»   » ಚಿತ್ರದ ಹೆಸರೂ ಎರಡೇ ಅಕ್ಷರದ್ದು- ‘ಕರ್ಣ’.

ಚಿತ್ರದ ಹೆಸರೂ ಎರಡೇ ಅಕ್ಷರದ್ದು- ‘ಕರ್ಣ’.

Posted By: Staff
Subscribe to Filmibeat Kannada

ಯಶಸ್ಸಿನ ಅಲೆ ಮೇಲೆ ತೇಲುತ್ತಿರುವ ಪುನೀತ್‌ ಉರುಫ್‌ ಅಪ್ಪು ಮುಂದಿನ ಚಿತ್ರ ಯಾವುದು?
ವಜ್ರೇಶ್ವರಿ ಕಂಬೈನ್ಸ್‌ನ ಪಡಸಾಲೆಯಲ್ಲಿ ಈ ಕುರಿತು ಸಾಕಷ್ಟು ವಿದ್ಯಮಾನಗಳು ನಡೆಯುತ್ತಿವೆ. ಚರ್ಚೆಗೆ ಎಣೆಯಿಲ್ಲ. ಎಡತಾಕುತ್ತಿರುವ ನಿರ್ಮಾಪಕರು, ನಿರ್ದೇಶಕರಿಗೆ ಲೆಕ್ಕವಿಲ್ಲ. ಪಾರ್ವತಮ್ಮ ಮತ್ತು ಅಪ್ಪುವಿನ ಮುಂದೆ ಕಥೆಯಾಪ್ಪಿಸಿ, ಹ್ಯಾಪುಮೋರೆ ಹಾಕಿಕೊಂಡು ಹೊರಗೆ ಬರುತ್ತಿರುವವರ ಸಂಖ್ಯೆಯೂ ಚಿಕ್ಕದಾಗಿಲ್ಲ !

ಎಲ್ಲಾ 'ಅಪ್ಪು" ಚಿತ್ರದ ಯಶಸ್ಸಿನ ಮಹಿಮೆ. ತುಂಬಿದ ಪ್ರದರ್ಶನಗಳಿಂದಲೇ ನೂರು ದಿನ ಪೂರೈಸಿ ಇವತ್ತೂ ನೂಕುನುಗ್ಗಲಲ್ಲಿ ಟಿಕೇಟು ಬಿಕರಿ ಮಾಡುತ್ತಿರುವ ಚಿತ್ರ ಅಪ್ಪು. ಹಾಗೆ ನೋಡಿದರೆ, ರಾಜ್‌ಕುಮಾರ್‌ ಪುತ್ರ ತ್ರಯರ ಪೈಕಿ ಸದ್ಯದ ಗೆಲುವಿನ ಕುದುರೆ ಅಪ್ಪು ಅನ್ನೋದೇ ಗಾಂಧಿನಗರ ಪಂಡಿತರ ಅಂಬೋಣ. ಶಿವರಾಜ್‌ ಕುಮಾರ್‌ ನಾಯಕತ್ವದ ಹದಿನೆಂಟು ಚಿತ್ರಗಳು ತಾಚೊಂಡ ನಂತರ ತೆರೆಗೆ ಬಂದ ಅಪ್ಪು ನಿರೀಕ್ಷೆಗಳನ್ನು ಹುಸಿಯಾಗಿಸಿ, ವಜ್ರೇಶ್ವರಿ ಗಲ್ಲಾವನ್ನು ಝಣಝಣ ಮಾಡಿದೆ. ಇನ್ನೊಂದು ಕಡೆ ಕಿರುತೆರೆ ನಿರ್ಮಾಪಕನಾಗಿಯೂ ಅಣ್ಣ ರಾಘವೇಂದ್ರ ಜೊತೆ ಅಪ್ಪು ಜಾಣತನ ತೋರಿದ್ದಾರೆ. ಈ ಟಿವಿಯಲ್ಲಿ ಪ್ರತಿ ರಾತ್ರಿ 10 ಗಂಟೆಗೆ ಪ್ರಸಾರವಾಗುವ 'ಬೆಳದಿಂಗಳಾಗಿ ಬಾ" ಧಾರಾವಾಹಿ ವಜ್ರೇಶ್ವರಿ ಕಂಬೈನ್ಸ್‌ ಬೊಕ್ಕಸಕ್ಕೆ ಅಕ್ಷರಶಃ ಬೆಳದಿಂಗಳನ್ನು ತಂದಿದೆ.

ಈಗ ಅಪ್ಪು ಇನ್ನೂ ಬೆಳೆದಿದ್ದಾರೆ; ಮಾನಸಿಕವಾಗಿ ಮತ್ತು ದೈಹಿಕವಾಗಿ. ಭಾರೀ ಕಸರತ್ತು ಮಾಡಿ ಮೈಕಟ್ಟನ್ನು ಕಟ್ಟುಮಸ್ತಾಗಿಸಿಕೊಂಡಿರುವ ಪುನೀತ್‌ ಕುಣಿತದಲ್ಲೂ ಕಮ್ಮಿಯಿಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾಗಿದೆ. ಜೊತೆಗೆ ಕಥೆ ಹಿಡಕೊಂಡು ಬಂದ ನಿರ್ಮಾಪಕ- ನಿರ್ದೇಶಕರ ಬುಲಾವಿಗೆ ಏಕ್‌ದಂ ಹ್ಞೂಂಗುಟ್ಟುವ ಜಾಯಮಾನದವರಲ್ಲ ಅನ್ನೋದನ್ನೂ ಗೊತ್ತು ಪಡಿಸಿದ್ದಾರೆ. ಹಾಗಾದರೆ ಅಪ್ಪು ಮುಂದಿನ ಚಿತ್ರ ಯಾವುದು?

ವಜ್ರೇಶ್ವರಿ ಕಚೇರಿಯ ನಂಬಲರ್ಹ ಮೂಲಗಳ ಪ್ರಕಾರ ಅಪ್ಪು ಮುಂದಿನ ಚಿತ್ರದ ಹೆಸರು ಕರ್ಣ. ಅದರ ನಿರ್ದೇಶಕ ದಿನೇಶ್‌ ಬಾಬು. ಸೆಪ್ಟೆಂಬರ್‌ ತಿಂಗಳಲ್ಲಿ ಈ ಹೊಸ ಚಿತ್ರ ಸೆಟ್ಟೇರಲಿದೆ.

ಅಂದಹಾಗೆ, ದಿನೇಶ್‌ ಬಾಬು ಹೇಳಿದ ಕತೆ ಅಪ್ಪುಗೆ ಮೆಚ್ಚಾದ ನಂತರವೇ ಅಂತೆ ಈ ಪ್ರಾಜೆಕ್ಟ್‌ಗೆ ಓಕೆ ಅಂದದ್ದು !

English summary
Which is Puneets next movie?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada