ನಮ್ರತಾ ಶಿರೋಡಕರ್ ಮೇಲೆ ಸಿಬಿಐ ಕಣ್ಣು!
ಕನ್ನಡದ 'ಚೋರ ಚಿತ್ತ ಚೋರ' ಚಿತ್ರದಲ್ಲಿ ಅಣ್ಣಯ್ಯ ರವಿಚಂದ್ರನ್ ಜೊತೆ ಅಭಿನಯಿಸಿದ್ದ ಬಹುಭಾಷಾ ತಾರೆ ನಮ್ರತಾ ಶಿರೋಡ್‌ಕರ್ ಮೇಲೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಟಿಂಗ್ ಅಧಿಕಾರಿಗಳ (ಸಿಬಿಐ) ಕಣ್ಣು ಬಿದ್ದಿದೆ. ಈಕೆ ತೆಲುಗು ನಟ ಮಹೇಶ್ ಬಾಬು ಪತ್ನಿ ಎಂಬುದು ನಿಮ್ಮ ಗಮನಕ್ಕಿರಲಿ. ಇಷ್ಟಕ್ಕೂ ಈಕೆಯ ಮೇಲೆ ಸಿಬಿಐ ಅಧಿಕಾರಿಗಳ ಕಣ್ಣು ಏಕೆ ಬಿತ್ತೋ?
ಹೈದಾರಾಬಾದಿನ ಗಚ್ಚಿಬೋಲಿ ಪ್ರದೇಶದ ಈಕೆಯ ಐಷಾರಾಮಿ ವಿಲ್ಲಾ ಮೇಲೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ದಿವಂಗತ ವೈ ಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಎಲ್ಲೆಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಜಾಲಾಡುತ್ತಿರುವ ಸಿಬಿಐ, ಸಿನಿಮಾ ತಾರೆಗಳು ಇದರ ಲಾಭ ಪಡೆದಿರಬಹುದು ಎಂದು ಶಂಕಿಸಿ ಈ ರೇಡ್ ಮಾಡಿದೆ.
ಈಗಾಗಲೆ ತೆಲುಗಿನ ರಾಮ್ ಚರಣ್ ತೇಜ ಹಾಗೂ ಮಹೇಶ್ ಬಾಬು ಅವರನ್ನು ಸಿಬಿಐ ಪ್ರಶ್ನಿಸಿತ್ತು. ಈಗ ಮಹೇಶ್ ಬಾಬು ಪತ್ನಿ ಹೆಸರಿನಲ್ಲಿರುವ ವಿಲ್ಲಾ ಮೇಲೆ ದಾಳಿ ಮಾಡಿದೆ. ಇಷ್ಟೊಂದು ಆಸ್ತಿ ತಮಗೆ ಹೇಗೆ ಬಂತು ಎಂದು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ವಿಐಪಿ, ವಿವಿಐಪಿ ಮನೆಗಳ ಮೇಲೂ ಸಿಬಿಐ ಬಲೆ ಬೀಸಿದೆ. (ಏಜೆನ್ಸೀಸ್)


Click it and Unblock the Notifications











