»   » ‘ಸ್ಪೀಲ್‌ಬರ್ಗ್‌ ನನ್ನ ರೋಲ್‌ ಮಾಡೆಲ್‌’ -ಮಾಸ್ಟರ್‌ ಕಿಶನ್‌

‘ಸ್ಪೀಲ್‌ಬರ್ಗ್‌ ನನ್ನ ರೋಲ್‌ ಮಾಡೆಲ್‌’ -ಮಾಸ್ಟರ್‌ ಕಿಶನ್‌

Subscribe to Filmibeat Kannada


ಮಕ್ಕಳ ದಿನಾಚರಣೆ ಅಂಗವಾಗಿ ಜಗತ್ತಿನ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ, ಗಿನ್ನಿಸ್‌ ದಾಖಲೆ ವೀರ ಕಿಶನ್‌ನನ್ನು ಮಾತನಾಡಿಸಿದಾಗ...

ಇವತ್ತು ಬಹಳಷ್ಟು ಮಕ್ಕಳಿಗೆ ರೋಲ್‌ ಮಾಡೆಲ್‌ ಆಗಿದ್ದೀಯ. ನಿನ್ನ ರೋಲ್‌ ಮಾಡೆಲ್‌ ಯಾರು?

ಸ್ಟೀವನ್‌ ಸ್ಪೀಲ್‌ಬರ್ಗ್‌. ಅವರ ಬಹಳಷ್ಟು ಚಿತ್ರ ನೋಡಿದ್ದೇನೆ. ಅವರು ಆಯ್ದುಕೊಳ್ಳುವ ಕತೆಗಳು, ಅದನ್ನು ತೆರೆಯ ಮೇಲೆ ತರುವ ರೀತಿ ತುಂಬಾ ಇಷ್ಟ. ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಭೇಟಿ ಮಾಡಿ, ಮಾತಾಡಬೇಕೆಂಬ ಆಸೆ ನನಗಿದೆ.

ಕೇರಾಫ್‌ ಫುಟ್‌ಪಾತ್‌ ತರಹದ ಚಿತ್ರವನ್ನೇ ಮಾಡಬೇಕು ಅನ್ನಿಸಿದ್ದೇಕೆ?

ರಸ್ತೆಬದಿಯಲ್ಲಿ ನಾನು ಬಹಳಷ್ಟು ಸ್ಲಂ ಮಕ್ಕಳನ್ನು ನೋಡಿದ್ದೇನೆ. ಅವರಿಗೆ ಶಾಲೆಗೆ ಹೋಗಿ ಓದುವ ಶಕ್ತಿಯಿಲ್ಲ. ಆದರೆ, ಅವರಿಗೆ ಓದಬೇಕೆಂಬ ಆಸೆ ಇದ್ದೇ ಇರುತ್ತದೆ. ಓದಬೇಕು ಎಂಬ ಛಲ ಇದ್ದರೆ ಯಾರನ್ನೂ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ನನ್ನ ಅನಿಸಿಕೆ. ಇದನ್ನು ನಾಲ್ಕು ಜನರಿಗೆ ತಿಳಿಸಬೇಕು ಎಂದರೆ ಅದಕ್ಕೆ ಚಲನಚಿತ್ರಕ್ಕಿಂತ ಬೇರೆ ಮಾಧ್ಯಮವಿಲ್ಲ. ಹಾಗಾಗಿ ಈ ಚಿತ್ರ ಮಾಡಿದೆ.

ಬಹಳಷ್ಟು ನೈಜ ಘಟನೆಗಳನ್ನು ಅಳವಡಿಸಿಕೊಂಡಿರುವ ಈ ಚಿತ್ರಕ್ಕೆ ನಿಜವಾದ ಸ್ಫೂರ್ತಿ ಥಾಮಸ್‌ ಆಲ್ವಾ ಎಡಿಸನ್‌, ಮೈಕೆಲ್‌ ಫ್ಯಾರಡೆ, ಕಲಾಂ ಮುಂತಾದವರು. ಅವರೆಲ್ಲಾ ತಮ್ಮ ಬಾಲ್ಯದಲ್ಲಿ ಬಹಳಷ್ಟು ಕಷ್ಟಪಟ್ಟು ಬೆಳೆದು ಬಂದವರು. ಅವರ ಜೀವನ ಬೇರೆಯವರಿಗೆ ಸ್ಫೂರ್ತಿಯಾಗಲೆಂದು ಈ ಚಿತ್ರ ಮಾಡಿದ್ದೇನೆ.

ಚಿತ್ರ ನಿರ್ದೇಶನ ಕಷ್ಟ ಅಲ್ಲವಾ? ಅದಕ್ಕೆ ಯಾವ ರೀತಿಯ ತಯಾರಿ ಮಾಡಿಕೊಂಡೆ?

ಕಷ್ಟ ಅಂತ ನನಗನಿಸಲಿಲ್ಲ. ನಾನು ಚಿಕ್ಕಂದಿನಿಂದಲೂ ಅಭಿನಯಿಸುತ್ತಿದ್ದೇನೆ. ಆಗೆಲ್ಲಾ ಬೇರೆ ಬೇರೆ ವಿಭಾಗಗಳ ಬಗ್ಗೆಯೂ ಸೂಕ್ಷ್ಮವಾಗಿ ನೋಡುತ್ತಿದ್ದೆ. ಯಾರು ಏನು ಕೆಲಸ ಮಾಡುತ್ತಿದ್ದಾರೆ ಎಂದು ಕುತೂಹಲದಿಂದ ತಿಳಿದುಕೊಳ್ಳುತ್ತಿದ್ದೆ. ಒಂದು ಚಿತ್ರ ಮಾಡುವಾಗ ಅದಕ್ಕೆ ಏನೇನು ಸಿದ್ಧತೆಗಳು ಬೇಕು, ಏನೇನು ಕೆಲಸಗಳಾಗಬೇಕು ಎಂದು ಗೊತ್ತಿದ್ದರಿಂದ ನಿರ್ದೇಶನ ಸುಲಭವಾಯಿತು. ನಾನು ನಿರ್ದೇಶಕನಾದಾಗ ಅದೆಲ್ಲಾ ಸಹಾಯಕ್ಕೆ ಬಂದಿತು.

ಮಕ್ಕಳ ಅಭಿವೃದ್ಧಿಗಾಗಿ ಚಿತ್ರ ಮಾಡಿರುವಂತೆ ನಿಜ ಜೀವನದಲ್ಲಿ ಕೆಲಸಗಳನ್ನು ಮಾಡಿದ್ದೀಯ?

ನನ್ನ ಪ್ರತಿ ಹುಟ್ಟುಹಬ್ಬದಂದು ಅಗತ್ಯವಿರುವ ಅನೇಕ ಮಕ್ಕಳಿಗೆ ಬ್ಯಾಗುಗಳನ್ನು ಕೊಡಿಸುತ್ತಾ ಬಂದಿದ್ದೇನೆ. ಕೆಲವರಿಗೆ ಸಹಾಯ ಮಾಡಿದ್ದೇನೆ.

ಕೇರ್‌ ಆಫ್‌ ಫುಟ್‌ಪಾತ್‌ ನಂತರದ ಜೀವನ ಹೇಗಿದೆ? ಗಿನ್ನಿಸ್‌ ದಾಖಲೆ ಸಿಕ್ಕ ಮೇಲೆ ಏನಾದರೂ ಬದಲಾವಣೆಯಾಗಿದೆಯಾ?

ಅಂಥ ಬದಲಾವಣೆಗಳೇನಾಗಿಲ್ಲ. ನಾನಿವತ್ತೂ ಅದೇ ಕಿಶನ್‌. ನಿರ್ದೇಶನ ಮಾಡುತ್ತೀನಿ ಎಂದಾಗ ಬಹಳಷ್ಟು ಜನ ನಾನು ಬಾಲ್ಯ ಕಳೆದುಕೊಳ್ಳುತ್ತೀನಿ ಎಂದಿದ್ದರು. ಹಾಗೇನಿಲ್ಲ. ನಿರ್ದೇಶನ ಸಮಯ ಬಿಟ್ಟರೆ ನನಗೆ ಹೇರಳವಾದ ಸಮಯ ಸಿಗುತ್ತಿತ್ತು. ಆಗೆಲ್ಲಾ ನಾನು ಬೇರೆಯವ ತರಹವೇ ಆಡುತ್ತಿದ್ದೆ, ಕುಣಿಯುತ್ತಿದ್ದೆ. ನಾನು ಬೇರೆ ಮಕ್ಕಳ ತರಹವೆ ನಾರ್ಮಲ್‌ ಆಗಿದ್ದೇನೆ. ನನ್ನ ಸ್ನೇಹಿತರು ಸಹ ನನ್ನ ಯಾವತ್ತೂ ನಿರ್ದೇಶಕ ಎಂದು ನೋಡಿಲ್ಲ.

ಮುಂದೆ ಚಿತ್ರರಂಗದಲ್ಲಿಯೇ ಉಳಿಯುತ್ತೀಯಾ? ಅಥವಾ?

ನಿರ್ದೇಶನ ಮಾತ್ರ ಬಿಡುವುದಿಲ್ಲ. ನಿರ್ದೇಶನದ ಜತೆಜತೆಗೆ ಥ್ರೀಡಿ ಗ್ರಾಫಿಕ್ಸ್‌ ಎಂಜಿನಿಯರ್‌ ಆಗುವ ಆಸೆಯಿದೆ.

ಬೇರೆ ಮಕ್ಕಳಿಗೆ ನಿನ್ನ ಸಂದೇಶವೇನು?

ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಆಗ ಯಾರೂ ತಡೆಯೋಕೆ ಸಾಧ್ಯವಿಲ್ಲ. ಪ್ರತಿಯಾಬ್ಬರು ಮೊದಲು ಮುಂ ಗುರಿ ಇಟ್ಟುಕೊಂಡರೆ ಏನು ಬೇಕಾದರೂ ಸಾಧಿಸಬಹುದು. ಹ ಒಂದು ಗುರಿ ಗೊತ್ತು ಮಾಡಿಕೊಳ್ಳಿ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada