»   » ನಟ ನವೀನ್ ಕೃಷ್ಣ ನಕಲಿ ಸಿಡಿ ಕೇಸ್ ನಲ್ಲಿ ಬಂಧನ?

ನಟ ನವೀನ್ ಕೃಷ್ಣ ನಕಲಿ ಸಿಡಿ ಕೇಸ್ ನಲ್ಲಿ ಬಂಧನ?

Posted By:
Subscribe to Filmibeat Kannada

ನಕಲಿ ಕ್ಯಾಸೆಟ್ ಹಾಗೂ ಸಿಡಿ ತಯಾರಿಕೆಯಿಂದ ಸಾಕಷ್ಟು ಆಡಿಯೋ ಕಂಪನಿಗಳು ನಷ್ಟ ಅನುಭವಿಸಿವೆ.'ಪೈರಸಿ' ಆಡಿಯೋ ಕಂಪನಿಯವರ ಮಹಾಶತ್ರು. ನಾಯಕ ನವೀನ್‌ಕೃಷ್ಣ ಕೂಡ ನಕಲಿ ಸಿಡಿ ಮಾರಾಟದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಆದರೆ ನಿಜ ಜೀವನದಲ್ಲಿ ಅಲ್ಲ ಧಿಮಾಕು ಚಿತ್ರದಲ್ಲಿ.

ನವೀನ್‌ಕೃಷ್ಣ ಸಿಡಿ ಅಂಗಡಿಯ ಮಾಲೀಕ. ಅಂಗಡಿಗೆ ಧಾವಿಸಿದ ಪೋಲೀಸರು ನಕಲಿ ಸಿಡಿ ಮಾರಾಟದ ಆರೋಪದ ಮೇಲೆ ನಾಯಕನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ಸನ್ನಿವೇಶವನ್ನು ರಾಜರಾಜೇಶ್ವರಿ ನಗರದಲ್ಲಿ ನಿರ್ಮಿಸಿರುವ ಸಿಡಿ ಹಾಗೂ ಕ್ಯಾಸೆಟ್ ಅಂಗಡಿ, ಮೊಬೈಲ್, ಜೆರಾಕ್ಸ್ ಮತ್ತು ಕಂಪ್ಯೂಟರ್ ಮಳಿಗೆಗಳ ಅವತರಣಿಕೆಯಲ್ಲಿ ಚಿತ್ರೀಕರಿಸಿಕೊಂಡರು ಯುವ ನಿರ್ದೇಶಕ ಮಗೇಶ್‌ಕುಮಾರ್.

ಶ್ರೀ ಅಂಬಿಕಾ ಕಂಬೈನ್ಸ್ ಲಾಂಛನದಲ್ಲಿ ಹಿರಿಯನಟ ಶ್ರೀನಿವಾಸಮೂರ್ತಿ ಅವರು ಅರ್ಪಿಸಿ ಶ್ರೀಮತಿ ಪುಷ್ಪಾ ಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ಧಿಮಾಕು ಪ್ರೀತ್ಸೋ ಹೃದಯಗಳ ವಿಷಯ. ನಾಯಕ ನವೀನ್‌ಕೃಷ್ಣ ಸ್ನೇಹಿತರಾದ ಶಂಕರ್‌ಬಿಲ್ಲೇಮನೆ, ವಿನೋದ್‌ಪನ್ನಾ ಅವರೊಟ್ಟಿಗೆ ಚಿತ್ರಕ್ಕೆ ಕಥೆ, ರಚಿಸಿದ್ದು ಚೊಚ್ಚಲ ಚಿತ್ರ ನಿರ್ದೇಶಿಸುತ್ತಿರುವ ಮಗೇಶ್‌ಕುಮಾರ್ ಅವರು ಕಥೆ, ಚಿತ್ರಕಥೆ ರಚಿಸುವುದರಲ್ಲಿ ಭಾಗಿಯಾಗಿದ್ದಾರೆ. ನಟ ಶ್ರೀನಿವಾಸಮೂರ್ತಿ ಅವರು ಚಿತ್ರದಲ್ಲಿ ತೆರೆಯ ಮೇಲೆ ಕಾಣದಿದ್ದರೂ ಹಾಡೊಂದನ್ನು ರಚಿಸಿ ಹಾಡುತ್ತಿದ್ದಾರೆ. ನಾಯಕ ನವೀನ್‌ಕೃಷ್ಣ ಅವರೂ ಗೀತೆಯನ್ನು ರಚಿಸಿ, ಹಾಡಿ, ನೃತ್ಯನಿರ್ದೇಶನಮಾಡಿ ಅಭಿನಯಿಸುತ್ತಿರುವುದು ಧಿಮಾಕು ಚಿತ್ರದ ವಿಶೇಷ.

