»   » ಸೃಜನಶೀಲ ತಂಡದ ಕಲಾತ್ಮಕ ಸಹಭಾಗಿತ್ವದಲ್ಲಿ ಸಿನಿಮಾ

ಸೃಜನಶೀಲ ತಂಡದ ಕಲಾತ್ಮಕ ಸಹಭಾಗಿತ್ವದಲ್ಲಿ ಸಿನಿಮಾ

Posted By: Staff
Subscribe to Filmibeat Kannada
Dr. U.R. Anantha Murthy
'ದಿವ್ಯ"ದ ನಂತರ ಯು.ಆರ್‌.ಅನಂತಮೂರ್ತಿ ಏನು ಬರೆಯುತ್ತಿದ್ದಾರೆ?
ಅನಂತಮೂರ್ತಿ ಏನು ಬರೆಯುತ್ತಿದ್ದಾರೊ ಗೊತ್ತಿಲ್ಲ , ದಿವ್ಯಮೌನದಲ್ಲಂತೂ ಮುಳುಗಿಲ್ಲ . ತಮ್ಮ ಇನ್ನೊಂದು ಕಥೆ ಸಿನಿಮಾ ಆಗುತ್ತಿರುವ ಕುತೂಹಲದಲ್ಲಿ ಅವರಿದ್ದಾರೆ. ತನ್ನ ಕಥೆ ದೃಶ್ಯರೂಪ ಹೊಂದುವ ಕುರಿತು ಕಥೆಗಾರನಿಗೆ ಕುತೂಹಲ ಇಲ್ಲದಿರುತ್ತಾ ? ಅಂದಹಾಗೆ, ಸಿನಿಮಾ ಆಗುತ್ತಿರುವ ಅನಂತಮೂರ್ತಿ ಅವರ ಕಥೆಯ ಹೆಸರು- 'ಮೌನಿ". ಹದಿನೆಂಟು ಪುಟಗಳ ಈ ಪ್ರಸಿದ್ಧ ಕಥೆಯನ್ನು ನೀವು ಓದಿದ್ದೀರಾ ?

ಕಿರುತೆರೆ ಧಾರಾವಾಹಿಗಳ ಮೂಲಕ ಮನೆ ಮನೆ ತಲುಪಿರುವ ಹಾಗೂ ದೃಶ್ಯ ಮಾಧ್ಯಮದಲ್ಲಿ ಪಳಗಿರುವ ಬಿ.ಎಸ್‌.ಲಿಂಗದೇವರು 'ಮೌನಿ"ಯನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ಲಿಂಗದೇವರು ಅವರ 'ಕಲ್ಯಾಣಿ" ಧಾರಾವಾಹಿ ಚಂದನ ಚಾನಲ್‌ನಲ್ಲಿ ಪ್ರಸಾರವಾಗುತ್ತಿದೆ. 'ಮೌನಿ" ಲಿಂಗದೇವರು ಅವರ ಮೊದಲ ಸಿನಿಮಾ. ಎನ್‌.ಶಿವಾನಂದಂ ನಿರ್ಮಾಪಕರು.

ಅನಂತಮೂರ್ತಿ ಅವರ ಕಥೆ ಸಿನಿಮಾ ಆಗುತ್ತಿರುವುದು ಇದೇ ಮೊದಲೇನಲ್ಲ . ಅವರ ಕಾದಂಬರಿ 'ಸಂಸ್ಕಾರ"ದ ಸಿನಿಮಾ ರೂಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು . ಗಿರೀಶ್‌ ಕಾರ್ನಾಡ್‌ ಹಾಗೂ ಬಿ.ವಿ.ಕಾರಂತರ ಸೃಜನಶೀಲತೆಯ ಕುಲುಮೆಯಲ್ಲಿ ಸಂಸ್ಕಾರಗೊಂಡ 'ಸಂಸ್ಕಾರ" ಸಿನಿಮಾ, ಕನ್ನಡ ಚಿತ್ರರಂಗದ ಸಂಕ್ರಮಣ ಕಾಲದ ನಾಂದಿ ಚಿತ್ರವೆನ್ನಬಹುದು. ಕಲಾತ್ಮಕ ಚಿತ್ರಗಳ ಪರಂಪರೆಗೆ ಚಾಲನೆ ಸಿಕ್ಕಿದ್ದು ಸಂಸ್ಕಾರದ ಮೂಲಕವೇ.

ಅನಂತಮೂರ್ತಿಯವರ ಕತೆಗಳಾದ 'ಘಟಶ್ರಾದ್ಧ" , 'ಬರ" ಹಾಗೂ 'ಅವಸ್ಥೆ" ಸಿನಿಮಾ ಆಗಿವೆ. ಈ ಸಿನಿಮಾಗಳು ಕೂಡ ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿವೆ ಎನ್ನುವ ವಿಷಯವೇ 'ಮೌನಿ"ಯ ಬಗೆಗೆ ಅಪಾರ ನಿರೀಕ್ಷೆಯನ್ನು ಹುಟ್ಟಿಸುತ್ತಿದೆ.

'ಮೌನಿ" ಚಿತ್ರದ ತಾರಾಗಣ ಇನ್ನೂ ಪಕ್ಕಾ ಆಗಿಲ್ಲ . ನಮಗೆ ಬಂದಿರುವ ವರ್ತಮಾನಗಳ ಪ್ರಕಾರ- ದತ್ತಣ್ಣ ಉರುಫ್‌ ಎಚ್‌.ಜಿ.ದತ್ತಾತ್ರೇಯ 'ಮೌನಿ" ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

'ಮೌನಿ" ನಿರ್ಮಾಣದಲ್ಲಿ ಒಂದು ಸೃಜನಶೀಲ ತಂಡವೇ ಭಾಗಿಯಾಗಿರುವುದು ಗಮನಾರ್ಹ. 'ಕನ್ನಡಪ್ರಭ" ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕಥೆಗಾರ ಜಿ.ಎಸ್‌.ಸದಾಶಿವ ಹಾಗೂ ತಂಡದ 'ಕಲಾತ್ಮಕ ಸಹಭಾಗಿತ್ವ"ದಲ್ಲಿ ಮೌನಿಯ ಚಿತ್ರಕತೆ-ಸಂಭಾಷಣೆಯ ಕೆಲಸ ನಡೆಯುತ್ತಿದೆ.

ವಿಭಿನ್ನ ದನಿಯ ಕತೆಗಾರರಾಗಿ ಪ್ರಸಿದ್ಧರಾಗಿರುವ ಜಿ.ಎಸ್‌.ಸದಾಶಿವ ಅವರಿಗೆ ಸಿನಿಮಾ ಸಹವಾಸ ಹೊಸತೇನಲ್ಲ . 'ಎಲ್ಲಿಂದಲೋ ಬಂದವರು", 'ಸಿಕ್ಕು" (ತೆರೆ ಕಂಡಿಲ್ಲ) ಹಾಗೂ 'ಆ್ಯಕ್ಸಿಡೆಂಟ್‌" ಚಿತ್ರಗಳ ಚಿತ್ರಕಥೆ-ಸಂಭಾಷಣೆಯಲ್ಲಿ ಸದಾಶಿವ ತೊಡಗಿಸಿಕೊಂಡಿದ್ದರು. ಇತ್ತೀಚೆಗೇಕೊ ಕಥೆ-ಸಿನಿಮಾ ಎರಡನ್ನೂ ಬಿಟ್ಟು ಮೌನವಾಗಿದ್ದ ಸದಾಶಿವ 'ಮೌನಿ"ಯ ಮೂಲಕ ಸಿನಿಮಾಗೆ ಮರಳುತ್ತಿದ್ದಾರೆ. ಕಥೆಯನ್ನೂ ಬರೆಯಲಿ ಎಂದು ಹಾರೈಸೋಣ. ಉಳಿದಂತೆ, 'ತಾಯಿ ಸಾಹೇಬ" ಹಾಗೂ 'ದ್ವೀಪ" ಚಿತ್ರಗಳ ಮೂಲಕ ಸ್ವರ್ಣ ಪರಂಪರೆಗೆ ಸೇರ್ಪಡೆಯಾಗಿರುವ ರಾಮಚಂದ್ರ ಅವರ ಛಾಯಾಗ್ರಹಣ 'ಮೌನಿ" ಚಿತ್ರಕ್ಕಿದೆ.

'ಮೌನಿ" ಸಿನಿಮಾಕ್ಕೆ ಸಂಬಂಧಿಸಿದ ವಿವರಗಳು ಯಾವುದೇ ಕ್ಷಣದಲ್ಲಿ ಅಧಿಕೃತವಾಗಿ ಹೊರಬೀಳಬಹುದು.

English summary
Mouni A short story by Dr. U.R. Anantha Murthy shall be made into a kannada film by B.S. Lingadevaru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada