ನಿಖಿತಾಗೆ ನಿಷೇಧ: ನಿರ್ಮಾಪಕರ ಮೇಲೆ ಪುನೀತ್ ಗರಂ
ವ್ಯಕ್ತಿಯೊಬ್ಬರ ವೈಯಕ್ತಿಕ ವಿಚಾರವನ್ನು ಗಮನಕ್ಕೆ ತೆಗೆದುಕೊಂಡು ಯಾವುದೇ ಸಂಘ ಸಂಸ್ಥೆಗಳು ತಪ್ಪು ನಿರ್ಧಾರಕ್ಕೆ ಬರುವುದು ಸರಿಯಲ್ಲ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ವಿಷಯವಿದು. ಈ ಘಟನೆಯಲ್ಲಿ ನಿಖಿತಾ ಮೇಲೆ ಏಕೆ ಕ್ರಮಕೈಗೊಂಡರು? ಈ ವಿಚಾರದಲ್ಲಿ ನಿರ್ಮಾಪಕರು ತೆಪ್ಪಗಿರುವುದೇ ಒಳ್ಳೆಯದು ಎಂದಿರುವ ರಾಘಣ್ಣ, ಮಹಿಳೆ ಮೇಲೆ ಕೈ ಮಾಡಿದ್ದು ಮಾತ್ರ ಸರಿಯಲ್ಲ. ದರ್ಶನ್ ಆದಷ್ಟು ಬೇಗ ಬಿಡುಗಡೆಯಾಗಿ ಮತ್ತೆ ಅವರ ಸಂಸಾರ ಸರಿಹೋಗಲಿ ಎಂದಿದ್ದಾರೆ.
ಪುನೀತ್ ಮಾತನಾಡುತ್ತಾ, ಕಲಾವಿದರೊಬ್ಬರ ಮೇಲೆ ನಿಷೇಧ ಹೇರಲು ಇವರ್ಯಾರು? ಶೀಘ್ರದಲ್ಲೆ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ ನನಗಿದೆ. ಈ ರೀತಿಯ ವಿಷಯಗಳನ್ನು ಪರಿಶೀಲಿಸಲು ಕಾನೂನು ಇದೆ. ನಿಖಿತಾ ಮೇಲೆ ನಿಷೇಧ ಹೇರಿದ್ದು ಸರಿಯಲ್ಲ. ಹಾಗೆಯೇ ಯಾವುದೇ ಕಲಾವಿದರಿಗೆ ತೊಂದರೆ ಕೊಡುವುದು ತಪ್ಪು.
ಈ ರೀತಿಯ ಕ್ಷುಲ್ಲಕ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಬಿಟ್ಟು ಗುಣಾತ್ಮಕ ಚಿತ್ರಗಳನ್ನು ನಿರ್ಮಿಸುವತ್ತ ನಿರ್ಮಾಪಕರು ಗಮನ ಹರಿಸಲಿ. ಕಲಾವಿದರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ನಿರ್ಮಾಪಕರ ನಡುವಿನ ಸಮಸ್ಯೆಗಳು ಪರಿಹರಿಸಿಕೊಂಡರೆ ಒಳಿತು ಎಂದಿದ್ದಾರೆ ಪುನೀತ್. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