ಮತ್ತೊಂದು ಅಸಲಿ ಕಥೆ

ಕನ್ನಡ ಚಿತ್ರೋದ್ಯಮಕ್ಕೆ ನಕಲಿ ಸಿಡಿ,ಡಿವಿಡಿ ಹಾವಳಿ ಅಷ್ಟಿಷ್ಟಲ್ಲ.ಪೊಲೀಸರ ಬದಲಾಗಿ ಸಿನಿಮಾ ನಿರ್ಮಾಪಕರೇ ನಕಲಿ ಸಿಡಿ ತಯಾರಕರ ವಿರುದ್ಧ ಸಿಡಿದೇಳುತ್ತಿದ್ದಾರೆ. ಮೈಸೂರು ಮತ್ತು ಕೊಳ್ಳೆಗಾಲ ಸ್ಥಳಗಳಲ್ಲಿ ನಕಲಿ ಡಿವಿಡಿಗಳನ್ನು ಎಗ್ಗಿಲ್ಲದಂತೆ ತಯಾರಿಸಲಾಗುತ್ತಿದೆ ಎಂದು ನಕಲಿ ಡಿವಿಡಿ ಮಾರಾಟ ಮಾಡಿ ಬಂಧನಕ್ಕೊಳಗಾಗಿರುವ ಎಚ್‌ಎ‌ಎಲ್ ಕಾಡಬೀಸನಹಳ್ಳಿ ನಿವಾಸಿ ಕುಮಾರ್(25) ಪೊಲೀಸರಿಗೆ ತಿಳಿಸಿದ್ದಾನೆ.

ಮೊನ್ನೆ ನಡೆದ ಘಟನೆ ಹೀಗಿದೆ. ಮೈಸೂರಿನ ಚಿತ್ರಮಂದಿರ ಒಂದರ ಬಳಿ ಕನ್ನಡ ಜನಪ್ರಿಯ ಚಿತ್ರಗಳ ಡಿವಿಡಿಗಳನ್ನು ಮಾರಾಟವಾಗುತ್ತಿವೆ ಎಂಬ ಸುದ್ದಿ ಕೆಲವು ನಿರ್ಮಾಪಕ ಕಿವಿಗೆ ಬಿದ್ದಿದೆ. ಈ ಜಾಡನ್ನು ಅರಸಿ ಹೊರಟ ನಿರ್ಮಾಪಕರಿಗೆ ಸಿಕ್ಕಿದ್ದು ಕುಮಾರ್ ಎಂಬಾತ. ಬಿಂದಾಸ್, ಗಜ, ಗಾಳಿಪಟ ಚಿತ್ರಗಳ ನಕಲಿ ಡಿವಿಡಿಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದುಕೊಂಡ ನಿರ್ಮಾಪಕರು ಕುಮಾರ್‌ನನ್ನು ಬಲೆಗೆ ಕೆಡವಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ನಕಲಿ ಸಿಡಿ ಆಪರೇಷನ್‌ನ ರೂವಾರಿಗಳು ನಿರ್ಮಾಪಕರಾದ ಶ್ರೀನಿವಾಸ ಮೂರ್ತಿ, ಚಂದ್ರಶೇಖರ್, ರಮೇಶ್ ಯಾದವ್ ಮತ್ತು ದಯಾಳ್.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada