»   » ಮೇಕಪ್‌ ಹಚ್ಚಿದವರು, ಅಳಿಸಿದವರು ಇವರು

ಮೇಕಪ್‌ ಹಚ್ಚಿದವರು, ಅಳಿಸಿದವರು ಇವರು

Posted By: Staff
Subscribe to Filmibeat Kannada
Karnataka Elections-2004
ಬೆಂಗಳೂರು : ಬಣ್ಣದ ಮಂದಿಯನ್ನು ಎಲ್ಲಿ ಇಡಬೇಕೋ, ಅಲ್ಲಿಯೇ ಇಟ್ಟಿದ್ದಾನೆ ಮತದಾರ. ಚಿತ್ರಗಳಲ್ಲಿ ಕುಣಿದು ಇನ್ನೊಂದು ರೀತಿ ಕ್ಯಾಚ್‌ ಮಾಡಲು ಹೊರಟ ಗಾಂಧಿನಗರದ ಜನರನ್ನು ದೂರವಿಟ್ಟು ತನ್ನ ಶಾಣ್ಯಾತನ ತೋರಿಸಿದ್ದಾನೆ ಮತದಾರ. ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳನ್ನು ಸೇರಿ ಒಟ್ಟು 18 ಜನ ಚಿತ್ರರಂಗದಿಂದ ರಾಜಕಾರಣಕ್ಕೆ ಹಾರಲು ಈ ಬಾರಿ ಯತ್ನಿಸಿದ್ದರು. ಅದರಲ್ಲಿ ಯಶಸ್ವಿಯಾದವರು ಕೇವಲ 6 ಜನ ಮಾತ್ರ. ಉಳಿದ 12 ಜನ ಸೋಲಿನ ಶಾಲು ಹೊದ್ದುಕೊಂಡರು! ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಟ ಅಂಬರೀಷ್‌ ಮೂರನೇ ಬಾರಿ ಗೆಲ್ಲುವುದರ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಹಿರೇಕೆರೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದ ಕೌರವ ಬಿ.ಸಿ.ಪಾಟೀಲ್‌, ಹಳೆಯ ಹುಲಿ ಬನ್ನಿಕೋಡ್‌ ಅವರನ್ನು ಮಣ್ಣು ಮುಕ್ಕಿಸಿ ಮೀಸೆ ತಿರುವಿದ್ದಾರೆ.

ಚನ್ನಪಟ್ಟಣದಲ್ಲಿ ಯೋಗೀಶ್ವರ್‌ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಕುತೂಹಲ ಕೆರಳಿಸಿದ್ದ ಸೊರಬ ವಿಧಾನಸಭೆ ಕ್ಷೇತ್ರದಲ್ಲಿ ಕುಮಾರ್‌ ಬಂಗಾರಪ್ಪ ಸೂಪರ್‌ ಲೊಟ್ಟೊ ಹೊಡೆದಿದ್ದಾರೆ. ಹಿಂದೊಮ್ಮೆ ಎಡವಿ ಬಿದ್ದಿದ್ದ ಕಿರುತೆರೆ ನಟ ನೆ.ಲ. ನರೇಂದ್ರಬಾಬು ಈ ಸಲ ನೆಲದಿಂದ ಮೇಲೆದ್ದು ರಾಜಾಜಿನಗರದ ರಾಜರಾಗಿದ್ದಾರೆ. ನಿರ್ಮಾಪಕರ ವೇದಿಕೆ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಗೆದ್ದಿದ್ದಾರೆ.

ವಿಶೇಷವೆಂದರೆ, 6ರಲ್ಲಿ 4 ಅಭ್ಯರ್ಥಿಗಳು ಕಾಂಗ್ರೆಸ್‌ ಟಿಕೆಟಿನಿಂದ ಜಯಗಳಿಸಿದ್ದಾರೆ. ಬಿ.ಸಿ. ಪಾಟೀಲ್‌ ಮತ್ತು ಕುಮಾರ ಸ್ವಾಮಿ ಜಾ. ದಳದಿಂದ ಗೆದ್ದಿದ್ದಾರೆ.

ತುರುವೇಕೆರೆ ವಿಧಾನಸಭೆಯಿಂದ ಸ್ಪರ್ಧಿಸಿದ್ದ ನಟ ಜಗ್ಗೇಶ್‌ ಗೆಲ್ಲುವ ಭರವಸೆ ಹೊಂದಿದ್ದರು. ಅದಕ್ಕಾಗಿ ಆ ಕ್ಷೇತ್ರದಲ್ಲಿ ಕಳೆದ 2 ವರ್ಷಗಳಿಂದ ಅನೇಕ ಕೆಲಸ ಮಾಡಿಸಿದ್ದರು. ಅಸಲಿ ಮುಖ್ಯಮಂತ್ರಿ ಎದುರು ಚಂದ್ರು ಪಂಚೆಯಿಂದ ಕಣ್ಣೀರು ಒರೆಸಿಕೊಳ್ಳುತ್ತಿದ್ದಾರೆ. ಅದೇ ಚಾಮರಾಜಪೇಟೆಯ ಜೆ.ಡಿ.ಎಸ್‌ನ ಅನಂತ್‌ನಾಗ್‌ ಕ್ಷೌರ ಮಾಡಿದರೂ ಗಿಟ್ಟಲಿಲ್ಲ. ಬಿಜೆಪಿಯ ಅನಂತ ಕುಮಾರ್‌ ಅವರನ್ನು ಕೆಸರಲ್ಲಿ ಹಾಕಲು ಯತ್ನಿಸಿದ್ದ ಅಭಿನಯ ಶಾರದೆ ಜಯಂತಿ ಅಕ್ಷರಶಃ ಎಡಕಲ್ಲು ಗುಡ್ಡದ ಮೇಲೆ ಬದುಕು ನಡೆಸುವಂತಾಗಿದೆ. ಕಳೆದ ಬಾರಿ ಚಿತ್ರದುರ್ಗ ಲೋಕಸಭೆಯಿಂದ ಅಚ್ಚರಿಯಾಗಿ ಆಯ್ಕೆಯಾಗಿದ್ದ ಶಶಿಕುಮಾರ್‌ ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭೆಯಿಂದ ಸ್ಪರ್ಧಿಸಿ ಜಾರಿಬಿದ್ದ ಜಾಣ(?)ನಾಗಿದ್ದಾನೆ.

ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆನರಾ ಲೋಕಸಭೆಯ ನಟ ರಾಮಕೃಷ್ಣ, ಶಿವಮೊಗ್ಗ ಲೋಕಸಭೆಯ ದೊಡ್ಡಣ್ಣ ದಿಕ್ಕಾಪಾಲಾಗಿದ್ದಾರೆ. ಕನ್ನಡನಾಡು ಪಕ್ಷದಿಂದ ಕಣಕ್ಕೆ ಇಳಿದಿದ್ದ ನಟ- ನಿರ್ಮಾಪಕ ದ್ವಾರಕೀಶ್‌, ಜೋಸೈಮನ್‌ ಮತ್ತು ಸತೀಶ್‌ಚಂದ್ರ ನಾವದಗಿ ಗೆಲುವು ಸಾಧಿಸಲಿಲ್ಲ.(ಸ್ನೇಹಸೇತು: ವಿಜಯ ಕರ್ನಾಟಕ)

English summary
Karnataka Elections-2004 : Poor show by Film stars
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada