ಸೈಲೆಂಟ್ ಆಗಿದ್ದ ಪ್ರಜ್ವಲ್ ದೇವರಾಜ್ 'ಗಲಾಟೆ'
ಸ್ಯಾಂಡಲ್ ವುಡ್ ನಲ್ಲಿ ಸಿಕ್ಸರ್ ಬಾರಿಸಿ ಸಕ್ಸಸ್ ಸ್ಟೋರಿಯೊಂದಿಗೆ ಸಾಗುತ್ತಿರುವ ಸೈಲೆಂಟ್ ಸುಂದರ, ದೇವರಾಜ್ ಮಗ 'ಪ್ರಜ್ವಲ್ ದೇವರಾಜ್' ಇದೀಗ ಗಲಾಟೆ ಪ್ರಾರಂಭಿಸಿದ್ದಾರೆ. ಅವರಿಗೇನು ಬಂತು ಕೇಡುಗಾಲ ಅನ್ನಬೇಡಿ. ಗಲಾಟೆ ಮಾಡು ಅಂದರೆ ಮಾಡದಿರುವುದು ಹೇಗೆ? ಪ್ರಜ್ವಲ್ ಗೆ 'ಎಂ.ಡಿ. ಶ್ರೀಧರ್' ಗಲಾಟೆ ಮಾಡಲು ಹೇಳಿದ್ದಾರೆ, ಅವರು ಮಾಡುತ್ತಿದ್ದಾರೆ. ವಿಷಯ ಇಷ್ಟೇ.
ಲೈಮ್ ಲೈಟ್ ನಲ್ಲಿರುವ ನಟ ಪ್ರಜ್ವಲ್ ದೇವರಾಜ್. ಈಗಷ್ಟೇ ಪ್ರಜ್ವಲ್-ಶ್ರೀಧರ್ ಜೋಡಿ 'ಸಾಗರ್' ಚಿತ್ರದ ಶೂಟಿಂಗ್ ಮುಗಿಸಿದೆ. ಇದರಲ್ಲಿ ಪ್ರಜ್ವಲ್ ಮೂರು ಸುರಸುಂದರಿಯರೊಂದಿಗೆ ರೊಮಾನ್ಸ್ ಮಾಡಿದ್ದಾರೆ. ಇದರ ಬೆನ್ನಿಗೇ ಈಗ 'ಗಲಾಟೆ' ಪ್ರಾರಂಭಿಸಲಿದ್ದಾರೆ.
ಈ ಹಿಂದೆ ಚೆಲ್ಲಾಟ, ಕೃಷ್ಣ, ಪೊರ್ಕಿ, ಜಾಲಿಡೇಸ್, ಸಾಗರ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ (ಹೆಚ್ಚಿನವು ರಿಮೇಕ್) ಖ್ಯಾತರಾಗಿರುವ ಶ್ರೀಧರ್, ಇದರಲ್ಲಿ ಪ್ರಜ್ವಲ್ ಸುತ್ತ ಅದೆಷ್ಟು ಸುಂದರಿಯರನ್ನು ಸುತ್ತಿಸುತ್ತಾರೋ!
"ಗಲಾಟೆ ಇದು ದೊಂಬಿಯ ಚಿತ್ರವಲ್ಲ. ಭಾವನಾತ್ಮಕ ಮತ್ತು ಹಾಸ್ಯಮಯ ಪ್ರಸಂಗಗಳ ಮಿಶ್ರಣ. ಪ್ರಜ್ವಲ್ ನಾಯಕ ಎಂಬುದು ಖುಷಿಗೆ ಕಾರಣ. ಯಾವುದೇ ಪಾತ್ರವನ್ನು ಬೇಕಾದರೂ ಲೀಲಾಜಾಲವಾಗಿ ಮಾಡಿ ಮುಗಿಸುವ ಅಪರೂಪದ ನಟರಲ್ಲಿ ಪ್ರಜ್ವಲ್ ಕೂಡ ಒಬ್ಬರು" ಎನ್ನುತ್ತಾರೆ ಶ್ರೀಧರ್. ಆದಷ್ಟು ಬೇಗ 'ಗಲಾಟೆ' ಪ್ರಾರಂಭವಾಗಲಿ ಎನ್ನುತ್ತಿದ್ದಾರೆ ಪ್ರಜ್ವಲ್ ಪ್ರೇಕ್ಷಕರು (ಒನ್ ಇಂಡಿಯಾ ಕನ್ನಡ)


Click it and Unblock the Notifications