»   » ಇಂತಿ ನಿಮ್ಮ ಪ್ರೀತಿಯ ದುನಿಯಾ ಸೂರಿ

ಇಂತಿ ನಿಮ್ಮ ಪ್ರೀತಿಯ ದುನಿಯಾ ಸೂರಿ

Subscribe to Filmibeat Kannada

''ಎಂದೂ ಎಂದೂ ಮುಗಿಯದ ಯಾವ ಪದಕ್ಕೂ ನಿಲುಕದ ನಿನಗೂ ಬರೆದು ಕಳಿಸಿದ ಖಾಲಿ ಖಾಲಿ ಕಾಗದ ಇಂತಿ ನಿನ್ನ ಪ್ರೀತಿಯ... ನಾನ್ಯಾರೋ...'' ಎಂದು ಯೋಗರಾಜ್ ಭಟ್ ಹಾಡು ಬರೆದುಕೊಡುವ ತನಕ ಚಿತ್ರದಲ್ಲಿ ಹಿಂಸೆ ಇತ್ತು. ಹಾಡಿನಲ್ಲಿ ಮಚ್ಚಿತ್ತು. ಈಗ ಎಲ್ಲವೂ ಬದಲಾಗಿದೆ. ಚಿತ್ರದಲ್ಲಿ ಹಿಂಸೆಯನ್ನು ತೋರಿಸಬಾರದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ " ಎಂದು ಮಾತಿಗಿಳಿದರು ನಿರ್ದೇಶಕ ಸೂರಿ.

ಗರುಡ

'ದುನಿಯಾ' ಸಿನೆಮಾದ ಮೂಲಕ ಕರ್ನಾಟಕದ ಮನೆ, ಮನ, ಹೃದಯ ಗೆದ್ದ ನಿರ್ದೇಶಕ ಸೂರಿಯ ಮತ್ತೊಂದು ಚಿತ್ರ ಸಿದ್ಧವಾಗಿದೆ. 'ದುನಿಯಾ' ಎಂಬ ನಿತ್ಯ ಬದುಕಿನ ಕಥೆ ನಾಯಕನಟ ವಿಜಯ್ ಹಣೆಬರಹ ಬದಲಾಯಿಸಿತು. ಈಗ ಶ್ರೀನಗರ ಕಿಟ್ಟಿ ಅಲಿಯಾಸ್ ಕೃಷ್ಣ 'ಇಂತಿ ನಿನ್ನ ಪ್ರೀತಿಯ' ಚಿತ್ರದ ನಾಯಕ. ಪ್ರತಿಭಾವಂತ ನಟ. ಆತನ ದುನಿಯಾ ಸಹಾ ಬದಲಾಗುವ ದಿನಗಳು ದೂರದಲ್ಲಿಲ್ಲ.

'ಗಿರಿ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಕಿಟ್ಟಿ ನಂತರ ಎರಡು ಮೂರು ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿದ್ದನಾದರೂ ಬಹಳಷ್ಟು ಜನ ಮರೆತೇ ಹೋಗಿದ್ದರು. 'ಬೈಟು' ನನಗಿಷ್ಟವಾದ ಚಿತ್ರ. ನಿರ್ದೇಶಕ ಸೂರಿ ನನ್ನ ಗೆಳಯ ಅನ್ನುವುದಕ್ಕಿಂತಲೂ ಗುರು ಅನ್ನುವುದರಲ್ಲಿ ತೃಪ್ತಿ ಇದೆ. ಸೂರಿ ನನ್ನಿಂದ ಚೆನ್ನಾಗಿ ಕೆಲಸ ತೆಗೆಸಿದ್ದಾರೆ. 'ಇಂತಿ...'ಯಲ್ಲಿ ಇಬ್ಬರು ನಾಯಕಿಯರ ಮುದ್ದಿನ ನಾಯಕನಾಗಿ ನಟಿಸಿದ್ದೇನೆ ಎನ್ನುತ್ತಾರೆ ಶ್ರೀನಗರ ಕಿಟ್ಟಿ.

ಸೂರಿ ಬಗ್ಗೆ ಮಾತನಾಡಬೇಕೆಂದರೆ ಭಯವಾಗುತ್ತದೆ. 'ದುನಿಯಾ' ಚಿತ್ರದ ಹುಚ್ಚು ಅವರನ್ನು ಇನ್ನೂ ಬಿಟ್ಟಿಲ್ಲ. ದುನಿಯಾ ಚಿತ್ರದ ಪೂರ್ಣಿ, ಲೂಸ್ ಮಾದ, ಶಿವಲಿಂಗು ಪಾತ್ರಗಳು ಹೇಗೆ ಖ್ಯಾತವಾದವೋ ಹಾಗೇ 'ಇಂತಿ...' ಯಲ್ಲೂ ಪಾತ್ರಗಳು ಹೃದಯ ತಟ್ಟುತ್ತವೆ ಎಂದು ರಂಗಾಯಣ ರಘು ಹೇಳುತ್ತಾರೆ. ಸೂರಿಗೆ ಯಾರಿಂದ ಹೇಗೆ ಕೆಲಸ ತೆಗೆಸಬೇಕು ಎನ್ನುವುದು ಚೆನ್ನಾಗಿ ಗೊತ್ತು ಎನ್ನುತ್ತಾರೆ ರಘು.

'ಇಂತಿ...'ಯಲ್ಲಿ ಭಾವನಾ ಮತ್ತು ಸೋನು ನಾಯಕಿಯರು. ಚಿತ್ರದ ಪೋಸ್ಟರ್‌ಗಳನ್ನು ನೋಡಿದರೆ ಭಾವನಾ ಅವರ ಮೈನವಿರೇಳಿಸುವ ಮೂಡ್‌ಗಳು ಹೃದಯ ಕಲಕುತ್ತವೆ. ಈ ಚಿತ್ರದಲ್ಲಿನ ಅವರ ನಟನೆ ಅಷ್ಟೊಂದು ಸಹಜವಾಗಿ ಮೂಡಿ ಬಂದಿದೆ. ಪ್ರಸ್ತುತ ಬಿ.ಕಾಂ ಓದುತ್ತಿರುವ ಮತ್ತೊಬ್ಬ ನಾಯಕಿ ಸೋನು ಮಾತನಾಡುತ್ತಾ ಸೂರಿಯನ್ನು ಅಂಕಲ್ ಎಂದು ಸಂಬೋಧಿಸಿದರು. ಬಾಯ್ತಪ್ಪಿ ಅಂದರೋ ಇಲ್ಲಾ ಸೂರಿಯ ಗಂಭೀರ ವದನ ಅವರನ್ನು ಹಾಗೆ ಕರೆಸಿಕೊಂಡಿತೋ ತಿಳಿಯಲಿಲ್ಲ. ಪಕ್ಕದಲ್ಲೇ ಇದ್ದ್ದ 'ಇಂತಿ...'ಯ ಸಂಗೀತ ನಿರ್ದೇಶಕ ಸಾಧು ಕೋಕಿಲ ಗೊಳ್ಳನೆ ನಕ್ಕಿ ''ಪಾಪ ಅವನಿಗೆ ಇನ್ನೂ ಮದುವೇನೇ ಆಗಿಲ್ಲಮ್ಮ, ನೀನು ಆಗಲೇ ಅಂಕಲ್ ಎಂದರೆ ಹೇಗೆ?'' ಎಂದು ನಾಯಕಿಗೆ ಕ್ಲಾಸ್ ತೆಗೆದುಕೊಂಡರು.

ನಿಜ ಹೇಳ ಬೇಕೆಂದರೆ, ಈ ಚಿತ್ರಕ್ಕೆ ಹಣ ತೊಡಗಿಸಿದ್ದಾರೆ ಅನ್ನುವ ಮಾತು ಪಕ್ಕಕ್ಕಿಟ್ಟರೆ ಯೋಗರಾಜ್ ಭಟ್ ಅದ್ಭುತ ಹಾಡುಗಳನ್ನು ರಚಿಸಿ ಕೊಟ್ಟಿದ್ದಾರೆ. ಮುಂದೆ ಯೋಗರಾಜ್ ಭಟ್ ಗೀತರಚನೆಕಾರರಾಗಿ ಬದಲಾಗಬಹುದೇನೋ!? ಈಗಾಗಲೇ 'ಇಂತಿ...' ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಫೆಬ್ರವರಿ ಕೊನೆಗೆ ಮುಂದೂಡಲ್ಪಟ್ಟಿದೆ. ಕೃತಕವಲ್ಲದ ಸಹಜ ಬೆಳಕನ್ನು ಬಳಸಿಕೊಂಡು ದುನಿಯಾ ಚಿತ್ರ ಹೇಗೆ ಮೂಡಿ ಬಂತೋ ಅದೇ ರೀತಿ 'ಇಂತಿ...'ಯನ್ನೂ ಸಹಾ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ ಛಾಯಾಗ್ರಾಹಕ ಸತ್ಯಹೆಗಡೆ.

ಒಟ್ಟಿನಲ್ಲಿ ಹೇಳಬೇಕೆಂದರೆ ತಮಿಳು, ತೆಲುಗು ಚಿತ್ರರಂಗಗಳಲ್ಲಿ ಮಣಿರತ್ನಂ, ಶಂಕರ್, ರಾಘವೇಂದ್ರ ರಾವ್, ಕೃಷ್ಣವಂಶಿ... ಯಂತಹ ನಿರ್ದೇಶಕರ ಚಿತ್ರಗಳಿಗೆ ಪ್ರೇಕ್ಷಕರು ಕಾತರಿಸುವಂತೆ ಸೂರಿ ಕನ್ನಡದಲ್ಲಿ ಆ ಕನಸು ಬಿತ್ತಿದ್ದಾರೆ. ಜೀವನದಲ್ಲಿ ತುಂಬಾ ಸೀರಿಯಸ್ಸಾಗಿ ಬಿಟ್ಟೆ ಕಣ್ರಿ. ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟು ದೊಡ್ಡ ಗಾಂಭೀರ್ಯ ಬೇಕಿರಲಿಲ್ಲವೇನೋ? ಎಂದು ಮೌನಕ್ಕೆ ಶರಣಾದರು ಸೂರಿ.

(ದಟ್ಸ್‌ಕನ್ನಡ ಸಿನಿವಾರ್ತೆ)
ಇಂತಿ ನಿನ್ನ ಪ್ರೀತಿಯ.....ಚಿತ್ರಪಟಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada