»   » ನಾಯಕಿಯಾಗಿ ಚಿತ್ರರಂಗಕ್ಕೆ ಬೇಬಿ ಶ್ಯಾಮಿಲಿ

ನಾಯಕಿಯಾಗಿ ಚಿತ್ರರಂಗಕ್ಕೆ ಬೇಬಿ ಶ್ಯಾಮಿಲಿ

Subscribe to Filmibeat Kannada

ನಿಮಗೆ ಬೇಬಿ ಶ್ಯಾಮಿಲಿ(ಶಾಮಿಲಿ) ನೆನಪಿದ್ಯಾ? ಯಾರಿಗೆ ನೆನಪಿರೋಲ್ಲ ಹೇಳಿ ಅಂತೀರಾ. ಮುದ್ದು ಮುಖದ ಚೆಂದದ ಹುಡುಗಿ ಆಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಮಿಂಚಿದ ಬಾಲಪ್ರತಿಭೆ. ಕೇವಲ 2 ವರ್ಷದ ಮಗುವಾಗಿದ್ದಾಗ ಮಣಿರತ್ನಂ ಅವರ ನಿರ್ದೇಶನದ ಮನೋಜ್ಞ ಚಿತ್ರ ಅಂಜಲಿ ಯಲ್ಲಿ ಕಾಣಿಸಿಕೊಂಡ ಈ ಪುಟ್ಟ ಪೋರಿ, ಹಿಂತಿರುಗಿ ನೋಡಿದ್ದೆ ಇಲ್ಲಾ.

90 ರ ದಶಕದಲ್ಲಿ ಬೇಬಿ ಶ್ಯಾಮಿಲಿ ಎಲ್ಲಾ ವರ್ಗದ ಜನರಿಗೆ ಅಚ್ಚುಮೆಚ್ಚಿನ ಹುಡುಗಿಯಾಗಿ ಚಿತ್ರರಂಗವನ್ನು ಆಳಿದವರು. ಕನ್ನಡದಲ್ಲಿ ಭೈರವಿ, ಶಾಂಭವಿ, ಕರುಳಿನ ಕುಡಿ, ಹೂವು ಹಣ್ಣು , ಚಿನ್ನಾ ನೀ ನಗುತಿರು ಮುಂತಾದ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.ಈಗ ಬೇಬಿ ಶ್ಯಾಮಿಲಿ ಚಿತ್ರರಂಗಕ್ಕೆ ಮತ್ತೆ ಕಾಲಿರಿಸುತ್ತಿದ್ದಾರೆ. ಪ್ರತಿಭಾವಂತ ನಟ ಸಿದ್ದಾರ್ಥ್ ಜತೆ ತೆಲುಗು ಭಾಷೆಯ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಲಿದ್ದಾರೆ. ಬೊಮ್ಮರಿಲ್ಲು ಎಂಬ ಯಶಸ್ವಿ ಚಿತ್ರದ ಸಾಹಾಯಕ ನಿರ್ದೇಶಕ ಆನಂದ್ ರಂಗಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 20 ರ ಹರೆಯದ ಶ್ಯಾಮಿಲಿಯನ್ನು ಇನ್ಮುಂದೆ ಬೇಬಿ ಎಂದು ಕರೆದಿರಾ ಜೋಕೆ.

ಬೆಂಗಳೂರಿಗೂ ಬೇಬಿ ಶ್ಯಾಮಿಲಿ ಫ್ಯಾಮಿಲಿಗೂ ಒಂದು ರೀತಿಯ ನಂಟು. ಅಕ್ಕ ಶಾಲಿನಿ(ಖ್ಯಾತ ತಮಿಳು, ಮಲೆಯಾಳಂ ನಟಿ) ಹಾಗೂ ಬಾವ ಅಜಿತ್ (ಖ್ಯಾತ ತಮಿಳು ನಟ) ಅವರ ಜತೆ ಬಿಡುವಾದಾಗ ನಗರಕ್ಕೆ ವೀಕೆಂಡ್ ಮಜ ಅನುಭವಿಸಲು ಬರುವುದು ಸಾಮಾನ್ಯ. ಆದರೆ, ಬೇಬಿ ಶ್ಯಾಮಿಲಿಯನ್ನು ಆಗ ಕಂಡವರು, ಈಗ ಗುರುತಿಸುವುದು ತುಸು ಕಷ್ಟ. ಎಂಟು ವರ್ಷಗಳ ಹಿಂದೆ ರಾಜೀವ್ ಮೆನನ್ ನಿರ್ದೇಶನದ 'ಕಂಡು ಕೊಂಡೆನ್ ಕಂಡು ಕೊಂಡೆನ್ ' ತಮಿಳು ಚಿತ್ರದಲ್ಲಿ ತಬು, ಐಶ್ವರ್ಯ ರೈ ತಂಗಿಯಾಗಿ ಶ್ಯಾಮಿಲಿ ಕಾಣಿಸಿಕೊಂಡಿದ್ದರು.

ಶ್ಯಾಮಿಲಿ ಅವರ ಅಕ್ಕ ಶಾಲಿನಿ ಕೂಡ 3 ವರ್ಷದ ಬಾಲಕಿಯಾಗಿದ್ದಾಗ ಚಲನಚಿತ್ರದಲ್ಲಿ ಅಭಿನಯಿಸಿ, ಕೇರಳ ಸರ್ಕಾರದ ಶ್ರೇಷ್ಠ ಬಾಲನಟಿ ಪ್ರಶಸ್ತಿ ಗಳಿಸಿದ್ದರು. ಬೇಬಿ ಶ್ಯಾಮಿಲಿಗೆ ಕೂಡ ಪ್ರಥಮ ಚಿತ್ರಕ್ಕೆ ಪ್ರಶಸ್ತಿ ಪಡೆದು ಸಾಧನೆ ಮಾಡಿದವರು. ಈಗ ನಾಯಕಿಯಾಗಿ ಇನ್ನೊಂದುಇನ್ನಿಂಗ್ಸ್ ಶುರು ಮಾಡಿದ್ದಾರೆ ಅವರಿಗೆ ಶುಭವಾಗಲಿ, ಕನ್ನಡದಲ್ಲೂ ಅಭಿನಯಿಸುವಂತಾಗಲಿ ಎಂದು ನಮ್ಮ ತಂಡದ ಹಾರೈಕೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada