»   »  ಕುಹಕಿಗಳ ಬಾಯ್ಮಿಚ್ಚಿಸಿದ ಗುಂಡ್ರುಗೋವಿ

ಕುಹಕಿಗಳ ಬಾಯ್ಮಿಚ್ಚಿಸಿದ ಗುಂಡ್ರುಗೋವಿ

By: *ಜಯಂತಿ
Subscribe to Filmibeat Kannada
Sathya
'ಇವರು ಮೂರು ದಿನ ಶೂಟಿಂಗ್ ಮುಗಿಸ್ಕೊಂಡು ಖಾಲಿ ಮಾಡ್ಕೊಂಡು ಬರ್‍ತಾರೆ. ಈ ಸಿನಿಮಾ ಮುಗಿಯೋಕೆ ಸಾಧ್ಯವೇ ಇಲ್ಲ' ಹಾಗಂತ ಗಾಂಧಿನಗರದಲ್ಲಿ ಗೊತ್ತಿರುವವರೇ ಆಡಿಕೊಂಡರು. ಆ ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗಿ ಗೋಳೋ ಅಂತ ಅಳುತ್ತಿದ್ದ ಗುಂಪೊಂದು ಇತ್ತು. ಅದು ಹೊರಗೆ ಬಂದು, ಕಣ್ಣೊರೆಸಿಕೊಂಡು ಸಿನಿಮಾ ಮಾಡಿತು. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ. ಆ ತಂಡ ಮಾಡಿದ ಸಿನಿಮಾ 'ಗುಂಡ್ರಗೋವಿ'.

ನಿರ್ಮಾಪಕ ಟಿ.ಎನ್.ಗೋಪಾಲ ಕೃಷ್ಣ ಇದ್ದಕ್ಕಿದ್ದಂತೆ ಕಷ್ಟ ಮೈಮೇಲೆ ಎಳೆದುಕೊಂಡರು. ಕಾಸು ಇಲ್ಲದೇ ಹೋದಾಗ ಕಾರ್ಯಕಾರಿ ನಿರ್ಮಾಪಕ ಮಹೇಶ್ ಹಣ ಹೊಂದಿಸಿಕೊಟ್ಟರು. ಅದರ ಪರಿಣಾಮ ಸಿನಿಮಾ ಚಿತ್ರೀಕರಣ ಪೂರ್ಣ.

ಈ ಕಷ್ಟವನ್ನು ಇಡೀ ಚಿತ್ರತಂಡ ಮೊನ್ನೆ ಹಂಚಿಕೊಂಡು ನಿಟ್ಟುಸಿರಿಟ್ಟಿತು. ಚಿತ್ರದ ನಿರ್ದೇಶಕ ತಾರೇಶ್ ರಾಜ್. ಓಂ ಪ್ರಕಾಶ್ ರಾವ್ ಅವರ ಕಾರಿನ ಡ್ರೈವರ್ ಆಗಿದ್ದ ಇವರು ಮೊದಲಿಂದಲೂ ಕಥೆ ಬರೆಯುತ್ತಿದ್ದರು. ಕೇಳಲು ಮುಂದೆ ಬಂದವರಿಗೆ ಅದನ್ನು ಹೇಳುವುದು ನಡೆದೇ ಇತ್ತು. ನಟನಾಗುವ ಆಸೆಯಿಂದ ಗೋಪಾಲ ಕೃಷ್ಣ ಕಥೆ ಕೇಳಿದರು. ಅದನ್ನು ಕೇಳಿದ ಮೇಲೆ ತಾವೇ ಸಿನಿಮಾ ನಿರ್ಮಿಸಲು ಮುಂದಾದರು. ಚಿತ್ರದಲ್ಲಿ ಅವರು ಒಂದು ಮುಖ್ಯ ಪಾತ್ರವನ್ನೂ ನಿರ್ವಹಿಸಿದ್ದಾರೆ.

ನಾಯಕ ಸತ್ಯ ಕೂಡ ಕಷ್ಟವನ್ನು ಹಂಚಿಕೊಂಡು ಸುಖಪಟ್ಟರು. 'ಆ ದಿನಗಳು' ಚಿತ್ರದಲ್ಲಿ ಒಳ್ಳೆಯ ವಿಮರ್ಶೆ ಗಳಿಸಿದ್ದ ಅವರಿಗೆ ಮೊದಲು ನಿರ್ದೇಶಕರ ಮೇಲೆ ಅನುಮಾನವಿತ್ತಂತೆ. ಚಿತ್ರೀಕರಣ ಶುರುವಾದ ಎರಡು ಮೂರು ದಿನದಲ್ಲೇ ಆ ಅನುಮಾನ ಮಾಯವಾಗಿ ವಿಶ್ವಾಸ ಮೂಡಿದೆ. ನಾಯಕಿ ನಿತ್ಯಶ್ರೀ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಹಂಚಿಕೊಂಡರು. ಚಿತ್ರದಲ್ಲಿ ಅವರಿಗೆ ಬಜಾರಿ ಪಾತ್ರವಂತೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಒಳಗೊಂಡ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಅವರು ಮುಖ ಅರಳಿಸಿದರು.

ಏಪ್ರಿಲ್ ಹೊತ್ತಿಗೆ ಚಿತ್ರವನ್ನು ಬಿಡುಗಡೆ ಮಾಡಲು ಗೋಪಾಲ ಕೃಷ್ಣ ನಿರ್ಧರಿಸಿದ್ದಾರೆ. ಯಾರು ತಮ್ಮನ್ನು ಆಡಿಕೊಂಡಿದ್ದರೋ ಅವರೆಲ್ಲಾ ಬಂದು ಸಿನಿಮಾ ನೋಡಲಿ ಅನ್ನೋದು ಅವರ ಮುಕ್ತ ಆಮಂತ್ರಣ.

ಪೂರಕ ಓದಿಗೆ:
ಅರ್ಥವಿಲ್ಲದ ಶೀರ್ಷಿಕೆಗಳ ನಡುವೆ 'ಗುಂಡ್ರಗೋವಿ'!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada