»   » ಪುನೀತ್‌ನ ‘ಅಭಿ’ ಸೆಟ್ಟಲ್ಲಿ ರಾಜ್‌ ಅಂತರಂಗ-ಬಹಿರಂಗ

ಪುನೀತ್‌ನ ‘ಅಭಿ’ ಸೆಟ್ಟಲ್ಲಿ ರಾಜ್‌ ಅಂತರಂಗ-ಬಹಿರಂಗ

Posted By: *ಶಾಮ್‌
Subscribe to Filmibeat Kannada
Puneth rajkumars
ವರನಟ ರಾಜ್‌ಕುಮಾರ್‌ ಅವರ ಸದಾಶಿವನಗರದ ನಿವಾಸದಲ್ಲಿ ನ.14ರ ಗುರುವಾರ ಬೆಳಗ್ಗೆ ಪುನೀತ್‌ ನಾಯಕರಾಗಿ ಅಭಿನಯಿಸುತ್ತಿರುವ 'ಅಭಿ" ಸೆಟ್ಟೇರಿತು. ರವಿಚಂದ್ರನ್‌ ಕೆಮರಾ ಚಾಲನೆ ಮಾಡಿದರೆ, ವರನಟ ರಾಜ್‌ಕುಮಾರ್‌ ಕ್ಲಾಪ್‌ ನೆರವೇರಿಸಿದರು.

ಶಿವರಾಜ್‌, ರಾಘವೇಂದ್ರ, ಪಾರ್ವತಮ್ಮ ಸೇರಿದಂತೆ ರಾಜ್‌ ಕುಟುಂಬ ಹಾಗೂ ಹಿತೈಷಿಗಳು ಮುಹೂರ್ತ ಕಾರ್ಯಕ್ರಮದಲ್ಲಿ ಹಾಜರಿದ್ದು 'ಅಭಿ"ಗೆ ಶುಭಕೋರಿದರು. 'ಅಭಿ" ಚಿತ್ರದ ಶೂಟಿಂಗ್‌ ಡಿಸೆಂಬರ್‌ನಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಗಳಲ್ಲಿ ನಡೆಯಲಿದೆ.

ಮಲಯಾಳಿ ಮಾಂತ್ರಿಕ ದಿನೇಶ್‌ ಬಾಬು 'ಅಭಿ" ಮೂಲಕ ಇದೇ ಮೊದಲ ಬಾರಿಗೆ ರಾಜ್‌ ಕ್ಯಾಂಪ್‌ ಪ್ರವೇಶ ಪಡೆದಿದ್ದಾರೆ. ಚಿತ್ರದ ನಿರ್ದೇಶನ ಹಾಗೂ ಛಾಯಾಗ್ರಹಣ ದಿನೇಶ್‌ಬಾಬು ಅವರದೇ. ಈ ಮುನ್ನ ಚಿತ್ರಕ್ಕೆ 'ಕರ್ಣ" ಎಂದು ಹೆಸರಿಡಲು ಉದ್ದೇಶಿಸಿದ್ದರೂ, 'ಅಪ್ಪು" ಭಾರೀ ಯಶಸ್ಸು ಕಂಡದ್ದರಿಂದ ಕೊನೆ ಕ್ಷಣದಲ್ಲಿ ಕರ್ಣ 'ಅಭಿ"ಯಾಗಿ ಬದಲಾದ. ಅಪ್ಪು ಹಾಗೂ ಅಭಿ ; 'ಅ"ಕಾರ ಪುನೀತ್‌ಗೆ ಆಗಿಬರುತ್ತದಂತೆ!

ಅಪ್ಪು ಚಿತ್ರದಲ್ಲಿ ಯಶಸ್ವೀ ಸಂಗೀತ ನೀಡಿದ್ದ ಗುರುಕಿರಣ್‌ 'ಅಭಿ"ಯಲ್ಲೂ ಮುಂದುವರಿದಿದ್ದಾರೆ. ಅಂದಹಾಗೆ, 'ಅಭಿ"ಗೆ ನಾಯಕಿ ಇನ್ನೂ ನಿರ್ಧಾರವಾಗಿಲ್ಲ . ರಾಧಿಕಾನಾ ? ಇಲ್ಲ , ಪಾರ್ವತಕ್ಕ ಹೊಸ ಹುಡುಗೀನ ಹುಡುಕುತ್ತಿದ್ದಾರೆ ಎನ್ನುತ್ತದೆ ರಾಜ್‌ ಕ್ಯಾಂಪ್‌.

ಅಂತರಂಗ ಅರಳಿದ ಸಮಯ
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಿಂದ ವಿಮುಖವಾಗುತ್ತಿರುವ ವರನಟ ರಾಜ್‌ಕುಮಾರ್‌ 'ಅಭಿ" ಮುಹೂರ್ತ ಕಾರ್ಯಕ್ರಮದಲ್ಲಿ ಉಲ್ಲಸಿತರಾಗಿದ್ದರು. ಮಾತಿಗೆ ಕೂತರೆ ರಾಜ್‌ ಮಗುವಾಗುತ್ತಾರೆ ; ಮಗುವಿನ ಮುಗ್ಧತೆಯಲ್ಲೇ ಅಧ್ಯಾತ್ಮದ ಅಂಚಿಗೂ ನಡೆದುಬಿಡುತ್ತಾರೆ. ಗುರುವಾರ ಆದದ್ದೂ ಅದೇನೆ.

ಕನ್ನಡ ಚಿತ್ರರಂಗ ಹಾಗೂ ಅದರೊಟ್ಟಿಗೆ ತಾವು ಬೆಳೆದ ಬಂದ ದಿನಗಳ ಕುರಿತ ರಾಜ್‌ ಮಾತು, ಹಿನ್ನೋಟದ ಬಗೆಗಿನ ಸಿಂಹಾವಲೋಕನದಂತಿತ್ತು . ಪುಣೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಮುಂತಾದ ತರಬೇತಿ ಸಂಸ್ಥೆಗಳಿಂದ ಇವತ್ತಿನ ನಿರ್ದೇಶಕ/ಕಲಾವಿದರು ತರಬೇತಿ ಪಡೆದು ಸಿನಿಮಾ ಪ್ರವೇಶಿಸುತ್ತಾರೆ. ನಮ್ಮ ಕಾಲದವರಿಗೆ ರಂಗಭೂಮಿಯೇ ಗರಡಿಯಾಗಿತ್ತು. ನಾಟಕದ ಸ್ಟೇಜು ಕಟ್ಟುವವನಿಂದ ಹಿಡಿದು, ಕಲಾವಿದರು ತಂತ್ರಜ್ಞರವರೆಗೆ ಒಂದು ರೀತಿಯ ಬದ್ಧತೆ, ಹುಮ್ಮಸ್ಸು ತುಂಬಿರುತ್ತಿತ್ತು ಎಂದು ರಾಜ್‌ ಭೂತ ಹಾಗೂ ವರ್ತಮಾನವನ್ನು ಬೆಸೆಯುವ ಪ್ರಯತ್ನ ನಡೆಸಿದರು.

ರಂಗಭೂಮಿಯ ಮಾತು ಮುಂದುವರಿದಂತೆ ರಾಜ್‌ಗೆ ಮತ್ತೆ ನೆನಪಾದದ್ದು ಗುಬ್ಬಿವೀರಣ್ಣ. ಹಾಸ್ಯಪಾತ್ರಗಳಲ್ಲಿ ಗುಬ್ಬಿವೀರಣ್ಣ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಅವರ ಅಭಿನಯದ ತೀವ್ರತೆ ಯಾವ ಮಟ್ಟಿಗೆ ಇರುತ್ತಿತ್ತೆಂದರೆ, ನಕ್ಕು ಸುಸ್ತಾಗಿ ಅನೇಕ ಮಂದಿ ನಾಟಕ ನೋಡುವುದನ್ನು ಬಿಟ್ಟು ಹೊರಗೆ ಹೋಗಿಬಿಡುತ್ತಿದ್ದರು ಎಂದು ರಾಜ್‌ ಹೇಳಿದರು. ಇವತ್ತಿನ ಹಾಸ್ಯ ಅಧಃಪತನ ಮುಟ್ಟಿರುವ ಕುರಿತು ರಾಜ್‌ ಮಾತಿನಲ್ಲಿ ವಿಷಾದವಿತ್ತೆ ?

ರಾಜ್‌ ಮಾತು ವಾಚ್ಯ ಮಾತ್ರವಾಗಿರಲಿಲ್ಲ ; ಕಲಾವಿದನ ಅಪಾರ ಅನುಭವ, ಜೀವನಾನುಭವ ಪ್ರತಿ ಮಾತಲ್ಲೂ ಧ್ವನಿಸುತ್ತಿತ್ತು. ಕಲಾವಿದರಿಗೆ ಕನ್ನಡಿಯಾಗಬಲ್ಲ ರಾಜ್‌ ಮಾತುಗಳ ಒಂದೆರಡು ಸ್ಯಾಂಪಲ್‌ ನೋಡಿ :

  • ಮುಖವನ್ನು ನೋಡಿಕೊಳ್ಳಲು ಕನ್ನಡಿ ಬೇಕು. ಅದೇರೀತಿ ಕಲಾವಿದನಿಗೆ ತನ್ನನ್ನು ತಾನು ನೋಡಿಕೊಳ್ಳಲೊಂದು ಒಳಗನ್ನಡಿ ಬೇಕು.
  • ಹಸಿವು ಇಲ್ಲದೆ ಇರುವಾಗ ಮಾತ್ರ ಸೃಜನಶೀಲವಾದುದೇನಾದರೂ ಹುಟ್ಟಲು ಸಾಧ್ಯ. ಕಲಾವಿದ ಪರಿಪೂರ್ಣನಾಗಬೇಕಾದರೆ ಅವನಲ್ಲಿ ಹಸಿವು ಇರಬಾರದು. (ರಾಜ್‌ ಹೇಳಿದ್ದು ಹೊಟ್ಟೆಯ ಹಸಿವಿನ ಬಗ್ಗೆ . ಹಸಿವು ಎಂದರೇನೆಂದು ಅವರಿಗೆ ಚೆನ್ನಾಗಿ ಗೊತ್ತು !)
  • ಇಂದಿನ ಕಲಾವಿದರಿಗೆ ಮಾರ್ಗದರ್ಶನ ಬೇಕು. ಅದೇ ರೀತಿ ಎಲ್ಲೋ ಒಂದೆಡೆ ಕಡಿವಾಣವೂ ಬೇಕು. ಮಾರ್ಗದರ್ಶನ ಹಾಗೂ ಕಡಿವಾಣ ಎರಡಕ್ಕೂ ಬದ್ಧನಾದರೆ ಕಲಾವಿದ ಅರಳುತ್ತಾನೆ.
English summary
Puneth rajkumars new movie Abhi goes to sets. Dr. rajkumar speaks about theatre , cinema and commitment to art.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada