಧಿಸದ ಸೀನ ಪೆಟ್ರೊಲ್ ಬಂಕ್ ಬಳಿ ಓಡಾಡುತ್ತಿದ್ದನ್ನು ಗಮನಿಸಿದ ಪೆಟ್ರೋಲ್‌ಪ್ರಸನ್ನ ಹಾಗೂ ಸಹಚರರು ಹಳೇ ದ್ವೇಷವನ್ನು ಮನಸಿಗೆ ತಂದುಕೊಂಡು ಅವನನ್ನು ಮುಗಿಸಲು ಮುಂದಾಗುತ್ತಾರೆ. ಆದರೆ ಮಹಾ ಧೈರ್ಯಶಾಲಿಯಾದ ಸೀನ ರೌಡಿಪಡೆಗೆ ತನ್ನ ಕೈ ಚಳಕ ತೋರಿಸುವ ಸನ್ನಿವೇಶವನ್ನು ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಿರ್ದೇಶಕ ಬಸವರಾಜ ಬಳ್ಳಾರಿ ಚಿತ್ರೀಕರಿಸಿಕೊಂಡರು.

ನ್ಯಾಯಾಲಯದಲ್ಲಿ ಸೀನ : ಯಾವುದೊ ಕಾರಣಕ್ಕೆ ಪೊಲೀಸ್ ಅಧಿಕಾರಿ ನೀನಾಸಂ ಅಶ್ವತ್ ಅವರಿಂದ ಬಂಧಿತನಾಗಿದ್ದ ಸೀನ(ತರುಣ್)ನನ್ನು ನ್ಯಾಯಾಲಯಕ್ಕೆ ಹಾಜರು ಪಡೆಸಲಾಗುತ್ತದೆ. ಸೀನನ ಕೇಸ್ ಖುಲಾಸೆ ಮಾಡುವುದು ಕಷ್ಟ. ಹಾಗಾಗಿ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ನ್ಯಾಯಾಧೀಶರು ತಿಳಿಸುವ ಸನ್ನಿವೇಶವನ್ನು ಕಂಠೀರವ ಸ್ಟೂಡಿಯೋದಲ್ಲಿ ನಿರ್ಮಿಸಲಾದ ನಾಯಾಲಯದ ಸೆಟ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಅಂಕಿತ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಮುರುಳಿ ಹಾಗೂ ಡಿ.ಕುಪ್ಪುರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಜಗದೀಶ್ ವಾಲಿ ಕ್ಯಾಮೆರಾ, ನಾಗೇಂದ್ರ ಅರಸ್ ಸಂಕಲನ, ಪರಮೇಶ್, ಹರ್ಷ, ಇಮ್ರಾನ್ ನೃತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಬಾಬುಖಾನ್ ಕಲೆ, ಚೆನ್ನಯ್ಯ ನಿರ್ಮಾಣ ನಿರ್ವಹಣೆ, ನರಸಿಂಹ ಅವರ ನಿರ್ಮಾಣ ಮೇಲ್ವಿಚಾರಣೆ ಸೀನನಿಗಿದೆ. ಖುಷಿ, ಗೆಳೆಯ ಹಾಗೂ ಹನಿಹನಿಯ ನಾಯಕ ತರುಣ್ ಸೀನನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕ ಚಂದ್ರ ಹಾಗೂ ಅಂತರಾ ರೆಡ್ಡಿ ಎಂಬ ಚೆಲುವೆಯರು ನಾಯಕಿಯರಾಗಿದ್ದಾರೆ. ಪೆಟ್ರೋಲ್‌ಪ್ರಸನ್ನ, ಸತ್ಯಜಿತ್, ರಮೇಶ್‌ಭಟ್, ಅವಿನಾಶ್, ಶರತ್‌ಲೋಹಿತಾಶ್ವ, ಮೈಕೋ ನಾಗರಾಜ್, ಶರಣ್, ನೀನಾಸಂ ಅಶ್ವತ್, ಸುಧಾ ಬೆಳವಾಡಿ ಮುಂತಾದವರು ಇವರೊಂದಿಗಿದ್ದಾರೆ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada