»   » ಹಾರಾಡುತ್ತಲೇ ಬೆಳ್ಳಿಹಬ್ಬಆಚರಿಸಿಕೊಂಡ ಗಾಳಿಪಟ

ಹಾರಾಡುತ್ತಲೇ ಬೆಳ್ಳಿಹಬ್ಬಆಚರಿಸಿಕೊಂಡ ಗಾಳಿಪಟ

Subscribe to Filmibeat Kannada

ಅಪಾರ ನಿರೀಕ್ಷೆಗಳ ಒತ್ತಡದೊಂದಿಗೆ ಭರ್ರನೆ ಮೇಲೆ ಹಾರಿ, ನಿರೀಕ್ಷೆಯ ಮಟ್ಟಕ್ಕೇರದೇ ಸಣ್ಣಗೆ ಗಿರಿಕಿ ಹೊಡೆದು, ಚಕ್ಕಾಚಿಕ್ಕಿಗೆ ಬೇರೆ ಯಾವುದೇ ಪ್ರತಿಸ್ಪರ್ಧಿಯಿಲ್ಲದೇ ಹಾಗೆಯೇ ಆಗಸದ ಮೇಲೇರಿದ 'ಗಾಳಿಪಟ' ಸೈಲೆಂಟಾಗಿ 25 ವಾರ ಓಡಿದ ಸಾಧನೆ ಮಾಡಿದೆ.

ನಿರ್ದೇಶಕ ಯೋಗರಾಜ್ ಭಟ್ ಅವರ ಮಾಂತ್ರಿಕ ಸ್ಪರ್ಷ ಕಾಣದಿದ್ದರೂ ಆತ್ಮೀಯವಾದ ಕಥೆ, ಮನಬೆಚ್ಚಗೆ ಮಾಡುವ ಕಾಯ್ಕಿಣಿ ಹಾಡುಗಳು, ಗಣೇಶ್‌ರ ಅದೇ ನಗು ಚಿತ್ರವನ್ನು ಹಿಡಿದೆತ್ತಿದೆಯೆಂದರೆ ತಪ್ಪಾಗಲಾರದು. ಗಜ ಚಿತ್ರದ ನಂತರ ಈ ವರ್ಷದ ಎರಡನೇ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ.

ಈ ಕಾರಣಕ್ಕಾಗಿಯೇ ಇತ್ತೀಚೆಗೆ ಪಿವಿಆರ್ ಚಿತ್ರಮಂದಿರದಲ್ಲಿ ಸಣ್ಣ ಸಂತೋಷಕೂಟವನ್ನು ಚಿತ್ರತಂಡ ಆಚರಿಸಿಕೊಂಡಿತು. ನಿರ್ದೇಶಕ ಯೋಗರಾಜ್ ಭಟ್, ಕಾರ್ಯನಿರ್ವಾಹಕ ನಿರ್ಮಾಪಕ ದಯಾಳ್, ನಾಯಕರಾದ ಗಣೇಶ್, ದಿಗಂತ್, ನಾಯಕಿಯರಾದ ಭಾವನಾ ರಾವ್ ಮತ್ತು ನೀತೂ ಸಂತೋಷಕೂಟದಲ್ಲಿ ಭಾಗವಹಿಸಿದ್ದರು. ದೊಡ್ಡದಾದ ಕೇಕ್ ಕಟ್ ಮಾಡಿ ಸಂತಸವನ್ನು ಚಿತ್ರತಂಡ ಹಂಚಿಕೊಂಡಿತು.

***

ಗಣೇಶ್ ನಟನೆಯ ಮತ್ತೊಂದು ಚಿತ್ರ 'ಸಂಗಮ'ದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ಭರದಿಂದ ಸಾಗಿದೆ. ಬಸವೇಶ್ವರ ನಗರದಲ್ಲಿನ ಮನೆಯೊಂದರಲ್ಲಿ ಶೂಟಿಂಗ್ ಮಾಡಲಾಯಿತು. ತಮಿಳು ಮತ್ತು ತೆಲುಗಿನಲ್ಲಿ ನಟಿಸಿರುವ ವೇದಿಕಾ ಎಂಬ ನಟಿಯನ್ನು ಪ್ರಥಮ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ಎಸ್.ವಿ. ಬಾಬು ನಿರ್ಮಿಸುತ್ತಿರುವ ಸಂಗಮ ಚಿತ್ರಕ್ಕೆ ರವಿ ವರ್ಮಾ ನಿರ್ದೇಶನವಿದೆ.

***

ಭೂಗತಲೋಕದ ಕಥೆಯ ಹಂದರವಿರುವ 'ಮಾದೇಸ' ಚಿತ್ರದ ಮುಖಾಂತರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತೊಮ್ಮೆ ಚಿತ್ರರಸಿಕರ ಮನರಂಜಿಸಲು ಬರುತ್ತಿದ್ದಾರೆ. ಮಾದೇಸನೂ ಜೋಗಿ ಎಬ್ಬಿಸಿದ ಹಾವಳಿಯನ್ನು ಎಬ್ಬಿಸುತ್ತಾನೆಂಬ ಹುಮ್ಮಸ್ಸಿನೊಂದಿಗೆ ಶಿವರಾಜ್ ಶ್ರಮವಹಿಸಿ ನಟಿಸುತ್ತಿದ್ದಾರೆ.

ಡಬ್ಬಿಂಗ್ ಕಾರ್ಯವನ್ನು ಶಿವರಾಜ್‌ಕುಮಾರ್ ಆಕಾಶ್ ಆಡಿಯೋದಲ್ಲಿ ಮುಗಿಸಿದ್ದಾರೆ. ಸ್ಪೆಷಲ್ ಎಫೆಕ್ಟ್ಸ್, ರೀರೆಕಾರ್ಡಿಂಗ್ ಮತ್ತು ಡಿಜಿಟಲ್ ಗ್ರೇಡಿಂಗ್ ಕಾರ್ಯ ಮಾತ್ರ ಬಾಕಿಯಿದ್ದು ಜುಲೈ ತಿಂಗಳ ಕೊನೆಯಲ್ಲಿ ಪ್ರಥಮ ಪ್ರಿಂಟ್ ಹೊರತರುವ ನಿರೀಕ್ಷೆಯಲ್ಲಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ. ಜುಲೈ ಕೊನೆ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂದು ರವಿ ನಿರ್ಧರಿಸಿದ್ದಾರೆ. ಶಿವರಾಜ್ ಮತ್ತು ಶ್ರೀವತ್ಸ ಇಬ್ಬರಿಗೂ ಈ ಚಿತ್ರ ಏಳುಬೀಳಿನ ಪ್ರಶ್ನೆಯಾಗಿದೆ.

ಮುಂಬೈ ಮಾಡೆಲ್ ಸೋನು ಭಾಟಿಯಾ ಎಂಬ ಆಮದು ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ. ಪತ್ರಕರ್ತ ರವಿ ಬೆಳಗೆರೆ, ರವಿ ಕಾಳೆ, ಹರೀಶ್ ರೈ ಮೊದಲಾದವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಸಿ.ಎಸ್.ವಿ. ಸೀತಾರಾಂ ಅವರು ಕ್ಯಾಮೆರಾ ಸಂಭಾಳಿಸಿದ್ದಾರೆ. ಚಿತ್ರಕ್ಕೆ ಮನೋಮೂರ್ತಿ ಸಂಗೀತವಿರುವುದರಿಂದ ಲಯಬದ್ಧ ಸಂಗೀತ ನಿರೀಕ್ಷಿಸಿದರೆ ಅಡ್ಡಿಯಿಲ್ಲ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada