ಸ್ಯಾಂಡಲ್ ವುಡ್ ಗೆ ಬಾಲಿವುಡ್ ಶೆಹೆನ್ ಷಾ ಅಮಿತಾಬ್?

ನಮ್ಮ ಕಲಾಸಾಮ್ರಾಟ್ ಎಸ್ ನಾರಾಯಣ್ ಅವರ ಪುತ್ರರತ್ನ ಪಂಕಜ್ ಮುಖ್ಯ ಭೂಮಿಕೆಯಲ್ಲಿರುವ 'ಮರೆಯಲಾರೆ' ಚಿತ್ರದಲ್ಲಿ ಅಮಿತಾಬ್ ನಟಿಸಲಿದ್ದಾರೆನ್ನುವುದು ಚಿತ್ರತಂಡದ ಹೇಳಿಕೆ. ಚಿತ್ರದ ನಿರ್ಮಾಪಕ ಶಿವಾನಂದ ಮಾದಸೆಟ್ಟಿ, ಇತ್ತೀಚಿಗೆ ಬಿಡುಗಡೆಗೊಂಡ 12 ತಾಸಿನಲ್ಲಿ ಚಿತ್ರೀಕರಣಗೊಂಡು ಗಿನ್ನಿಸ್ ದಾಖಲೆ ನಿರ್ಮಿಸಿದ ಪೊಲೀಸ್ ಸ್ಟೋರಿ 3 ಚಿತ್ರದ ನಿರ್ಮಾಪಕರು.
ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದ ಸೆಲ್ವ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಅಮಿತಾಬ್ ಚಿತ್ರದಲ್ಲಿ ನಟಿಸಲಿರುವುದರಿಂದ ಚಿತ್ರ ರಾಷ್ಟ್ರ ಮಟ್ಟದಲ್ಲಿ ಹೆಸರಾಗುತ್ತದೆ ಮತ್ತು ಬಿಗ್ ಬಿ ಚಿತ್ರದಲ್ಲಿ ನಟಿಸುತ್ತಿರುವುದು ನಮ್ಮ ಭಾಗ್ಯವೇ ಸರಿ ಅನ್ನುತ್ತಾರೆ ನಿರ್ಮಾಪಕ ಶಿವಾನಂದ ಮಾದಸೆಟ್ಟಿ.
ಈ ಹಿಂದೆ ಧ್ಯಾನ್ ಮತ್ತು ರಮ್ಯಾ ಪ್ರಮುಖ ಭೂಮಿಕೆಯಲ್ಲಿದ್ದ 'ಅಮೃತಧಾರೆ' ಚಿತ್ರದಲ್ಲಿ ಅಮಿತಾಬ್ ಅತಿಥಿಯಾಗಿ ನಟಿಸಿದ್ದರು. ಕ್ಯಾನ್ಸರ್ ಪೀಡಿತ ನಾಯಕಿಯ ಜೀವನದ ದೊಡ್ಡ ಬಯಕೆಯಂತೆ ನಾಯಕ ನಾಯಕಿಯನ್ನು ಅಮಿತಾಬ್ ಅವರನ್ನು ಒಮ್ಮೆ ಭೇಟಿ ಮಾಡುವ ಸನ್ನಿವೇಶದಲ್ಲಿ ಅವರು ಸುಮಾರು ಮೂರು ನಿಮಿಷಗಳಷ್ಟು ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಸೂಪರ್ ಹಿಟ್ ಆಗಿತ್ತು.
ವೀರು, ಚೈತ್ರದ ಚಂದ್ರಮ, ಚೆಲುವಿನ ಚಿಲಿಪಿಲಿ, ದುಷ್ಟ ಚಿತ್ರದ ನಂತರ ಪಂಕಜ್ ನಾರಾಯಣ್ ಅವರ ಐದನೇ ಚಿತ್ರವಿದು. ಈ ನಾಲ್ಕೂ ಚಿತ್ರಗಳಿಂದ ನಿರ್ಮಾಪಕರ ಕಿಸೆ ಖಾಲಿಯೂ ಆಗಲಿಲ್ಲ ತುಂಬಲೂ ಇಲ್ಲ. ಅಮಿತಾಬ್ ಈ ಚಿತ್ರದಲ್ಲಿ ನಟಿಸುತ್ತಾರಾ? ಕನ್ನಡಿಗರಿಗೆ ಮತ್ತೊಮ್ಮೆ 'ಮರೆಯಲಾರದ' ಅನುಭವ ನೀಡುವರಾ?


Click it and Unblock the Notifications











