»   » ಅಮಿತಾಬ್‌, ಹೃತಿಕ್‌, ಶಾರುಖ್‌, ಜ್ಯೂಹಿ, ಊರ್ಮಿಳಾಗೆ ಜೀವಭಯ !

ಅಮಿತಾಬ್‌, ಹೃತಿಕ್‌, ಶಾರುಖ್‌, ಜ್ಯೂಹಿ, ಊರ್ಮಿಳಾಗೆ ಜೀವಭಯ !

By: ದೀಪಾ ಗುಪ್ತ, ಮುಂಬಯಿ
Subscribe to Filmibeat Kannada

'ರುಪಯಾ ದೇದೋ, ವರ್ನಾ ಖಲ್ಲಾಸ್‌ !"ಅಮಿತಾಬ್‌ ಬಚ್ಚನ್‌, ಹೃತಿಕ್‌ ರೋಷನ್‌, ಶಾರುಖ್‌ ಖಾನ್‌, ಜ್ಯೂಹಿ ಚಾವ್ಲಾ, ಊರ್ಮಿಳಾ ಮಾತೋಂಡ್ಕರ್‌, ಮೊನಿಷಾ ಕೊಯಿರಾಲ, ಸೋನಾಲಿ ಬೇಂದ್ರೆ....ಇನ್ನೂ ಅನೇಕರ ಹಣೆಯಲ್ಲಿ ಬೆವರು. ಎಲ್ಲಿಗೆ ಹೋಗಬೇಕಾದರೂ ಬಂದೂಕುಧಾರಿ ಪೊಲೀಸರ ಸಾಥಿ. ಇವರೆಲ್ಲರಿಗೆ ಮಾಫಿಯಾ ಜೀವಭಯ ಒಡ್ಡಿದೆ.

ಯೂಎಇಗೆ ಪೇರಿ ಕಿತ್ತಿದ್ದ ಅಬು ಸಲೀಂ ಬಂದಿದ್ದಾನೆ. 'ಹಫ್ತ ದೇದೋ, ವರ್ನಾ ಗೋಲೀ ಖಾ" ಎಂಬ ಮಾಫಿಯಾ ಮೊನಚಿನ ಮಾತು ಇದೀಗ ಮುಂಬಯಿ ಗಲ್ಲಿಗಳಲ್ಲಿ ಮತ್ತೆ ರಾಜಾರೋಷವಾಗಿ ಪ್ರತಿಧ್ವನಿಸತೊಡಗಿದೆ. 1997ರ ಗುಲ್ಷನ್‌ ಕುಮಾರ್‌ ಹತ್ಯೆಯ ಪ್ರಮುಖ ಆರೋಪಿ ಇದೇ ಅಬು ಸಲೀಂ. ಆಗ ವಿದೇಶಕ್ಕೆ ಹಾರಿ ಹೋದವನು ಮತ್ತೆ ಬಂದಿದ್ದಾನೆ. ಮುಂಬಯಿ ಮಾಫಿಯಾ ಚಾದರ ಕಿತ್ತು ಮತ್ತೆ ಮೇಲೆದ್ದಿದೆ. ಈ ಬಾರಿ ಹಫ್ತಾ ವಸೂಲಿಗೆ ಸಿನಿಮಾ ನಾಯಕ/ನಾಯಕಿಯರೇ ಗುರಿ. ದುಡ್ಡು ಕೊಡಿ, ಇಲ್ಲದಿದ್ರೆ ಜೀವದ ಆಸೆ ಬಿಡಿ ಅನ್ನೋದು ಇವರ ತಾರಕ ಮಂತ್ರ.

ಕಳೆದ ವಾರ ಲಾರೆನ್ಸ್‌ ಡಿಸೋಜ ಎಂಬ ನಿರ್ಮಾಪಕನ ಬಗಲಲ್ಲೇ ಗುಂಡು ಹಾರಿತು. ಆತ ಬಚಾವ್‌ ಆದ. ಆದರೆ ಆಗ ಹಾರಿದ್ದು ಎಚ್ಚರಿಕೆಯ ಗುಂಡು. ಹಫ್ತಾ ಹೋಗದಿದ್ದರೆ, ಮುಂದಿನ ಗುಂಡು ಎದೆ ಸೀಳುತ್ತದೆ ಎಂಬುದರ ಎಚ್ಚರಿಕೆ. ಇದಕ್ಕೂ ಮುಂಚೆ ಅಮೀರ್‌ ಖಾನ್‌ ಮತ್ತು ಆಶುತೋಷ್‌ ಗೌರೀಕರ್‌- ಇಬ್ಬರನ್ನೂ ಕೊಲ್ಲಲು ಪ್ಲಾಟ್‌ ಮಾಡಿದ್ದ ಒಬ್ಬಾತನನ್ನು ಪೊಲೀಸರು ಬಂಧಿಸಿದ್ದರು.

ಈಗ ಮುಂಬಯಿ ಪೊಲೀಸ್‌ ಇಲಾಖೆಯ ಅದೆಷ್ಟೋ ತುಕಡಿಗಳು ಬಾಲಿವುಡ್ಡಿಗರ ಸಂಗದಲ್ಲೇ ಇರಬೇಕಾದ ಪರಿಸ್ಥಿತಿ. ರಿಂಗಿಸುವ ಮೊಬೈಲು ಗೊತ್ತಿಲ್ಲದ ನಂಬರು ತೋರಿಸಿದರೆ ಸಿನಿಮಾ ಮಂದಿಯ ಎದೆ ಢವಢವ.

ದುರ್ಭಿಕ್ಷದಲ್ಲಿ ಅಧಿಕ ಮಾಸ ಎಂಬಂತಾಯಿತು..ಬಾಲಿವುಡ್‌ನಲ್ಲಿ ಈಗ ಬೊಕ್ಕಸ ಭಣಭಣ, ಬಿಸಿನೆಸ್ಸು ಭಾರೀ ಡಲ್ಲು. ಕಳೆದಾರು ತಿಂಗಳಲ್ಲಿ ಮಕಾಡೆ ಮಲಗಿದ ಚಿತ್ರಗಳು ಬರೋಬ್ಬರಿ 150. ಈಗ ತೆರೆ ಕಂಡಿರುವ 'ದೇವದಾಸ"ನ ಮೇಲೆ ಅನಾಮತ್ತು 50 ಕೋಟಿ ಬಂಡವಾಳ ಸುರಿಯಲಾಗಿದೆ. ನಮ್ಮ ಕನ್ನಡ ಸಿನಿಮಾ ನಿರ್ಮಾಪಕ ಧನರಾಜ್‌ ಒಂದು ಎಚ್‌ಟೂಓಗೆ ಐದಾರು ಕೋಟಿ ಸುರಿದೇ ಹೈರಾಣಾಗಿ ಹೋಗಿದ್ದಾರೆ. ಇನ್ನು ಐವತ್ತು ಕೋಟಿಯ ಮಾತೆಂದರೆ ಹುಡುಗಾಟವಾ. ಅದರಲ್ಲೂ ಹೂಡಿರುವ ಬಂಡವಾಳ ಒಬ್ಬನದೇ ಆಗಿರುವುದಿಲ್ಲ. ಮಾರುಕಟ್ಟೆ ತಲೆನೋವೇ ನಿರ್ಮಾಪಕರಿಗೆ ಶಮನವಾಗಿಲ್ಲ. ಅದರ ಮೇಲೆ ಉರಿವ ಗಾಯಕ್ಕೆ ಉಪ್ಪಿನಂತೆ ಭೂಗತ ಲೋಕದ ಧಮಕಿ.

ಭೂಗತ ಲೋಕದ ಜೊತೆ ಕೊಂಡಿ ಹಾಕಿಕೊಂಡಿದ್ದಾರೆಂಬ ಆರೋಪದಲ್ಲಿ ನಿರ್ಮಾಪಕ ಭರತ್‌ ಷಾ ಬಂಧಿತರಾಗಿ, ಜಾಮೀನು ಪಡೆದರು. ಅದಾದ ನಂತರ ಮುಂಬಯಿಯಲ್ಲಿ ಪೊಲೀಸ್‌ ಕಾರ್ಯಾಚರಣೆಗೆ ಹೊಸ ವೇಗ ದಕ್ಕಿತು. ಸುಪಾರಿ ಕೊಲೆಗಡುಕರು ಮುದುರಿಕೊಂಡರು. ಅಬು ಸಲೀಂ ಪೇರಿ ಕಿತ್ತ ನಂತರವಂತೂ ಪರಿಸ್ಥಿತಿ ಸಾಕಷ್ಟು ತಹಬಂದಿಗೆ ಬಂದಿತ್ತು.

ಆದರೀಗ ಅಬು ಸಲೀಂನ ಕಾಣದ ಕೈ ಮತ್ತೆ ಕೆಲಸ ಶುರುವಿಟ್ಟುಕೊಂಡಿದೆ. ಸುಪಾರಿ ಕೊಲೆಗಡುಕರೂ ಮೈಮುರಿದೆದ್ದಿದ್ದಾರೆ. ಸಿನಿಮಾ ತಾರೆಗಳ ಮೊಬೈಲುಗಳು ರಿಂಗಿಸುತ್ತವೆ. ಅನಾಮಧೇಯನ ಧಮಕಿ ಕೇಳುತ್ತದೆ- 'ರುಪಯಾ ದೇದೋ, ವರ್ನಾ ಖಲ್ಲಾಸ್‌ !" ತಾರೆಗಳ ತಲೆ ಮೇಲೆ ತೂಗುಕತ್ತಿ. 'ಕರೆ ಬಂದದ್ದೆಲ್ಲಿಂದಾ?"- ಪೊಲೀಸರು ಓಡುತ್ತಾರೆ ಬೆನ್ನತ್ತಿ !

English summary
Mumbai Mafia threatens to kill Amitabh, Hritik, Urmila, Juhi and Sharukh!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada