twitter
    For Quick Alerts
    ALLOW NOTIFICATIONS  
    For Daily Alerts

    ಹ್ಯಾಟ್ರಿಕ್ ನಿರ್ದೇಶಕ ಶೇಷಾದ್ರಿರವರ ವಿಮುಕ್ತಿ

    By Staff
    |

    ಶೇಷಾದ್ರಿ ಮತ್ತೆ ಅಖಾಡಕ್ಕಿಳಿದಿದ್ದಾರೆ. ಮುನ್ನುಡಿ'ಯಲ್ಲಿ ಬ್ಯಾರಿ ಸಮುದಾಯದ ಅಸಹಾಯಕ ಹೆಣ್ಣುಮಕ್ಕಳ ಶೋಷಣೆಯ ಚಿತ್ರಣ, ಅತಿಥಿ'ಯಲ್ಲಿ ಭಯೋತ್ಪಾದನೆಯ ಕರಾಳಮುಖ, ಬೇರು' ಚಿತ್ರದಲ್ಲಿ ವ್ಯವಸ್ಥೆಯ ಪದರಗಳ ಶೋಧನೆ ಹಾಗೂ ತುತ್ತೂರಿ' ಚಿತ್ರಗಳಲ್ಲಿ ಮಕ್ಕಳ ಅಂತರಂಗಕ್ಕೆ ಕನ್ನಡಿ ಹಿಡಿದಿದ್ದ ಶೇಷಾದ್ರಿ ಈ ಸಲ ಮುಖಾಮುಖಿ ಆಗಿರುವುದು ಬದುಕು-ಸಾವುಗಳ ಜಿಜ್ಞಾಸೆಯಲ್ಲಿ.

    *ಜಯಂತಿ

    ಸತತವಾಗಿ ಮೂರು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ನಿರ್ದೇಶಕ ಎಂಬ ಪಟ್ಟ ಗಳಿಸಿರುವ ಶೇಷಾದ್ರಿ ಅವರ ಹೊಸ ಚಿತ್ರ ಎಲ್ಲರಲ್ಲಿ ಸಹಜ ಕುತೂಹಲ ಮೂಡಿಸಿದೆ.ಶೇಷಾದ್ರಿ ಹೊಸ ಸಿನಿಮಾದ ಹೆಸರು ವಿಮುಕ್ತಿ'. ಈ ಚಿತ್ರದ ಮೂಲಕ ಸಂಬಂಧಗಳ ಸಂಘರ್ಷವನ್ನು ಹಾಗೂ ಸಾವಿನ ಅಂಚಿನಲ್ಲಿ ನಿಂತವರ ಮಾನಸಿಕ ತೊಳಲಾಟಗಳನ್ನು ಶೇಷಾದ್ರಿ ಚಿತ್ರಿಸುತ್ತಿದ್ದಾರೆ.

    ಇತ್ತೀಚೆಗಷ್ಟೇ ವಾರಾಣಸಿಯಲ್ಲಿ ವಿಮುಕ್ತಿ'ಯ ಶೂಟಿಂಗ್ ನಡೆಸಿಕೊಂಡು ಬಂದಿರುವ ಶೇಷಾದ್ರಿ ಬಳಗ, ಉಳಿದರ್ಧ ಭಾಗದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲಿದೆ.

    ಕಾಶಿಯಲ್ಲಿ ಕೊನೆಯುಸಿರು ಎಳೆಯುವ ಮೂಲ? ಮೋಕ್ಷ ಸಾಧಿಸಬೇಕು ಎನ್ನುವ ಹಂಬಲ ಅನೇಕ ಶ್ರದ್ಧಾವಂತ ಹಿಂದೂಗಳದು. ಇಂಥ ಕೆಲವರು ಕಾಶಿಗೆ ಬಂದು ತಮ್ಮ ಕೊನೆಯ ದಿನಗಳನ್ನು ಮುಕ್ತಿಮಂದಿರದಲ್ಲಿ ಕಳೆಯುವುದುಂಟು. ಹಾಸ್ಟೆಲ್ ರೂಪದ ಈ ಮಂದಿರದಲ್ಲಿ ಹನ್ನೆರಡು ಕೋಣೆಗಳಿದ್ದು, ಅವುಗಳಲ್ಲಿ ತಂಗಲು ಸಾವಿನ ಅಂಚಿನಲ್ಲಿರುವವರಿಗೆ ಉಚಿತ ಅವಕಾಶವುಂಟು. ಆದರೆ ಈ ಅವಕಾಶ ಹದಿನೈದು ದಿನಗಳಿಗೆ ಮಾತ್ರ ಸೀಮಿತ. ಹದಿನೈದು ದಿನಗಳಲ್ಲಿ ಸಾವು ಬಾರದೆ ಹೋದರೆ ಮುಕ್ತಿಮಂದಿರವನ್ನು ತೆರವು ಮಾಡಬೇಕು (ಕೊಠಡಿಗಳಿಗೆ ಬೇಡಿಕೆ ಕಡಿಮೆಯಿರುವ ಸಂದರ್ಭದಲ್ಲಿ ಅವಧಿ ವಿಸ್ತರಿಸಲಾಗುವುದು). ಹೀಗೆ ಮುಕ್ತಿಮಂದಿರದಲ್ಲಿ ಸಾವು ಕಾಣದೆ ಹೊರಬೀಳುವ ವ್ಯಕ್ತಿಯ ಮಾನಸಿಕ ಸ್ಥಿತಿ ಹೇಗಿರುತ್ತದೆ? ಮಾನಸ ಸರೋವರದಲ್ಲಿನ ಆ ಅಲ್ಲಕಲ್ಲೋಲಕ್ಕೆ ವಿಮುಕ್ತಿ' ಕನ್ನಡಿ ಹಿಡಿಯುತ್ತದೆ.

    Bhavana in Vimukti movie
    ಕನ್ನಡಪ್ರಭದಲ್ಲಿ ಪ್ರಕಟವಾದ ಬರಹವೊಂದನ್ನು ಆಧರಿಸಿ ಶೇಷಾದ್ರಿ ವಿಮುಕ್ತಿಯ ಕಥೆ ಹೆಣೆದಿದ್ದಾರೆ. ಯಥಾಪ್ರಕಾರ ತಮ್ಮ ಮಿತ್ರರನ್ನು ಕಟ್ಟಿಕೊಂಡೇ ನವ್ಯ ಕ್ರಿಯೇಷನ್ಸ್' ಹೆಸರಿನಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ರಾಮಚಂದ್ರರ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತ ಚಿತ್ರಕ್ಕಿದೆ.

    ಅವಕಾಶಗಳ ಕ್ಷಾಮ'ಪೀಡಿತೆ ಭಾವನಾ ವಿಮುಕ್ತಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಅಪ್ಪನನ್ನು ವಿಪರೀತ ಹಚ್ಚಿಕೊಂಡ ಹೆಣ್ಣುಮಗಳ ಪಾತ್ರವದು. ತಂದೆಯ ಪಾತ್ರದಲ್ಲಿ ರಾಮಕೃಷ್ಣ ನಟಿಸುತ್ತಿದ್ದಾರೆ. ತನ್ನ ಮೇಲಿನ ಮಗಳ ವ್ಯಾಮೋಹ ಆಕೆಯ ವೈವಾಹಿಕ ಬದುಕಿಗೆ ತೊಡಕಾಗಿ ಪರಿಣಮಿಸುವುದನ್ನು ಅರಿತ ತಂದೆ ಮಗಳಿಂದ ದೂರಾಗುತ್ತಾನೆ. ಹಲವು ವರ್ಷಗಳ ನಂತರ ತನ್ನ ತಂದೆ ಜೀವಂತವಾಗಿರುವುದು ಮಗಳಿಗೆ ತಿಳಿಯುತ್ತದೆ. ಮುಂದೆ? ಅದು, ಬೆಳ್ಳಿತೆರೆಯಲ್ಲಿ ಸಾಕಾರಗೊಳ್ಳಬೇಕು. ಶೇಷಾದ್ರಿಯವರಂತೂ ಮತ್ತೊಂದು ಅರ್ಥಪೂರ್ಣ ಚಿತ್ರಕ್ಕೆ ಮುನ್ನುಡಿ' ಬರೆದಿದ್ದಾರೆ.

    Saturday, November 15, 2008, 16:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X