ಸುವರ್ಣ ಟೈಂಸ್ ಆಫ್ ಕರ್ನಾಟಕ ಕನ್ನಡ ದಿನಪತ್ರಿಕೆ ಆರಂಭ

ರಾಜ್ಯದಲ್ಲಿ ಇಷ್ಟೊಂದು ಪತ್ರಿಕೆಗಳಿರುವಾಗ ಮತ್ತೊಂದು ಬೇಕೆ? ಎಂದು ಕೇಳಿದವರೂ ಉಂಟು. ಪತ್ರಿಕೆ ಮಾಡುವುದು ಹುಡುಗಾಟವೇ ಎಂದು ಹೆದರಿಸಿದವರೂ ಉಂಟು. ಆದರೆ ಕನ್ನಡದಲ್ಲಿ "ಹೇಳಿದರು", "ತಿಳಿಸಿದರು" ಎಂದು ವರದಿ ಮಾಡಲು ಸಾಕಷ್ಟು ಪತ್ರಿಕೆಗಳಿವೆ. ವಿಶೇಷ ಲೇಖನ, ಅಂಕಣಗಳ ಪತ್ರಿಕೆಗಳೂ ಇವೆ. ತನಿಖಾ ವರದಿಗಳೂ ಆಗಾಗ್ಗೆ ಪ್ರಕಟವಾಗುತ್ತವೆ. ಲೇಖನ, ವರದಿ ಬರುತ್ತದೆ. ನಂತರ ಏನಾಯ್ತು. ಇದಕ್ಕೆ ಉತ್ತರ ಇಲ್ಲ. ಹೀಗಾಗಿ ಜನರ ದನಿಯಾಗಿ, ಜನಪರ ದನಿಯಾಗಿ ಸುವರ್ಣ ಟೈಮ್ಸ್ ಆಫ್ ಕರ್ನಾಟಕ ರೂಪಿಸುವ ಉದ್ದೇಶ ನಮ್ಮದು ಎಂದು ಪತ್ರಿಕೆ ಹೇಳಿಕೊಂಡಿದೆ.
ಇದು ನಮ್ಮ ಪತ್ರಿಕೆಯಲ್ಲ, ನಿಮ್ಮ ಪತ್ರಿಕೆ. ನಿಮಗಾಗಿಯೇ ಇರುವ ಪತ್ರಿಕೆ. ನಿಮ್ಮ ನೋವು, ನಲಿವು, ಸಂತಸ, ಉತ್ಸಾಹ, ಪ್ರಯೋಗ, ಸಾಧನೆ ಎಲ್ಲವೂ ಇಲ್ಲಿರುತ್ತದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಮಾಹಿತಿ, ಜನ ಸಾಮಾನ್ಯರಿಗೆ ಅಗತ್ಯವಾದ ಕಾನೂನು ತಿಳಿವಳಿಕೆ, ಸರ್ಕಾರದ ಯೋಜನೆಗಳ ವಿವರ, ಅದು ಅನುಷ್ಠಾನವಾಗಿದೆಯೇ, ಆಗಿದ್ದರೆ ಎಷ್ಟು ಆಗಿದೆ, ಯೋಜನೆಯ ಲಾಭ ಸಿಗದೆ ಎಷ್ಟು ಜನ ಪರಿತಪಿಸುತ್ತಿದ್ದಾರೆ, ಅವರಿಗೆ ನ್ಯಾಯ ಒದಗಿಸುವವರು ಯಾರು ಎಂಬಿತ್ಯಾದಿ ಹಲವು ಪ್ರಶ್ನೆಗಳಿಗೆ ಪತ್ರಿಕೆ ಉತ್ತರವಾಗಲಿದೆ.
ನಾಡು, ನುಡಿ,ಪರಂಪರೆ, ವಿಜ್ಞಾನ, ಪರಿಸರ, ಪರೀಕ್ಷಾ ತಯಾರಿ, ಸಂಸ್ಕೃತಿ, ಕಲೆ, ಧರ್ಮ, ನೀತಿ, ನಿಯಮ, ನ್ಯಾಯ ಎಲ್ಲ ವಿಚಾರಗಳ ಮಾಹಿತಿಯ ಮಹಾಪೂರವೇ ಪತ್ರಿಕೆಯಲ್ಲಿ ಮೂಡಿ ಬರಲಿದೆ. ಮಾಹಿತಿಯ ಜೊತೆಗೆ ಮನರಂಜನೆಯೂ ಇರುತ್ತದೆ.


Click it and Unblock the Notifications











