»   » ಅಂತರರಾಷ್ಟ್ರೀಯ ಚಿತ್ರೋತ್ಸವ ಬಿಕೋ

ಅಂತರರಾಷ್ಟ್ರೀಯ ಚಿತ್ರೋತ್ಸವ ಬಿಕೋ

Subscribe to Filmibeat Kannada

*ನಮ್ಮ ದೆಹಲಿ ಪ್ರತಿನಿಧಿಯಿಂದ

ಪ್ರತಿನಿಧಿಗಳು ನಿರಾಶರಾಗಿದ್ದಾರೆ. ಪ್ರಾದೇಶಿಕ ಚಿತ್ರ ನಿರ್ದೇಶಕರಿಗೆ ಬೇಸರವಾಗಿದೆ. ಮಾಧ್ಯಮ ಪ್ರತಿನಿಧಿಗಳು ದಿಕ್ಕು ತಪ್ಪಿದಂತಾಗಿದ್ದಾರೆ. ಸದ್ದು ಗದ್ದಲಗಳೊಡನೆ ಉದ್ಘಾಟನೆಗೊಂಡ ಫಿಲ್ಮ್‌ ಬಜಾರ್‌ ಭಣಗುಡುತ್ತಿದೆ- ದೆಹಲಿಯಲ್ಲಿ ನಡೆಯುತ್ತಿರುವ 34ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ದ ಪಕ್ಷಿನೋಟವಿದು.

ಪ್ರತಿಷ್ಠಿತ ಚಿತ್ರೋತ್ಸವದ ಗತಿಯೇ ಈ ಪರಿಯಾದರೆ ಹೇಗೆ ಸ್ವಾಮಿ ಅಂತ ಸಂಬಂಧ ಪಟ್ಟವರನ್ನು ಕೆಣಕುವುದೂ ಇಲ್ಲಿ ಕಷ್ಟದ ಕೆಲಸ. ಹಾಗಿದೆ ವ್ಯವಸ್ಥೆ. ಪನೋರಮಾ ವಿಭಾಗದಲ್ಲಿ ಚೆಂದದ ಹಿಂದಿ ಮತ್ತು ವಿದೇಶೀ ಚಿತ್ರಗಳ ಭರಾಟೆಯಲ್ಲಿ ಪ್ರಾದೇಶಿಕ ಚಿತ್ರಗಳು ಅವಗಣನೆಗೆ ತುತ್ತಾಗಿವೆ. ಇನ್ನು ನೋಡುಗರಿಗೆ ಉಳಿದಿರುವುದು ಎರಡೇ ಆಯ್ಕೆ- ಒಂದು ಹಿಂದಿ ಚಿತ್ರ ನೋಡುವುದು. ಇಲ್ಲವೇ ವಿದೇಶೀ ಚಿತ್ರಗಳತ್ತ ಮುಖ ಮಾಡುವುದು. ವಿದೇಶೀ ಚಿತ್ರಗಳು ಭಾರತೀಯ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ ಅನೇಕರು ವಿದೇಶೀ ಚಿತ್ರಗಳನ್ನು ನೋಡಲು ಜೈ ಎಂದರು.

ಜೋರಾಗಿ ಉದ್ಘಾಟನೆಗೊಂಡ ಫಿಲ್ಮ್‌ ಬಜಾರ್‌ ವಿದೇಶೀ ಗಿರಾಕಿಗಳಿಗೆ ಇದಿರು ನೋಡುತ್ತಾ ಖಾಲಿ ಹೊಡೆಯುತ್ತಿದೆ. ಇಲ್ಲಿ ಭಾರತೀಯ ಸಿನಿಮಾಗಳ ಫಸಲು ಜೋರಾಗಿದೆಯಾದರೂ, ಕೊಳ್ಳಲು ಮುಂದೆ ಬಂದಿರುವ ಗಿರಾಕಿಗಳು ತೀರಾ ಕಡಿಮೆ. ಚಿತ್ರೋತ್ಸವದ ನಿರ್ದೇಶನಾಲಯವಂತೂ ಪ್ರಾದೇಶಿಕ ಚಿತ್ರಗಳನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನೋಡುತ್ತಿದೆ.

ಪಾಪ, ನಾಗಾಭರಣ : ಎಂಟನೇ ಬಾರಿಗೆ ಭಾರತೀಯ ಪನೋರಮಾವನ್ನು ಪ್ರತಿನಿಧಿಸುತ್ತಿರುವ ಕನ್ನಡದ ನಿರ್ದೇಶಕ ಟಿ.ಎಸ್‌.ನಾಗಾಭರಣ ಸುದ್ದಿಗೋಷ್ಠಿಗೆ ಬೆರಳೆಣಿಕೆಯಷ್ಟು ಪತ್ರಕರ್ತರು ಹಾಜರಾದರು. ಭರಣ ಅವರ ಸಿನಿಮಾವನ್ನು ಅಲ್ಲಿ ಯಾರೊಬ್ಬರೂ ನೋಡದ ಕಾರಣ ಪ್ರಶ್ನೆಗಳೆಲ್ಲ ಕನ್ನಡ ಚಿತ್ರೋದ್ಯಮದ ಸುತ್ತ ಗಿರಕಿ ಹೊಡೆದವು. ಒಲ್ಲದ ಮನಸ್ಸಿನಿಂದಲೇ ಅವಕ್ಕೆ ಉತ್ತರ ಕೊಟ್ಟ ಭರಣಾ ಹ್ಯಾಪುಮೋರೆ ಹಾಕಿಕೊಳ್ಳುವಂತಾದದ್ದು ವಿಪರ್ಯಾಸ. ಸುದ್ದಿಗೋಷ್ಠಿಗಳಲ್ಲಿ ಜಮೆಯಾಗಿದ್ದ ಮೂರು ಮತ್ತೊಂದು ಪತ್ರಕರ್ತರನ್ನು ನೋಡಿದ ನಂತರ, ‘ಮೌನಿ’ ಚಿತ್ರ ನಿರ್ದೇಶಕ ಬಿ.ಎಸ್‌.ಲಿಂಗದೇವರು ತಮ್ಮ ಸುದ್ದಿಗೋಷ್ಠಿಯನ್ನೇ ರದ್ದುಪಡಿಸಿದರು !

ಅನಂತ್‌ ಆ್ಯಬ್‌ಸೆಂಟು : ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ, ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ಮೂರು ಚಿತ್ರಗಳಲ್ಲಿ ನಟಿಸಿರುವ ಅನಂತ್‌ನಾಗ್‌ ಗೈರುಹಾಜರಿ. ಪನೋರಮಾದಲ್ಲಿರುವ ಸ್ಟಂಬಲ್‌, ಮೌನಿ ಹಾಗೂ ಅಮೋಲ್‌ ಪಾಲೇಕರ್‌ ನಿರ್ದೇಶನದ ಅನಾಹತ್‌ ಚಿತ್ರಗಳಲ್ಲಿ ಅನಂತನಾಗ್‌ ನಟಿಸಿದ್ದಾರೆ. ತಮಗೆ ವಿಮಾನದ ಟಿಕೆಟ್ಟುಗಳನ್ನು ಕೊಡಿಸುವುದಾಗಿ ಭರವಸೆ ಕೊಟ್ಟು, ಆಮೇಲೆ ಅಮೋಲ್‌ ಪಾಲೇಕರ್‌ ಕೈಕೊಟ್ಟ ಕಾರಣ ಅನಂತ್‌ ಇಲ್ಲಿಗೆ ಬರಲಿಲ್ಲ ಎಂಬುದು ಕಿರಿಕಿರಿಯ ಸುದ್ದಿ.

ಗೊಂದಲಪುರಿಯಲ್ಲಿ ದಾರಿ ತಪ್ಪಿದ ಮಕ್ಕಳಾದ ಸುದ್ದಿಮಿತ್ರರು

ದೆಹಲಿಯ ಮಾಧ್ಯಮ ಪ್ರತಿನಿಧಿಗಳಂತೂ ದಿಕ್ಕು ತಪ್ಪಿದಂತಾಗಿದ್ದರು. ಇಲ್ಲೇನು ನಡೆಯುತ್ತಿದೆ ಎಂಬುದರ ಪೂರ್ಣ ಮಾಹಿತಿ ಅವರಿಗೆ ದಕ್ಕಲೇ ಇಲ್ಲ. ‘ರೀ... ಇದರ ಬಗ್ಗೆ ಬರೆದರೆ ಯಾರು ಓದ್ತಾರ್ರೀ. ಶ್ರೀಲಂಕಾದ ಆಗಸ್ಟ್‌ ಸನ್‌ ಅದ್ಭುತ ಚಿತ್ರ. ಅದರಲ್ಲಿ ನಿರ್ದೇಶನ ಮೊನಚು, ಛಾಯಾಗ್ರಹಣ ಸೊಗಸು ಅಂತೆಲ್ಲ ಬರೆದರೆ, ನಮ್ಮವರು ಶ್ರೀಲಂಕಾ ಸಿನಿಮಾನ ಯಾವತ್ತಾದರೂ ನೋಡ್ತಾರಾ ಹೇಳಿ’ ಅಂತ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರು ಪ್ರಶ್ನೆ ಹಾಕಿದಾಗ ಅನೇಕರು ತಬ್ಬಿಬ್ಬು.

ಉದ್ಘಾಟನಾ ಸಮಾರಂಭವನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ಅಚ್ಚುಕಟ್ಟಾಗಿ ವರದಿ ಮಾಡಿದ್ದು ಅಚ್ಚರಿಯ ಸಂಗತಿ. ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ಜೊತೆಯಲ್ಲಿ ಚಿತ್ರೋತ್ಸವ ಉದ್ಘಾಟಿಸಿದ ನಗುಮೊಗದ ಸುಂದರಿ ಕರೀನಾ ಕಪೂರ್‌ ಫೋಟೋ ತೆಗೆಯುವುದರಲ್ಲೇ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯ ಪ್ರತಿನಿಧಿಗಳು ಸಂತೋಷ ಹಾಗೂ ತೃಪ್ತಿ ಪಟ್ಟುಕೊಂಡರು. ಟೈಮ್ಸ್‌ ಆಫ್‌ ಇಂಡಿಯಾದಂಥಾ ಕಾರ್ಪೊರೇಟ್‌ ಪತ್ರಿಕೆ ಉದ್ಘಾಟನಾ ಸಮಾರಂಭವನ್ನು ಮುಖಪುಟದ ಚಿಕ್ಕ ಸುದ್ದಿಯನ್ನಾಗಿ ಪ್ರಕಟಿಸಿ, ಕೈತೊಳೆದುಕೊಂಡಿತು. ಆಮೇಲಿನ ವಿದ್ಯಮಾನಗಳು ಅನೇಕ ಪತ್ರಿಕೆಗಳ ಪುಟ ಕಾಣಲೇ ಇಲ್ಲ.

ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ : ‘ಈಗ ಕಾಲ ಬದಲಾಗಿದೆ. ಪತ್ರಕರ್ತರು ಒಳ್ಳೆಯ ಸಿನಿಮಾ ನೋಡೋದಿಲ್ಲ. ಸಿನಿಮಾ ಪತ್ರಕರ್ತರಾಗುವುದಂತೂ ಕೊನೆಯ ಪ್ರಯಾರಿಟಿ. ಮುಂಚಿನ ದಿನಗಳಲ್ಲಿ ಸುದ್ದಿಗೋಷ್ಠಿ ಭರ್ತಿಯಾಗಿರುತ್ತಿತ್ತು. ಆರೋಗ್ಯಕರ ಪ್ರಶ್ನೆಗಳು ಏಳುತ್ತಿದ್ದವು. ಇಡೀ ಉದ್ದಿಮೆಯ ಪರಾಮರ್ಶೆ ಮಾಡುವಂಥಾ ಚರ್ಚೆ ನಡೆಯುತ್ತಿತ್ತು. ಆದರಿವತ್ತು ಎಲ್ಲ ಚಿಟಿಕೆ ಹೊಡೆದು ಹೋಗುವ ಪತ್ರಕರ್ತರು. ಸುದ್ದಿಗೋಷ್ಠಿಯೂ ಬೇಡ ಎಂಥದೂ ಬೇಡ. ಅದಕ್ಕೇ ಇಲ್ಲಿ ಪರಿಸ್ಥಿತಿ ಹೀಗಿದೆ’ ಎಂಬುದು ಮುಂಬಯಿಯಿ ಹಿರಿಯ ಸಿನಿಮಾ ವಿಮರ್ಶಕಿ ಮೈಥಿಲಿ ರಾವ್‌ ಅವರ ವಿಷಾದ.

ಭಣಗುಡುವ ಈ ಚಿತ್ರೋತ್ಸವದಲ್ಲಿ ‘ಮೌನಿ’ಯಂಥಾ ಸೊಗಸಾದ ಚಿತ್ರ ಕೂಡ ಮೌನವಾಗಿದ್ದು ಒಂದು ಚಿತ್ರ ದುರಂತವೇ ಸರಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada