»   » ಮಾಯವಾಗುವ ಪಾತ್ರಗಳು ಮತ್ತು ಧಾರಾವಾಹಿಯ ಜೀವಂತಿಕೆ

ಮಾಯವಾಗುವ ಪಾತ್ರಗಳು ಮತ್ತು ಧಾರಾವಾಹಿಯ ಜೀವಂತಿಕೆ

By Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಮೂಡಲಮನೆ' ಧಾರಾವಾಹಿಯ ನಾಣಿ, ಆತನ ಹೆಂಡತಿ ಶಾರದಾ, 'ಅಂಜಲಿ'ಯ ರೇಖಾ, 'ಪಾಪ ಪಾಂಡು' ಧಾರಾವಾಹಿಯ ಪಾಂಡು ಪಾತ್ರ, 'ಸಿಲ್ಲಿ-ಲಲ್ಲಿ'ಯ ಎಸ್‌ಎಮ್‌ಎಸ್‌ ಮತ್ತು ಸೂಜಿ ಪಾತ್ರಗಳಲ್ಲಿನ ಕಾಮನ್‌ ಫ್ಯಾಕ್ಟರ್‌ ಏನೆಂದು ಹೇಳಬಲ್ಲಿರಾ? ಈ ಎಲ್ಲ ಪಾತ್ರಗಳ ಪಾತ್ರಧಾರಿಗಳು ಬದಲಾಗಿದ್ದಾರೆ. ಸ್ವಲ್ಪದರಲ್ಲಿ 'ಮೂಡಲಮನೆ' ಧಾರಾವಾಹಿಯ ಪ್ರಮುಖ ಪಾತ್ರ ಪಾಂಡುರಂಗ ದೇಶಮುಖ ಕೂಡ 'ಪರಕಾಯ ಪ್ರವೇಶ'ದಿಂದ ಬಚಾವಾಗಿದೆ.

  ಪಾಂಡುರಂಗ ದೇಶಮುಖ ಪಾತ್ರಧಾರಿ ಕೆ.ಎಸ್‌.ಎಲ್‌.ಸ್ವಾಮಿ (ರವಿ) ಕೆಲವಾರಗಳ ಕಾಲ ನಾಪತ್ತೆಯಾಗಿ ಮತ್ತೆ ಗಡ್ಡಧಾರಿಯಾಗಿ ಮರಳುವ ಮೊದಲು ವೀಕ್ಷಕರ ನಾನಾ ಊಹಾಪೋಹಗಳಿಗೆ ಕಾರಣವಾಗಿದ್ದು ಸುಳ್ಳಲ್ಲ. ಇಲ್ಲಿ ಒಂದು ಗಮನಿಸಬೇಕಾದ ಅಂಶವೆಂದರೆ, ಪ್ರಮುಖ ಪಾತ್ರಧಾರಿಗಳೇ ಬದಲಾಗಿದ್ದಾರೆ. ನಿನ್ನೆ ಇದ್ದ ಪಾತ್ರಧಾರಿ ಇಂದಿರುವುದಿಲ್ಲ, ಇಂದಿದ್ದ ಪಾತ್ರಧಾರಿಯ ಮುಖ ನಾಳೆ ಕಾಣುತ್ತದೆಂಬುದರ ಗ್ಯಾರಂಟಿಯಿಲ್ಲ.

  ದಿನಕ್ಕೆ ಹತ್ತರಂತೆ ಪ್ರಸಾರವಾಗುವ 'ಮೆಗಾ' ಧಾರಾವಾಹಿಗಳ ಪಾತ್ರಧಾರಿಗಳ ಬದಲಾವಣೆ ಪೂರ್ವದಿಕ್ಕಿನಲ್ಲಿ ಸೂರ್ಯ ಹುಟ್ಟುವಷ್ಟೆ ಸಹಜವಾಗಿವೆ. ಪಾತ್ರಧಾರಿಗಳು ಇದ್ದಕ್ಕಿದ್ದಂತೆ ಮಾಯವಾಗುವುದು, ಮರುದಿನ ಬೇರೆ ನಟನೊಬ್ಬ ಆ ಪಾತ್ರಧಾರಿಯಾಗಿ ಹೊರಹೊಮ್ಮುವುದು ಪ್ರತಿ ಧಾರಾವಾಹಿಗಳಲ್ಲಿ ನಡೆದೇ ಇರುತ್ತದೆ. ಒಂದು ಕ್ಷಣ ವಿಚಾರಮಾಡಿದರೆ, ಈ ಪಾತ್ರಧಾರಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ, ಚಿಂತೆ ಮಾಡುವ ಅಗತ್ಯವೇ ಇರುವುದಿಲ್ಲ. ನಿರ್ಮಾಪಕ ನಿರ್ದೇಶಕರು ಕೂಡ ವೀಕ್ಷಕರನ್ನು 'ಟೇಕನ್‌ ಫಾರ್‌ ಅ ರೈಡ್‌' ಎಂಬಂತೆ ಪಾತ್ರಧಾರಿಗಳನ್ನು ಬದಲಾಯಿಸುತ್ತಿರುತ್ತಾರೆ.

  ಈ ನಾಪತ್ತೆಯಾಗುವ ಪ್ರಸಂಗಗಳಿಗೆ ಉತ್ತರ ತಿಳಿದುಕೊಳ್ಳಬೇಕೆಂದರೆ ಟಿವಿ ಉದ್ಯಮ, ಪ್ರತಿದಿನ ತಪ್ಪದೆ ಶೂಟ್‌ ಮಾಡಬೇಕಾದ ಒತ್ತಡಗಳು, ಒಣ ಪ್ರತಿಷ್ಠೆ, ಗುಂಪುಗಾರಿಕೆ, ನಟ-ನಟಿಯರ ದೈನಂದಿನ ಶೆಡ್ಯೂಲ್‌ಗಳು, ಅವರಿಗೆ ನೀಡಬೇಕಾದ ಹಣ, ಅವರ ಬದ್ಧತೆಗಳ ಸುತ್ತ ವಿಶ್ಲೇಷಣೆ ಮಾಡಬೇಕಾದ ಅಗತ್ಯವಿದೆ.

  ಒಂದು ಮೂಲದ ಪ್ರಕಾರ, 'ಮೂಡಲ ಮನೆ' ಧಾರಾವಾಹಿಯ ದೇಶಮುಖ ಪಾತ್ರಧಾರಿ ತಿಂಗಳಾನುಗಟ್ಟಲೆ ಕಾಣೆಯಾಗಲು ಸ್ವಾಮಿ ಮತ್ತು ನಿರ್ದೇಶಕಿ ವೈಶಾಲಿ ಕಾಸರವಳ್ಳಿ ನಡುವಿನ ವೈಮನಸ್ಸೇ ಕಾರಣ. ಇಬ್ಬರ ನಡುವಿನ ಒಣ ಪ್ರತಿಷ್ಠೆ ಧಾರಾವಾಹಿಯ ಓಟಕ್ಕೆ ಹೊಡೆತ ಬೀಳಲು ಕಾರಣವಾಯಿತು. ಕತೆ ನಾನಾ ದಿಕ್ಕಿನೆಡೆಗೆ ಪಸರಿಸಿ ವೀಕ್ಷಕರನ್ನು ದಾರಿತಪ್ಪಿಸಿತು. ಧಾರವಾಡದ ಕಡೆಯ ಭಾಷೆ ಮಾತಾಡುವವರ ಮತ್ತು ಬೆಂಗಳೂರಿನ ಭಾಷೆ ಮಾತನಾಡುವವರ ಗುಂಪುಗಾರಿಕೆಯಿಂದಾಗಿ ಮತ್ತೊಂದೆರಡು ಪಾತ್ರಗಳು ಉದುರಿ ಬಿದ್ದರೂ ಆಶ್ಟರ್ಯವಿಲ್ಲ.

  'ಪಾಪ ಪಾಂಡು' ಧಾರಾವಾಹಿಯ ಉದಾಹರಣೆ ತೆಗೆದುಕೊಂಡರೆ, ಮೊದಲ ಪಾಂಡು ಪಾತ್ರಧಾರಿ ಚಿದಾನಂದ್‌ ಅವರನ್ನು ನಾನಾ ಕಾರಣಗಳಿಂದಾಗಿ ಕಿತ್ತುಹಾಕಿ ಜಹಾಂಗಿರ್‌ರನ್ನು ತಂದು ಕೂಡಿಸಿದ್ದಾಯಿತು. ಜಹಾಂಗಿರ್‌ ಏನಾದರೂ ಕಿರಿಕ್‌ ಮಾಡಿದರೆ ಇನ್ನೊಬ್ಬ ಬರುತ್ತಾನೆ. ಪಾಚೊ ಅಂಥವರು ಬೇರೆ ಬೇರೆ ಗಂಡಂದಿರಿಗೆ ಹೆಂಡತಿಯಾಗಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಇಂಥ ಅಪಸವ್ಯಗಳಿಗೆ ವೀಕ್ಷಕರೂ ಹೊಂದಿಕೊಂಡು ಹೋಗಬೇಕು. ವಿಪರ್ಯಾಸ ನೋಡಿ, ಇದೀಗ 'ಪಾಂಡು' ಧಾರಾವಾಹಿಗೆ ಚಿದಾನಂದ್‌ರ ಮರುಪ್ರವೇಶವೂ ನಡೆದಿದೆ. ಜಹಾಂಗಿರ್‌ ಕೂಡ ಇರುತ್ತಾರಂತೆ. ಶ್ರೀಮತಿ ಪಾಚು ಇಬ್ಬರು ಪಾಂಡುಗಳನ್ನು ಹೇಗಾದರೂ ಸಹಿಸಿಕೊಳ್ಳಬಹುದು; ಬಡಪಾಯಿ ಪ್ರೇಕ್ಷಕರು?

  'ಅಯ್ಯೋ ಪಾಂಡು' ಚಿತ್ರಕ್ಕೆ ನಾಯಕನಾದಂದಿನಿಂದ 'ಪಾಪ ಪಾಂಡು' ಧಾರಾವಾಹಿ ಚಿತ್ರೀಕರಣಕ್ಕೆ ನಿಯಮಿತವಾಗಿ ಹಾಜರಾದದೇ ಇದ್ದದ್ದು ಚಿದಾನಂದ್‌ ಅವರ ಬದ್ಧತೆಯ ಬಗ್ಗೆ ಶಂಕೆ ಮೂಡಿದ್ದು ಸಹಜ. ಹಣ ಮತ್ತು ಜನಪ್ರಿಯತೆ ಹರಿದು ಬರುತ್ತಿದ್ದಂತೆ ಚಿದಾನಂದ್‌ ವಿವೇಕಕ್ಕೆ ಮಂಕುಬಡಿದು ಧಾರಾವಾಹಿಯ ನಿರ್ದೇಶಕರೊಂದಿಗೆ ಕ್ಯಾತೆ ತೆಗೆದರು. ಈಗ ಧಾರಾವಾಹಿಯೂ ಇಲ್ಲದೆ ಚಿತ್ರವೂ ಬಿಡುಗಡೆಯಾಗದೆ ತ್ರಿಶಂಕುವಿನಂತೆ ಸ್ಥಿತಿಯಾಗಿದ್ದು ಮುಂಬರುವ ನಟ-ನಟಿಯರಿಗೆ ಎಚ್ಚರಿಕೆ ಗಂಟೆಯಾಗಿದೆ.

  ದೊಡ್ಡ ಪರದೆ ಮತ್ತು ಚಿಕ್ಕ ಪರದೆಯನ್ನು ಹೋಲಿಸಿದರೆ ಚಿಕ್ಕ ಪರದೆಯೇ ನಿರ್ಮಾಪಕ, ನಿರ್ದೇಶಕ, ನಟರಿಗೆ ಅತ್ಯಂತ ಸೇಫ್‌ ಬೆಟ್‌ ಮತ್ತು ಹೆಸರು ಮಾಡಲು ಸಲೀಸಾದ ದಾರಿ. ಎಸ್‌. ನಾರಾಯಣ್‌, ಟಿ.ಎಸ್‌.ನಾಗಾಭರಣ, ಡಿ. ರಾಜೇಂದ್ರಬಾಬು, ನಾಗತಿಹಳ್ಳಿ ಚಂದ್ರಶೇಖರ ಸೇರಿದಂತೆ ಖ್ಯಾತನಾಮರೆಲ್ಲ ಕಿರುತೆರೆಗೆ ದಾಳಿ ಇಟ್ಟಿದ್ದು ಈ 'ಸೇಫ್‌ ಬೆಟ್‌'ಗೆ ಉತ್ತಮ ಉದಾಹರಣೆ. ಇವರಲ್ಲಿ ಬೆರಳೆಣಿಕೆಯಷ್ಟು ನಿರ್ದೇಶಕರು ಸೆಟ್‌ ಮೇಲೆ ಖುದ್ದಾಗಿ ಹಾಜರಿದ್ದು ಪ್ರತಿ ಎಪಿಸೋಡ್‌ಗಳನ್ನು ನಿರ್ದೇಶಿಸುತ್ತಾರೆನ್ನುವುದು ಸೆಟ್‌ನಿಂದ ಸೆಟ್‌ಗೆ ಹಾರಾಡುತ್ತಿರುವ ನಿಜಸಂಗತಿ. ಎಲ್ಲೋ ಟಿ.ಎನ್‌. ಸೀತಾರಾಂ ಮತ್ತು ಬಿ.ಸುರೇಶ್‌ರಂಥವರು ಮಾತ್ರ ಪ್ರತಿ ಹಂತದಲ್ಲೂ ನಿರ್ದೇಶನದ ಸಂಪೂರ್ಣ ಭಾರ ಹೊತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೆಲ ನಿರ್ದೇಶಕರು ಕಿರುತೆರೆಗೆ ಮಾತ್ರ ಸಮರ್ಪಿಸಿಕೊಂಡಿದ್ದಾರೆ, ಕೆಲವರಿಗೆ ಕಿರುತೆರೆ ಕೇವಲ ಸೈಡ್‌ ಬಿಸಿನೆಸ್‌. ಇದರಿಂದಾಗಿ ಕೆಲ ಖ್ಯಾತನಾಮ ನಿರ್ದೇಶಕರ ಸೋಕಾಲ್ಡ್‌ ಮೆಗಾ ಧಾರಾವಾಹಿಗಳು ಕೆಲ ವಾರಗಳ ನಂತರ ಮಕಾಡೆ ಮಲಗಿವೆ. ಸತ್ವಹೀನ ಧಾರಾವಾಹಿಗಳನ್ನು ವೀಕ್ಷಕರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಟಿ.ಎಸ್‌. ನಾಗಾಭರಣ ಅವರ 'ಗೆಳತಿ' ಧಾರಾವಾಹಿ ವಿಗತಿಗೊಂಡನಂತರ ಅವರು ಧಾರಾವಾಹಿಯೆಡೆಗೆ ತಲೆಹಾಕಬಾರದಿತ್ತು, ಆದರೆ ಮತ್ತೆ 'ಮಹಾಮಾಯಿ' ಎಂಬ ಮಾಯಾಲೋಕಕ್ಕೆ ಅವರು ಅಡಿಯಿತ್ತಿದ್ದಾರೆ. ಅದ್ಯಾವ ಗತಿ ಕಾಣುತ್ತದೋ ಕಾಲವೇ ನಿರ್ಧರಿಸುತ್ತದೆ.

  ಇಲ್ಲಿ ಒನ್ಸ್‌ ಅಗೇನ್‌ ನಿರ್ದೇಶಕರ ಬದ್ಧತೆ ಕುರಿತಂತೆ ಸಂದೇಹಗಳು ಸುಳಿದಾಡತೊಡಗುತ್ತವೆ. ಎರಡು ದೋಣಿಯ ಮೇಲೆ ಕಾಲಿಟ್ಟು ನಡೆಯುವ ಈ ನಿರ್ದೇಶಕರು ಎರಡರಲ್ಲಿ ಒಂದನ್ನು ಮುಳುಗಿಸಿಯೇ ದಡ ಸೇರುತ್ತಾರೆ.

  ಕಿರುತೆರೆ ಆಕರ್ಷಣೆ ಹೆಚ್ಚಾಗುತ್ತಿದ್ದಂತೆ ಹಳೆಯ ನೀರಿನ ಜೊತೆ ಹೊಸ ನೀರು ಹರಿದು ಬರುತ್ತಿದೆ. ಯುವ ನಿರ್ದೇಶಕ, ಯುವ ನಟಿಯರು ನೇಮ್‌, ಫೇಮ್‌ ಆಸೆಯಿಂದ 'ಹಿರಿತೆರೆಗಿಂತ ಕಿರುತೆರೆಯಲ್ಲೇ ಸ್ಯಾಟಿಸ್‌ಫ್ಯಾಕ್ಷನ್‌ ಜಾಸ್ತಿ' ಎಂಬ ಸ್ಲೋಗನ್‌ ಹೊತ್ತು ಕಿರುತೆರೆಗೆ ಹೆಜ್ಜೆ ಇಡುತ್ತಿದ್ದಾರೆ. ಆಕರ್ಷಣೆ ಪರಿಚಯಕ್ಕೆ, ಪರಿಚಯ ಗೆಳೆತನಕ್ಕೆ, ಗೆಳೆತನ ಪ್ರೀತಿಯೆಡೆಗೆ ತಿರುಗಿದಂಥ ನಿದರ್ಶನಗಳು ಕಿರುತೆರೆಯಲ್ಲಿ ಹೆಜ್ಜೆಗೊಂದು ಸಿಗುತ್ತವೆ. ಸಂಜಯ್‌-ಶಮಾ, ಸಿಹಿಕಹಿ ಚಂದ್ರು-ಸಿಹಿಕಹಿ ಗೀತಾ, ರವಿಶಂಕರ್‌-ಸಂಗೀತಾ ಕೈಗೆ ಸಿಗುವ ನಾಲ್ಕಾರು ಹೆಸರುಗಳು. ಗೆಳೆತನ, ಪ್ರೀತಿಗಿಂತ ದೈಹಿಕ ಆಕರ್ಷಣೆ ಕಿರುತೆರೆಯ ಇನ್ನೊಂದು ಮಗ್ಗಲು. ಕಾವ್ಯಾಂಜಲಿ ಧಾರಾವಾಹಿಯ ನಿರ್ದೇಶಕ ರವಿ ಗರಣಿ ಮತ್ತು ನಟಿ ಸುಚಿತ್ರಾ ನಡುವೆ ನಡೆದ ಪ್ರೇಮಪ್ರಕರಣ ಇನ್ನೊಂದು ಸೀರಿಯಲ್ಲಿಗೆ ಮಟೀರಿಯಲ್ಲು. ಇಂಥವರಿಗೆ ತೆರೆಯ ಮೇಲಿನ ಜೀವನ ತೆರೆಯ ಮರೆಯ ಜೀವನದಷ್ಟೇ ಸಹಜ.

  ಈ ಮೆಗಾ ಧಾರಾವಾಹಿಯ ಪ್ರತಿ ಎಪಿಸೋಡಗಳನ್ನು ಪ್ರತಿದಿನ ಶೂಟ್‌ ಮಾಡಬೇಕಾದಂಥ ಅನಿವಾರ್ಯತೆ ಕೂಡ ನಿರ್ದೇಶಕರಿಗಿದೆ. ಯಾವುದೇ ನಟ ಅಥವ ನಟಿ ಕೈಕೊಟ್ಟಿದ್ದೇ ಆದಲ್ಲಿ ಕಥಾ ವೇಗ ಮತ್ತು ಕಥೆಯ ದಿಕ್ಕನ್ನು ಬದಲಿಸಬೇಕಾಗುತ್ತದೆ. ಎಲ್ಲಿಯೋ ಸಾಗುತ್ತಿದ್ದ ಕಥೆ ಇದ್ದಕ್ಕಿದ್ದಂತೆ ಯಾವುದು ದಿಕ್ಕನ್ನು ಹಿಡಿಯುತ್ತದೆ. ಮೂಡಲ ಮನೆ ಧಾರಾವಾಹಿಗೆ ಆದ ಗತಿಯೂ ಇದೇನಾ?

  ಕನ್ನಡ ಮೆಗಾ ಧಾರಾವಾಹಿ ಪರಂಪರೆ ಪ್ರಾರಂಭವಾಗಿದ್ದು ಮೈನಾವತಿಯವರ ಮಗ ಗುರುದತ್‌ ಅವರ 'ಮನೆತನ'ದಿಂದ. ಹೆಂಗಳೆಯರು ಮದ್ಯಾಹ್ನದ ಸಮಯವನ್ನು ಈ ಸೀರಿಯಲ್ಲಿಗೆ ಮೀಸಲಿಡುವಂತೆ ಮಾಡಿತ್ತು. ಕಲ್ಯಾಣ್‌ಕುಮಾರ್‌, ಮೈನಾವತಿ ಮುಂತಾದವರ ಅಭಿನಯವನ್ನು ಇಂದಿಗೂ ಕೊಂಡಾಡುವ ವೀಕ್ಷಕರು ಶಿವರಾಂ ಅವರ ಪಾತ್ರಕ್ಕೆ ಸಂದ 'ಗೌರವ'ವನ್ನು ನೆನಪಿಟ್ಟಿರಲಿಕ್ಕಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಶಿವರಾಂ ಅವರ ಫೋಟೋ ಹಾಕಿ ಮಾಲೆ ಹಾಕಲಾಯಿತು. ಇಂಥ ಹಿರಿಯ ನಟರಿಗೇ ಈ ಮರ್ಯಾದೆ ದೊರೆತರೆ ಇನ್ನು ರಂಗಕ್ಕೆ ಹೊಸದಾಗಿ ಕಾಲಿಟ್ಟಂಥ ನಟ-ನಟಿಯರ ಪಾಡೇನು ಊಹಿಸಿ.

  ಸೀರಿಯಲ್ಲಿನ ಈ ಪಾತ್ರ ಮಂಗಮಾಯವಾಗುವ ಸನ್ನಿವೇಶದಿಂದಾದರೂ ಕಥೆಗೆ ಹೊಸ ತಿರುವು ಬರುತ್ತದೋ ಎಂದು ನೋಡುವಷ್ಟು ಟಿವಿ ಸೀರಿಯಲ್ಲುಗಳು ಬೋರು ಹೊಡೆಸುತ್ತಿವೆ.

  ಟಿ.ಎನ್‌. ಸೀತಾರಾಂ ಅವರಂಥ ನಿರ್ದೇಶಕರು ಮೇಲಿಂದ ಮೇಲೆ ವೀಕ್ಷಕರೊಂದಿಗೆ ಮಂಥನ, ಸಂವಾದ ನಡೆಸಿ ಪಾತ್ರಗಳನ್ನು, ಕಥೆಯನ್ನು ಜೀವಂತವಾಗಿರಿಸುತ್ತಾರೆ. ಇಲ್ಲದಿದ್ದರೆ ಧಾರಾವಾಹಿಯ ಪಾತ್ರಗಳೊಂದಿಗೆ ವೀಕ್ಷಕರು ಬೆಳೆಯುವುದೇ ಇಲ್ಲ. ಸೀರಿಯಲ್ಲುಗಳ ಪಾತ್ರಗಳನ್ನು ಜೀವಂತವಾಗಿರಿಸುವುದರಲ್ಲಿ ವೀಕ್ಷಕರ ಪಾತ್ರ ಕೂಡ ದೊಡ್ಡದಾಗಿರಬೇಕು. ಹಿಂದಿ ಮೆಗಾ ಸೀರಿಯಲ್‌ 'ಕ್ಯೂಕಿ ಸಾಸ್‌ ಭಿ ಕಭಿ ಬಹೂ ಥಿ'ನ ಪ್ರಮುಖ ಪಾತ್ರಧಾರಿ ತೀರಿಕೊಂಡಾಗ 'ಲೈವ್ಲಿ' ವೀಕ್ಷಕರು ನಿರ್ಮಾಪಕರ ಮೇಲೆ ಒತ್ತಡ ಆ ಪಾತ್ರಧಾರಿ ಮತ್ತೆ ಜೀವಂತವಾಗಿ ಬರುವಂತೆ ಮಾಡಿದ್ದರು. ಅದು ಪಾತ್ರ ಮತ್ತು ವೀಕ್ಷಕರೊಂದಿಗೆ ಇರುವ ಬಾಂಧವ್ಯಕ್ಕೆ ಸಾಕ್ಷಿ. ಇಂಥ ನಿದರ್ಶನಗಳು ಕನ್ನಡ ಧಾರಾವಾಹಿಗಳಲ್ಲಿ ಅದೆಷ್ಟು ಸಿಗುತ್ತವೆ? ಪಾತ್ರಗಳನ್ನು ಲೈವ್ಲಿಯಾಗಿಸುವಲ್ಲಿ ವೀಕ್ಷಕರ ಪಾತ್ರ ಎಷ್ಟು? ವೀಕ್ಷಕರೇ ಉತ್ತರಿಸಬೇಕು.

  English summary
  Frequent change in rolls has become order of the day in day-to-day Kannada serials. Actors, directors, technicians are lacking commitment, seriousness, selfless service in the industry.
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more