»   » ಸೈಕ್ಲೋನ್‌ ಮಳೆಯ ತಂಪು ವಾತಾವರಣದ ನಡುವೆ ಸಿನಿಮಾ ಕಾವು

ಸೈಕ್ಲೋನ್‌ ಮಳೆಯ ತಂಪು ವಾತಾವರಣದ ನಡುವೆ ಸಿನಿಮಾ ಕಾವು

Subscribe to Filmibeat Kannada

*ಚೆಲ್ವಿ

‘ಅಭಿ’ ಪರವಾಗಿಲ್ಲ .
‘ಕುಟುಂಬ’ವನ್ನು ಸಂಸಾರಸ್ಥರು ನೋಡುತ್ತಿದ್ದಾರೆ.
‘ಪ್ಯಾರಿಸ್‌ ಪ್ರಣಯ’ ಆವರೇಜ್‌.

ಬಹು ನಿರೀಕ್ಷೆಯ ಚಿತ್ರಗಳ ಕುರಿತಾದ ಇಂಥದೊಂದು ಪ್ರೊಗ್ರೆಸ್‌ ರಿಪೋರ್ಟನ್ನು ಗಾಂಧಿನಗರದ ಮಂದಿ ತಿರುಗಾಮುರುಗಾ ಮಾಡಿ ಓದುತ್ತಿರುವ ಹೊತ್ತಿನಲ್ಲೇ ಮತ್ತೆ ಮೂರು ಸಿನಿಮಾಗಳು ಏಕಕಾಲದಲ್ಲಿ ತೆರೆಗಪ್ಪಳಿಸಲು ಸಿದ್ಧತೆ ನಡೆಸಿವೆ.

‘ಲಂಕೇಶ್‌ ಪತ್ರಿಕೆ’, ‘ವಿಜಯ್‌ ಶಾಂತಿ’ ಹಾಗೂ ‘ಬ್ಲಾಕ್‌ ಅಂಡ್‌ ವೈಟ್‌’ ಚಿತ್ರಗಳು ಮೇ 16ರ ಶುಕ್ರವಾರ ತೆರೆ ಕಾಣಲಿವೆ.

‘ಲಂಕೇಶ್‌ ಪತ್ರಿಕೆ’ ಪತ್ರಕರ್ತ ಇಂದ್ರಜಿತ್‌ ನಿರ್ದೇಶನದ ಎರಡನೆಯ ಚಿತ್ರ. ಹಲವು ಕಾರಣಗಳಿಂದ ‘ಲಂಕೇಶ್‌ ಪತ್ರಿಕೆ’ ಸಿನಿಮಾ ಕುತೂಹಲ ಮೂಡಿಸಿದೆ. ಇಂದ್ರಜಿತ್‌ ಸಾರಥ್ಯದ ಲಂಕೇಶ್‌ ಪತ್ರಿಕೆಯ ಹೆಸರನ್ನೇ ಚಿತ್ರವೂ ಹೊಂದಿರುವುದು ಮೊದಲ ಆಕರ್ಷಣೆ. ಅದೇರೀತಿ, ಕಮಲಹಾಸನ್‌ ಜೊತೆ ನಟಿಸಿ ಭಾರೀ ಸುದ್ದಿ ಮಾಡಿದ್ದ ವಸುಂಧರಾ ದಾಸ್‌ ‘ಲಂಕೇಶ್‌ ಪತ್ರಿಕೆ’ ಮೂಲಕ ಕನ್ನಡ ಸಿನಿಮಾ ಪ್ರವೇಶಿಸುತ್ತಿದ್ದಾರೆ. ಇಂದ್ರಜಿತ್‌ ನಿರ್ದೇಶನದ ‘ತುಂಟಾಟ’ ಯಶಸ್ಸಿನ ರುಚಿ ಕಂಡಿದ್ದರಿಂದ- ‘ಲಂಕೇಶ್‌ ಪತ್ರಿಕೆ’ ಬಗೆಗೆ ನಿರೀಕ್ಷೆಗಳು ಹೆಚ್ಚಾಗಿವೆ.

ಅಮೆರಿಕ ಅಮೆರಿಕ ಚಿತ್ರದ ಖ್ಯಾತಿಯ ಜಿ.ನಂದಕುಮಾರ್‌ ನಿರ್ಮಾಣದ ‘ವಿಜಯ್‌ ಶಾಂತಿ’ ಇಂದ್ರಜಿತ್‌ರ ‘ಲಂಕೇಶ್‌ ಪತ್ರಿಕೆ’ಗೆ ನೇರ ಪೈಪೋಟಿ ನೀಡಿದೆ. ಕೆ.ಎಸ್‌.ನಾಗೇಶ್ವರರಾವ್‌ ‘ವಿಜಯ್‌ ಶಾಂತಿ’ ಚಿತ್ರದ ನಿರ್ದೇಶಕರು. ಸಕಲ ತೆಲುಗು ಮಸಾಲೆಗಳನ್ನೂ ಒಳಗೊಂಡಿರುವ ನಾಯಕಿ ವಿಜಯ ಶಾಂತಿ ಹೆಸರನ್ನೇ ಹೊಂದಿರುವ ‘ವಿಜಯ್‌ ಶಾಂತಿ’ ಸಿನಿಮಾ ಮಾರಾಮಾರಿ ನೋಡುಗರಿಗೆ ಇಷ್ಟವಾಗುತ್ತದೆನ್ನುವ ನಿರೀಕ್ಷೆ ನಿರ್ಮಾಪಕ ನಿರ್ದೇಶಕರದು.

‘ವಿಜಯ್‌ ಶಾಂತಿ’ ಹಾಗೂ ‘ಲಂಕೇಶ್‌ ಪತ್ರಿಕೆ’ ನಡುವೆ ತನ್ನ ಸ್ಥಾನವನ್ನು ಕಂಡುಕೊಳ್ಳಲು ‘ಬ್ಲಾಕ್‌ ಅಂಡ್‌ ವೈಟ್‌’ ಚಿತ್ರ ಹೆಣಗುತ್ತಿದೆ. ಸಂಗೀತ ನಿರ್ದೇಶಕ ರಾಜೇಶ್‌ ರಾಮನಾಥ್‌ ನಾಯಕರಾಗಿ ಅಭಿನಯಿಸಿರುವ ಮೊದಲ ಚಿತ್ರವಿದು. ರಾಜೇಶ್‌ ರಾಮನಾಥ್‌ ಸಂಗೀತ ನೀಡುತ್ತಿರುವ ಐವತ್ತನೇ ಚಿತ್ರ ಎನ್ನುವ ಅಂಕಿಅಂಶ ಹಾಗೂ ನಾಯಕ ನಟ ಸುದೀಪ್‌ ಹಾಡೊಂದನ್ನು ಹಾಡಿದ್ದಾರೆ ಎನ್ನುವ ವಿಶೇಷತೆ ಚಿತ್ರಕ್ಕಿದೆ.

ಪ್ರಚಾರದ ದೃಷ್ಟಿಯಲ್ಲಿ ‘ಲಂಕೇಶ್‌ ಪತ್ರಿಕೆ’ ಉಳಿದೆರಡೂ ಚಿತ್ರಗಳನ್ನು ಹಿಂದೂಡಿದೆ. ನಿಜವಾದ ಫಲಿತಾಂಶಕ್ಕೆ ವಾರಕಾಲ ಕಾಯಬೇಕು !

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada