»   » 'ಆಂಧ್ರ ಹೆಂಡ್ತಿ' ರಮ್ಯಕೃಷ್ಣಗೆ ಹುಟ್ಟುಹಬ್ಬದ ಸಂಭ್ರಮ

'ಆಂಧ್ರ ಹೆಂಡ್ತಿ' ರಮ್ಯಕೃಷ್ಣಗೆ ಹುಟ್ಟುಹಬ್ಬದ ಸಂಭ್ರಮ

Posted By:
Subscribe to Filmibeat Kannada

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ರಮ್ಯಕೃಷ್ಣ ಅಂದರೆ ತಪ್ಪಾಗಲಾರದು! ಬರೀ ಕನ್ನಡಿಗರ ಮನವನ್ನಷ್ಟೇ ಅಲ್ಲ ಇಡೀ ದಕ್ಷಿಣ ಭಾರತದ ಚಿತ್ರರಸಿಕರ ಮನಗೆದ್ದ ನಾಯಕಿ. ಆಕೆಗೀಗ 41ರ ಪ್ರಾಯ ಎಂದರೆ ಕಾಲ ನಾಚುತ್ತದೆ, ಅಭಿಮಾನಿಗಳ ಮುಖ ಸೊರಗುತ್ತದೆ! ಸೋಮವಾರ 41ನೇ ವಸಂತಕ್ಕೆ ಅಡಿ ಇಟ್ಟ ಸಂದರ್ಭದಲ್ಲಿ ರಮ್ಯಕೃಷ್ಣ ಮೇಲೊಂದು ಇಣುಕು ನೋಟ!

''ಕೃಷ್ಣ ನೀ ಬೇಗನೆ ಬಾರೋ'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಮ್ಯಕೃಷ್ಣ ಹಲವಾರು ಯಶಸ್ವಿ ಕನ್ನಡ ಚಿತ್ರಗಳನ್ನು ದಯಪಾಲಿಸಿದ್ದಾರೆ. ಆ ಸಾಲಿಗೆ ರವಿಚಂದ್ರನ್ ಜೊತೆಗೆ ನಟಿಸಿದ ''ಗಡಿಬಿಡಿ ಗಂಡ'' ಹಾಗೂ ''ಮಾಂಗಲ್ಯಂ ತಂತುನಾನೇನ'', ಉಪೇಂದ್ರ ಜೊತೆಗಿನ ''ರಕ್ತ ಕಣ್ಣೀರು'' ಸೇರುತ್ತವೆ. ಆಕೆ ನಟಿಸಿದ ಇತರೆ ಕನ್ನಡ ಚಿತ್ರಗಳೆಂದರೆ ಸ್ನೇಹಾ, ಯಾರೆ ನೀ ಅಭಿಮಾನಿ, ಕೃಷ್ಣ ರುಕ್ಮಿಣಿ, ರಾಜ ನರಸಿಂಹ, ಏಕಾಂಗಿ, ಆಂಧ್ರ ಹೆಂಡ್ತಿ, ಬಾ ಬಾರೋ ರಸಿಕ. ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣವಂಶಿಯನ್ನು 2003ನೇ ವರ್ಷದಲ್ಲಿ ಮದುವೆಯಾದ ಬಳಿಕ ಆಕೆ ಥೇಟ್ 'ಆಂಧ್ರ ಹೆಂಡ್ತಿ' ಯಾದರು. ರಮ್ಯ ಕೃಷ್ಣ ದಂಪತಿಗಳೆಗೀಗ 3 ವರ್ಷದ ಹೃತ್ವಿಕ್ ಎಂಬ ಗಂಡು ಮಗುವಿದೆ.

ಪ್ರಸ್ತುತ ಹೈದರಾಬಾದ್ ನಲ್ಲಿ ನೆಲೆಸಿರುವ ರಮ್ಯಕೃಷ್ಣ ಹುಟ್ಟಿದ್ದು ಚೆನ್ನೈನಲ್ಲಿ.ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯ 200ಕ್ಕೂ ಹೆಚ್ಚು ಚಿತ್ರಗಳು ಆಕೆಯ ಖಾತೆಗೆ ಜಮೆಯಾಗಿವೆ. ಭರತನಾಟ್ಯಂ ಹಾಗೂ ಕೂಚಿಪೂಡಿ ನೃತ್ಯಗಳನ್ನು ಕಷ್ಟಪಟ್ಟು ಇಷ್ಟದಿಂದ ಕಲಿತವರು. ಆದರೆ ಆಕೆ ತಮ್ಮಲ್ಲಿನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವೆ ಒದಗಿ ಬರಲಿಲ್ಲ. ಕಾರಣ ತಮ್ಮ 13ನೇ ವಯಸ್ಸಿಗೆ ಸಿನಿಮಾದೊಂದಿಗೆ ನಂಟು ಅಂಟಿನಂತೆ ಬೆಸೆದುಕೊಂಡಿತು. 19ಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದೊಡನೆ ಅವಿನಾಭಾವ ಸಂಬಂಧ. ತೆಲುಗಿನ ಖ್ಯಾತನಾಮರಾದ ಎನ್ ಟಿಆರ್, ಎ ಎನ್ ಆರ್, ಶೋಭನ್ ಬಾಬು, ಕೃಷ್ಣ ಜೊತೆಗೂ ನಟಿಸಿದ ಹೆಗ್ಗಳಿಕೆ ರಮ್ಯಕೃಷ್ಣ ಅವರದು. ಪ್ರಸ್ತುತ ಆಕೆ ತೆಲುಗು, ತಮಿಳು ದೂರದರ್ಶನ ವಾಹಿನಿಗಳಲ್ಲಿ ಬ್ಯುಸಿಯಾಗಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada