ಪತ್ನಿಗೆ ಚಿತ್ರಹಿಂಸೆ ನೀಡಿ, ಕಂಬಿ ಎಣಿಸಿದ ಸಹ ನಿರ್ದೇಶಕ
ಮದುವೆ, ವರದಕ್ಷಿಣೆ, ತವರುಮನೆ, ಹೆಣ್ಣಿನ ಗೋಳಾಟ ಸುತ್ತ ಸುತ್ತುವ ಚಿತ್ರಗಳಿಗೆ ಕನ್ನಡ ಚಿತ್ರರಂಗದಲ್ಲಿ ಈಗ ಮಾರ್ಕೆಟ್ ಇಲ್ಲದಿರಬಹುದು. ಆದರೆ, ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಗಳು ವರದಕ್ಷಿಣೆ, ದೈಹಿಕ ಕಿರುಕುಳ ಕೇಸ್ ನಲ್ಲಿ ಸಿಕ್ಕಿ ಬೀಳುತ್ತಿರುವುದು ಮಾಮೂಲಿಯಾಗುತ್ತಿದೆ. ಗಾಯಕ ಹೇಮಂತ್ ರ ಕೌಟುಂಬಿಕ ಕಲಹ ಕಣ್ಮುಂದೆ ಇರುವಾಗಲೇ, ಪೊರ್ಕಿ, ಕೃಷ್ಣ ಮುಂತಾದ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ದುಡಿದಿದ್ದ ಶಶಿಕಾಂತ್ , ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಬಂಧಿತನಾಗಿದ್ದಾನೆ.
ಕಿರುಕುಳಕ್ಕೆ ಕಾರಣವಾದರೂ ಏನು?: ಕಾರಣ ಕೇಳುವುದಕ್ಕೆ ಸಿಲ್ಲಿ ಎನಿಸಬಹುದು. ಆದರೆ ಸಿನ್ಮಾ ಮಂದಿಗೆ ಅದೇ ದೊಡ್ಡದಾಗಿ ಕಾಣಿಸುತ್ತದೆ. ಕಮಲಾನಗರದ ನೇತ್ರಾವತಿ ಎಂಬುವರನ್ನು 2008ರಲ್ಲಿ ಶಶಿಕಾಂತ್ ಮದುವೆಯಾಗಿದ್ದ. ವಿವಾಹದ ಸಂದರ್ಭದಲ್ಲಿ ಅತ್ತೆ-ಮಾವ ಸಂಪ್ರದಾಯದಂತೆ ಗಂಡಿಗೆ ಪಾದಪೂಜೆ ಮಾಡಬೇಕಿತ್ತು.
ಆದರೆ, ಶಶಿಕಾಂತ್ ಗೆ ಆ ಯೋಗವಿರಲಿಲ್ಲ. ಆಲ್ಲದೆ ನೇತ್ರಾವತಿ ಮನೆ ಕಡೆವರು ಆತನ ಸಂಬಂಧಿಕರ ಉಪಚಾರದಲ್ಲೂ ಕಮ್ಮಿ ಮಾಡಿದ್ದಾರೆ ಎಂದು ಶಶಿಗೆ ಅನಿಸಿದೆ. ಸರಿ, ಮದುವೆಯಾದ ಮರುದಿನದಿಂದಲೇ ನೇತ್ರಾವತಿ ಕಣ್ಣೀರ ಕೋಡಿ ಹರಿಸುವಂತೆ ಮಾಡಿದ್ದಾನೆ ಭೂಪ.
ಸಿನ್ಮಾ ಮಂದಿ ಸಹವಾಸ, ನಿತ್ಯ ಉಪವಾಸ, : ನೇತ್ರಾವತಿಗೆ ಒಪ್ಪತ್ತಿನ ಊಟವೂ ಸಿಗದಂತೆ ಮಾಡಿ, ಇನ್ನಷ್ಟು ವರದಕ್ಷಿಣೆ ಹಣ ತಂದು ಕೊಡುವಂತೆ ಪೀಡಿಸುವುದನ್ನೆ ಶಶಿಕಾಂತ್ ಚಟ ಮಾಡಿಕೊಂಡಿದ್ದ. ಈತನ ಈ ದುಷ್ಕಾರ್ಯಕ್ಕೆ ಅವನ ತಂದೆ ರಂಗ ಹನುಮಯ್ಯ, ತಾಯಿ ಪುಟ್ಟ ನರಸಮ್ಮ, ಸೋದರ ಪಾಂಡುರಂಗ ಹಾಗೂ ಸೋದರಿ ಭಾರತಿ ಬೆಂಬಲಿಗರಾಗಿ ನಿಂತು ಚಿತ್ರಹಿಂಸೆ ಕೊಟ್ಟು ಆನಂದಿಸಿದ್ದಾರೆ.
ಮೂರು ವರ್ಷಗಳ ಕಾಲ ಕಿರುಕುಳ, ಕಣ್ಣೀರು, ಗೋಳು ಅನುಭವಿಸಿದ ನೇತ್ರಾವತಿಗೆ ಕೊನೆಗೂ ಪೊಲೀಸರ ರಕ್ಷಣೆ ದೊರೆತಿದೆ. 35 ವರ್ಷ ಸಹ ನಿರ್ದೇಶಕ ಶಶಿಯನ್ನು ಹಲಸೂರು ಗೇಟ್ ಮಹಿಳಾ ಪೊಲೀಸರು ಬಂಧಿಸಿ, ನ್ಯಾಯಂಗ ವಶಕ್ಕೆ ಒಪ್ಪಿಸಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಚಿತ್ರಹಿಂಸೆ ಅನುಭವಿಸಿದ ನೇತ್ರಾವತಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾಳೆ.


Click it and Unblock the Notifications











